ಸಚಿವ ಸ್ಥಾನ ದೊರಕದ್ದಕ್ಕೆ ಬೇಸರ: ಸರ್ಕಾರದ ಮೇಲೆ ಒತ್ತಡ ಹೇರಲು ರಮೇಶ್ ಜಾರಕಿಹೊಳಿ ಮುಂದು

ಸಚಿವ ಸ್ಥಾನ ಸಿಗದ್ದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು, ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 
ಸುತ್ತೂರು ಮಠಕ್ಕೆ ವಿಶೇಷ ವಿಮಾನದಲ್ಲಿ ತೆರಳುತ್ತಿರುವ ರಮೇಶ್ ಜಾರಕಿಹೊಳಿ
ಸುತ್ತೂರು ಮಠಕ್ಕೆ ವಿಶೇಷ ವಿಮಾನದಲ್ಲಿ ತೆರಳುತ್ತಿರುವ ರಮೇಶ್ ಜಾರಕಿಹೊಳಿ

ಬೆಳಗಾವಿ: ಸಚಿವ ಸ್ಥಾನ ಸಿಗದ್ದಕ್ಕೆ ಬೇಸರಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು, ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. 

ಬೆಳಗಾವಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನಸ್ಸು ನೊಂದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಸತ್ಯ. ನನ್ನ ರಾಜಕೀಯ ಗಾಡ್ ಫಾದರ್ ದೇವೇಂದ್ರ ಫಡ್ನವೀಸ್ ಬಳಿ ಮನಸ್ಸಿನ ನೋವು ಹೇಳಿಕೊಂಡಿದ್ದೇನೆ. ಮುಂದಿನದ್ದನ್ನು ಮುಂಬೈಗೆ ಹೋಗಿಯೇ ಮಾತನಾಡುವೆ. ಬೆಳಗಾವಿ ಪಿಎಲ್'ಡಿ ಬ್ಯಾಂಕ್ ಚುನಾವಣೆಯಂದೇ ಪುಣೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಆಪರೇಷನ್ ಕಮಲದ ಚರ್ಚೆ ನಡೆಯಿತ್ತಿತ್ತು. ಆ ವೇಳೆಯೇ ನಾನು ನನ್ನ ಗಾಡ್ ಫಾದರ್'ಗೆ ಮುಂದೇನಾಗಬಹುದು ಎಂದು ಹೇಳಿದ್ದೆ. ಅದು ಈಗ ನಡೆಯುತ್ತಿದೆ ಎಂದು ನೆನಪಿಸಲು ಮುಂಬೈಗೆ ತೆರಳಿದ್ದೆ ಎಂದು ಹೇಳಿದ್ದಾರೆ. 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯವಾಗಿ ನನ್ನನ್ನು ಮುಗಿಸಲು ಶತ್ರುಗಳು ಆಲೋಚನೆ ನಡೆಸಿದ್ದಾರೆ. ಆದರೆ, ಅವರ ಆಲೋಚನೆ ತಪ್ಪು. ನನ್ನೊಂದಿಗೆ ನನ್ನ ಸಹೋದರರು, ನನ್ನ ಮಕ್ಕಳು ಹಾಗೂ ರಗಡ್ ಹುಲಿಗಳಿವೆ. ಯಾವುದೇ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. 

ಇದೇ ವೇಳೆ ಮಂತ್ರಿಗಿರಿ ಲಾಬಿ ಕುರಿತು ಸ್ಪಷ್ಟನೆ ನೀಡಿದ ಅವರು, ಮಂತ್ರಿಗಿರಿಗಾಗಿ ಲಾಬಿ ಮಾಡುವ ಮನುಷ್ಯ ನಾನಲ್ಲ. ಸರ್ಕಾರವನ್ನು ತೆಗೆದು ಸರ್ಕಾರ ರಚನೆ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಮಂತ್ರಿ ಮಾಡುವಂತೆ ಬೇರೆಯವರ ಮನೆ ಬಾಗಿಲಿಗೆ ಹೋಗುವ ಸಣ್ಣ ಮನುಷ್ಯನೂ ನಾನಲ್ಲ. ಮಂತ್ರಿ ಸ್ಥಾನಕ್ಕಾಗಿ ಸ್ವಾಮೀಜಿಗಳಿಂದ ಒತ್ತಡ ಹಾಕಿಸುವ  ಹಾಗೂ ಲಾಬಿ ಮಾಡುವ ಸ್ಥಿತಿ ನನಗೆ ಬಂದಿಲ್ಲ. ಇನ್ನೊಬ್ಬರನ್ನು ಸಚಿವರನ್ನಾಗಿ ಮಾಡುವ ಶಕ್ತಿ ಇರುವವರು ನಾನು. ಇನ್ನು ನಾನೇ ಸಚಿವನಾಗಬೇಕು ಎಂದು ಲಾಬಿ ಮಾಡುತ್ತೇನೆಯೇ ಎಂದು ಹೇಳಿದರು. 

ಸುತ್ತೂರು ಮಠಕ್ಕೆ ಭೇಟಿ
ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿಯವರು ಸಹೋದರ ಲಖನ್ ಜಾರಕಿಹೊಳಿ, ಅಳಿಯ ಅಂಬಿರಾವ್ ಜೊತೆಗೆ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸ್ವಾಮೀಜಿ ಬಳಿಗೆ ಬಂದಿದ್ದು ಅವರ ಪೂರ್ವಾಶ್ರಮದ ಮಾತೃಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲು. ಇಲ್ಲಿ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿಲ್ಲ. ಮಠಕ್ಕೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಆದರೆ, ಮುಂಬೈಗೆ ಹೋದದ್ದರಲ್ಲಿ ರಾಜಕೀಯವಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com