ಅಪ್ಪಮಕ್ಕಳ ಸಿಡಿ ಸಹ ಇದೆ, ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಕೆಲ ನಾಯಕರು ರಾಜ್ಯದಲ್ಲಿದ್ದಾರೆ: ಯತ್ನಾಳ್
ಅಪ್ಪಮಕ್ಕಳ ಸಿಡಿ ಸಹ ಕೆಲವರ ಬಳಿಯಿದ್ದು, ಆ ಸಿಡಿಗಳನ್ನು ಸಹ ಇಷ್ಟರಲ್ಲಿಯೇ ಬಿಡುಗಡೆ ಮಾಡುತ್ತಾರೆ. ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳ ಕೆಲ ರಾಜಕೀಯ ನಾಯಕರು ನಮ್ಮ ರಾಜದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Published: 10th March 2021 04:21 PM | Last Updated: 10th March 2021 04:38 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಅಪ್ಪಮಕ್ಕಳ ಸಿಡಿ ಸಹ ಕೆಲವರ ಬಳಿಯಿದ್ದು, ಆ ಸಿಡಿಗಳನ್ನು ಸಹ ಇಷ್ಟರಲ್ಲಿಯೇ ಬಿಡುಗಡೆ ಮಾಡುತ್ತಾರೆ. ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳ ಕೆಲ ರಾಜಕೀಯ ನಾಯಕರು ನಮ್ಮ ರಾಜದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನು ಬೇರೆ ಸಿಡಿಗಳು ನನ್ನ ಬಳಿ ಇವೆ ಎಂದಿದ್ದೆ. ಆದರೆ ಬಿಡುಗಡೆಯಾಗಿದ್ದೇ ಬೇರೆ ಸಿಡಿ. ಇನ್ನೂ ಉಳಿದ ಸಿಡಿಗಳು ಸಹ ಸದ್ಯದಲ್ಲಿಯೇ ಬರುತ್ತವೆ. ರಮೇಶ್ ಜಾರಕಿಹೊಳಿಯವರ ಸಿಡಿ ಇವರು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸುಮ್ಮನಿರುವುದಿಲ್ಲ. ರಮೇಶ್ ಜಾರಕಿಹೊಳಿ ಬಳಿ ಸಹ ಕೆಲ ಸಿಡಿಗಳು ಇರುಬಹುದು. ಇನ್ನೂ 23 ಸಿಡಿಗಳು ಇವೆಯೆಂಬ ಮಾಹಿತಿಯಿದ್ದು, ಒಂದೊಂದೇ ಸಿಡಿಗಳು ಬಿಡುಗಡೆಯಾಗುತ್ತವೆ. ಯಾವುದು ಉಳಿಯುವುದಿಲ್ಲ. ನಾನು ಸತ್ಯದರ್ಶನ ಬಿಡುಗಡೆ ಎಂದು ಹೇಳಿಕೆ ನೀಡಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗುತ್ತವೆ. ಸತ್ಯ ಎಂದಾದರೂ ಹೊರಗೆ ಬರಲೇಬೇಕು. ನನ್ನ ಬಳಿ ಯಾವ ಸಿಡಿಗಳೂ ಇಲ್ಲ ಎಂದರು.
ವಿಧಾನಸಭೆಯಲ್ಲಿ ಮೀಸಲಾತಿ ಕುರಿತು ಚರ್ಚೆಗೆ ಸ್ಪೀಕರ್ ನನಗೂ ಚರ್ಚೆಗೆ ಅವಕಾಶ ನೀಡಿದ್ದರು. ಮೀಸಲಾತಿ ಹೋರಾಟ ಕುರಿತು ಸಿಎಂ ನಿನ್ನೆ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದರಾದರೂ ಇಂದು ಮೀಸಲಾತಿ ಕುರಿತ ಚರ್ಚೆಯಲ್ಲಿ ಮಾತ್ರ ಸಿಎಂ ಭಾಗವಹಿಸದೇ ಕಾನೂನು ಸಚಿವ ಬೊಮ್ಮಾಯಿ ಮೂಲಕ ಸದನದಲ್ಲಿ ಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರ ಕೊಡಿಸಿರುವುದು ಅಸಮಾಧಾನ ತಂದಿದೆ ಎಂದರು.
ಸಿಎಂ ಯಡಿಯೂರಪ್ಪ ಹೇಳಿದ ಮಾತಿಗೆ ತಪ್ಪಿದ್ದಾರೆ. ಬಲಿಜ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಸಮುದಾಯದಲ್ಲಿ ನಾಯಕತ್ವ ಬೆಳೆದರೆ ಕಷ್ಟ ಎಂಬ ಅರಿವಿರಬೇಕು. ಅದಕ್ಕೆ ಅವರು ವ್ಯವಸ್ಥಿತವಾಗಿ ಈ ರೀತಿ ಮಾಡಿರಬಹುದು. ಸಿಎಂ ನಡೆದುಕೊಂಡ ರೀತಿ ಅಸಮಾಧಾನ ತಂದಿದೆ. ಸಿದ್ದರಾಮಯ್ಯ ನನ್ನ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಪಂಚಮಸಾಲಿ ಸಮುದಾಯದ ಮೇಲೆ ಬಿ.ಎಸ್.ಯಡಿಯೂರಪ್ಪಗೆ ಬೇಸರವಿದೆ. ಬರುವ ಸೋಮವಾರದಿಂದ ಮೀಸಲಾತಿಗಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ಮಾಡುತ್ತೇನೆ. ಸಿಎಂ ಉತ್ತರಿಸಲೇಬೇಕು ಎಂದು ಎಚ್ಚರಿಸಿದರು.