Online Desk
ಬೆಂಗಳೂರು: ನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ರಾಜಕೀಯ ಏಳಿಗೆ ಸಹಿಸದ ಜನರಿಂದಲೇ ಸಿಡಿ ಬಿಡುಗಡೆಯಾಗಿದೆ ಆದರೆ ಸಿಡಿಯ ವಿಚಾರ ನನಗೆ ಬಹಳ ಮೊದಲೇ ತಿಳಿದಿತ್ತು ಆದರೆ ಈಗ ಸಂಚು ಮಾಡಿ, ಕುಟುಂಬದ ಗೌರವ ಹಾಳು ಮಾಡಿದವರನ್ನು ಜೈಲಿಗಟ್ಟುವ ತನಕ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯವಾಗಿ ಮುಗಿಸಲು ಬಹಳ ದೊಡ್ಡ ಷಡ್ಯಂತರ ನಡೆಸಲಾಗಿದೆ ಇದಕ್ಕಾಗಿ 15- 20 ಕೋಟಿರೂ ವೆಚ್ಚ ಮಾಡಲಾಗಿದೆ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದರು.
ಯಾರ ಒತ್ತಡದ ಮೇರೆಗೂ ನಾನು ರಾಜಿನಾಮೆ ಕೊಟ್ಟಿಲ್ಲ, ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ರಾಜಿನಾಮೆ ನೀಡಿದ್ದೇನೆ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇದು ಒಬ್ಬ ಮಹಾನ್ ನಾಯಕನ ಕುತಂತ್ರವಾಗಿದೆ, ನಾಲ್ಕು ಜನ ಸೇರಿ ನಡೆಸಿದ್ದಾರೆ, ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ಯಶವಂತಪುರದ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ನಡೆದ ಷಡ್ಯಂತ್ರ ಇದಾಗಿದೆ. ಸಿಡಿ ಬಿಡುಗಡೆಯಾದ ನಂತರ ನನ್ನ ಬೆನ್ನಿಗೆ ನಿಂತ ಎಲ್ಲಾ ನಾಯಕರು ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ.
ಯುವತಿಗೆ 5 ಕೋಟಿ ರು. ಹಣದ ಜೊತೆಗೆ 2 ಐಷಾರಾಮಿ ಫ್ಲ್ಯಾಟ್ ಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ಸಿಡಿ ಬಿಡುಗಡೆಗೂ ಮೊದಲು 26 ಗಂಟೆಯಲ್ಲೇ ಸಿಡಿ ಬಿಡುಗಡೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನನಗೆ ಪೋನ್ ಮಾಡಿ ತಿಳಿಸಿತ್ತು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿಯೂ ತಿಳಿಸಿತ್ತು ಎಂದು ಹೇಳಿದರು.
ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆಯಾದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ದರೆ ಆ ತಾಯಿಯೇ ಶಿಕ್ಷೆ ವಿಧಿಸಲಿ ಎಂದು ನಂತರವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದೂ ಮಾಜಿ ಸಚಿವರು ಹೇಳಿದರು.