ಶಿವಮೊಗ್ಗ ಜಿಲ್ಲೆಗೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ, ಉತ್ತರ ಕರ್ನಾಟಕಕ್ಕೆ ಅನ್ಯಾಯ: ಬಿಜೆಪಿ ಶಾಸಕ ಯತ್ನಾಳ್
ಶಿವಮೊಗ್ಗ ಜಿಲ್ಲೆಗೆ ಬೆಣ್ಣೆ, ವಿಜಯಪುರ ಜಿಲ್ಲೆಗೆ ಸುಣ್ಣ ಕೊಟ್ಟಂತಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಾರತಮ್ಯ ಏಕೆ ಎಂದು ಆಡಳಿತ ಪಕ್ಷದ ಶಾಸಕರೇ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ವಿಧಾನಸಭೆಯಲ್ಲಿ ನಡೆಯಿತು.
Published: 17th March 2021 09:14 PM | Last Updated: 18th March 2021 12:50 PM | A+A A-

ಬಸವನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಶಿವಮೊಗ್ಗ ಜಿಲ್ಲೆಗೆ ಬೆಣ್ಣೆ, ವಿಜಯಪುರ ಜಿಲ್ಲೆಗೆ ಸುಣ್ಣ ಕೊಟ್ಟಂತಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಾರತಮ್ಯ ಏಕೆ ಎಂದು ಆಡಳಿತ ಪಕ್ಷದ ಶಾಸಕರೇ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಬಿಡುಗಡೆಯಾಗಿರುವ ಅನುದಾನ ಕುರಿತಂತೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಅವರಿಗೆ ಪ್ರಶ್ನೆ ಕೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 384 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಇಲ್ಲಿ ರಾತ್ರಿ ವೇಳೆ ವಿಮಾನ ಇಳಿಯುವುದು, ದೊಡ್ಡ ಆಸನಗಳುಳ್ಳ ವಿಮಾನ ಹಾರಾಟಕ್ಕೂ ಅವಕಾಶ ಕಲ್ಪಿಸಿದ್ದೀರಿ. ಅದೇ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗೆ 220 ಕೋಟಿ ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ. ನಮ್ಮ ಜಿಲ್ಲೆ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಬೆಳೆಗಳಿಗೆ ವಿಶ್ವ ಪ್ರಸಿದ್ಧಿಯಾಗಿದೆ. ಇಲ್ಲಿ ವಿಮಾನ ನಿಲ್ದಾಣ ಅತ್ಯಂತ ಕಿರಿಯದಾಗಿದೆ. ರಾತ್ರಿ ವಿಮಾನ ಇಳಿಯಲು ಅವಕಾಶವಿಲ್ಲ. ಇಲ್ಲಿ ಹೆಸರಿಗಷ್ಟೇ ವಿಮಾನ ನಿಲ್ದಾಣವಾಗುತ್ತಿದೆ. ಇಂತಹ ತಾರತಮ್ಯ ಮಾಡುವುದೇಕೆ ಎಂದು ಪ್ರಶ್ನಿಸಿದರು.
ನೀರಾವರಿಯಲ್ಲೂ ತಾರತಮ್ಯ ಮಾಡಲಾಗಿದೆ. ಅಭಿವೃದ್ಧಿ ವಿಷಯದಲ್ಲೂ ಇಂತಹ ಮಲತಾಯಿ ಧೋರಣೆ ಮಾಡುತಿದ್ದೀರಿ. ಈ ಸರ್ಕಾರ ರಚನೆಯಾಗಲು ಉತ್ತರ ಕಾರ್ನಾಟಕ ಕಾರಣ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಸುಪ್ರಸಿದ್ಧ, ಐತಿಹಾಸಿಕ ತಾಣಗಳಿವೆ. ದೇಶ-ವಿದೇಶಗಳಿಂದ ಇಲ್ಲಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಶಿವಮೊಗ್ಗಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರೋ ನಮಗೂ ಕೂಡ ಅಷ್ಟೇ ಕೊಡಿ ಎಂದು ಯತ್ನಾಳ್ ಪಟ್ಟು ಹಿಡಿದರು.
ನಮಗೆ ಪ್ರತಿಯೊಂದರಲ್ಲೂ ಅನ್ಯಾಯ ಮಾಡಲಾಗಿದೆ. ಇಂತಹ ತಾರತಮ್ಯ ಸರಿಯಾದ ಕ್ರಮವಲ್ಲ. ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ ಏಕೆ ಮಾಡಬೇಕು, ನಾವೇನು ಅನ್ಯಾಯ ಮಾಡಿದ್ದೇವೆ ಎಂದು ಪ್ರಶ್ನಿಸಿದರು. ನಾವು ಸದನದಲ್ಲಿ ಪ್ರಶ್ನೆ ಕೇಳುತ್ತಿದ್ದಂತೆ ಮುಖ್ಯಮಂತ್ರಿಗಳು ಎದ್ದು ಆಚೆ ಹೋಗುತ್ತಾರೆ. ಈ ಸರ್ಕಾರದಿಂದ ನಮಗೆ ಅನ್ಯಾಯವಾಗುತ್ತಿದೆ. ಮೊದಲು ತಾರತಮ್ಯ ಸರಿಪಡಿಸಬೇಕೆಂದು ಮನವಿ ಮಾಡಿದರು.
ಬಳಿಕ ಉತ್ತರಿಸಿದ ಆನಂದ್ಸಿಂಗ್ ಅವರು, ನಾವು ಯಾವುದೇ ವಿಮಾನ ನಿಲ್ದಾಣಕ್ಕೆ ತಾರತಮ್ಯ ಮಾಡಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಹೈಟೆನ್ಷನ್ ವೈರ್ ಹಾದು ಹೋಗುತ್ತಿದ್ದುದರಿಂದ ಅಲ್ಲಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಶಿವಮೊಗ್ಗ, ವಿಜಯಪುರ, ಹಾಸನ ಮಾತ್ರವಲ್ಲದೆ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತೇವೆ. ವಿಜಯಪುರಕ್ಕೆ ತಾರತಮ್ಯವಾಗಿದ್ದರೆ ಮುಖ್ಯಮಂತ್ರಿ ಅವರ ಜತೆ ಚರ್ಚಿಸುತ್ತೇನೆ. ನಾನೇ ಖುದ್ದು ವಿಜಯಪುರಕ್ಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಯಾವ ವಿಮಾನ ನಿಲ್ದಾಣಕ್ಕೂ ತಾರತಮ್ಯ ಮಾಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.