ಹಣಕಾಸು ಇಲಾಖೆ ಮೇಧಾವಿಗಳು ಅನ್ನ ತಿನ್ನುತ್ತಿದ್ದಾರಾ, ಮಣ್ಣು ತಿನ್ನುತ್ತಿದ್ದಾರಾ? ಎ.ಟಿ.ರಾಮಸ್ವಾಮಿ ಕಿಡಿ
ಇದೊಂದು ಪಾವಿತ್ರ್ಯತೆ ಇಲ್ಲದ ಬಜೆಟ್ ಆಗಿದೆ. ಇದನ್ನು ಒಪ್ಪಿದರೆ ಇತಿಹಾಸದಲ್ಲಿ ಕಳಂಕವಾಗಿ ಉಳಿಯಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
Published: 18th March 2021 08:56 AM | Last Updated: 18th March 2021 12:54 PM | A+A A-

ಎ.ಟಿ ರಾಮಸ್ವಾಮಿ
ಬೆಂಗಳೂರು: ಇದೊಂದು ಪಾವಿತ್ರ್ಯತೆ ಇಲ್ಲದ ಬಜೆಟ್ ಆಗಿದೆ. ಇದನ್ನು ಒಪ್ಪಿದರೆ ಇತಿಹಾಸದಲ್ಲಿ ಕಳಂಕವಾಗಿ ಉಳಿಯಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಂಡವಾಳ ವೆಚ್ಚ ಕಡಿಮೆ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯ?. ಸರ್ಕಾರ ಹಣಕಾಸು ಇಲಾಖೆಯ ಅಧೀನದಲ್ಲಿರಬಾರದು. ಎಲ್ಲದಕ್ಕೂ ಹಣಕಾಸು ಇಲಾಖೆಯತ್ತ ಬೊಟ್ಟ ಮಾಡಬಾರದು. ಸರಿಯಾದ ಆಡಳಿತ ಇಲ್ಲದಿದ್ದರೆ ಅದರ ದುಷ್ಪರಿಣಾಮವನ್ನು ರಾಜ್ಯದ ಜನರು ಅನುಭವಿಸಬೇಕಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ. ಕೃಷಿ, ಕೈಗಾರಿಕೆ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ. ಕೃಷಿ ಪ್ರಧಾನ ದೇಶದಲ್ಲಿ ದೊಡ್ಡ ದುರಂತ ಇದು. ಅಗ್ಗದ ಜನಪ್ರಿಯ ಯೋಜನೆಗಳು ಹೆಚ್ಚಾಗಿರುವುದರಿಂದ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇತ್ತೀಚಿನ ಆಯವ್ಯಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದೆ. ಇದಕ್ಕೆ ಕಾರಣ ಒಳ್ಳೆಯ ಆಡಳಿತ ಇಲ್ಲದಿರುವುದು. ನುಂಗಣ್ಣ ಥರದ ಆಡಳಿತ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಘಾತಕ್ಕೆ ಕಾರಣವಾಗುತ್ತದೆ ಎಂದರು.ನಾವು ಸಾಲ ತೆಗೆದುಕೊಂಡು ಸರ್ಕಾರ ನಡೆಸಿಕೊಂಡು ಹೋಗುವ ಪ್ರವೃತ್ತಿ ಮುಂದುವರೆಯುತ್ತಿದೆ. ರಾಜ್ಯದಲ್ಲಿ ಸಂಪತ್ತು ಸಾಕಷ್ಟಿದೆ. ಸ್ವರ್ಗ ಇಲ್ಲೇ ಇದೇ. ನರಕ ಮಾಡಲು ಹೊರಟಿದ್ದೀರಿ. ಆಡಳಿತ ವೈಫಲ್ಯವೇ ಕಾರಣ ಎಂದು ಕಿಡಿಕಾರಿದರು.
ನಾವು ಸಾಲ ತೆಗೆದುಕೊಂಡು ಸರ್ಕಾರ ನಡೆಸಿಕೊಂಡು ಹೋಗುವ ಪ್ರವೃತ್ತಿ ಮುಂದುವರೆಯುತ್ತಿದೆ. ರಾಜ್ಯದಲ್ಲಿ ಸಂಪತ್ತು ಸಾಕಷ್ಟಿದೆ. ಸ್ವರ್ಗ ಇಲ್ಲೇ ಇದೆ, ಆದ್ರೆ ನರಕ ಮಾಡಲು ಹೊರಟಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು. ರಾಜ್ಯದಲ್ಲಿ ಯಾರದೋ ಸಹಾಯದಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಯಡಿಯೂರಪ್ಪ ಕೇಂದ್ರದ ವಿರುದ್ಧ ಗುಡುಗಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಎಲ್ಲರೂ ಸೇರಿ ಒಂದು ನಿರ್ಣಯ ಕೈಗೊಂಡು ಕೇಂದ್ರದ ವಿರುದ್ಧ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಹತ್ತಾರು ಸಾವಿರ ಕೋಟಿ ರೂ. ಅಧಿಕಾರಿಗಳ ವಯಕ್ತಿಕ ಖಾತೆಯಲ್ಲಿ ಬಿದ್ದಿದೆ. ಇದಕ್ಕೆ ಯಾರು ಜವಾಬ್ದಾರರು? ಇದನ್ನು ಯಾರು ಕೇಳುವವರು? 4,421 ಕೋಟಿ ಪಿಡಿ ಅಕೌಂಟ್ನಲ್ಲಿ ಇದೆ. ಇದನ್ನು ಯಾರೂ ಕೇಳುವುದಿಲ್ಲ. ಹಣಕಾಸು ಇಲಾಖೆ ಏನು ಮಾಡುತ್ತಿದೆ. ಮೇಧಾವಿಗಳು ಕೂತಿದ್ದಾರಲ್ಲಾ. ಹಣಕಾಸು ಇಲಾಖೆಯವರು ಅನ್ನ ತಿನ್ನುತ್ತಿದ್ದಾರಾ? ಮಣ್ಣು ತಿನ್ನುತ್ತಾರಾ? ಅಧಿಕಾರ ನಡೆಸುವವರು ನೀವಾ, ಅವರಾ ಎಂದು ಕಿಡಿ ಕಾರಿದರು.