ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್ ಸೆಟ್ ದೂರವಿಡಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಬೇಡಿ. ತಮ್ಮ ಸುತ್ತ ಇರುವ ಬ್ಯಾಂಡ್ ಸೆಟ್ ಅನ್ನು ದೂರವಿಡಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ನೇರವಾಗಿ ಸಲಹೆ ನೀಡಿದ್ದಾರೆ.
Published: 19th March 2021 06:12 PM | Last Updated: 19th March 2021 06:12 PM | A+A A-

ರಮೇಶ್ ಕುಮಾರ್
ಬೆಂಗಳೂರು: ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಬೇಡಿ. ತಮ್ಮ ಸುತ್ತ ಇರುವ ಬ್ಯಾಂಡ್ ಸೆಟ್ ಅನ್ನು ದೂರವಿಡಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ನೇರವಾಗಿ ಸಲಹೆ ನೀಡಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಸಲಹೆ ರೂಪದಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ಯಾರೇ ಬಂದರು ಅವರ ಸುತ್ತ ಒಂದಿಷ್ಟು ಜನ ಸೇರಿಕೊಂಡಿರುತ್ತಾರೆ. ಹೀಗಾಗಿ ಅವರನ್ನು ಬ್ಯಾಂಡ್ ಸೆಟ್ ನವರು ಎಂದು ಕರೆಯುತ್ತಾರೆ. ಈ ಬ್ಯಾಂಡ್ ಸೆಟ್ ನವರು ಮುಖ್ಯಮಂತ್ರಿ ಅವರನ್ನು ಸುತ್ತುವರೆದು ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಹಂತದಲ್ಲಿ ನಾಯಕ ಮಾಡಬೇಕಾದ ಕೆಲಸಗಳನ್ನು ಮರೆತುಬಿಡುತ್ತಾನೆ ಎಂದರು.
ನೀವು ಶಿಕಾರಿಪುರದಿಂದ ಹೋರಾಟ ಮಾಡಿ ಬಂದವರು. ಹೀಗಾಗಿ ನಿಮ್ಮ ಸುತ್ತ ಇರುವ ಬ್ಯಾಂಡ್ ಸೆಟ್ ದೂರವಿಡಿ. ನಿಮ್ಮ ಶ್ರೀಮತಿ ಅವರ ಜತೆ ನಮಗೆ ಒಡನಾಟ ಇತ್ತು. ಆದರೆ ಇವತ್ತು ನಿಮ್ಮ ಕುಟುಂಬ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕುಟುಂಬದ ವ್ಯಾಮೋಹ ನಿಮ್ಮನ್ನು ಬಲಿ ಪಡೆಯಬಾರದು. ಹೀಗಾಗಿ ಕುಟುಂಬ ಆಡಳಿತದಿಂದ ದೂರವಿಡಿ ಎಂದು ಸಲಹೆ ನೀಡುತ್ತಿದ್ದೇನೆ. ಯಾಕೆಂದರೆ ನೀವು ಸಾರ್ವಜನಿಕ ಆಸ್ತಿ. ಆಡಳಿತದಲ್ಲಿ ಕುಟುಂಬ ಮೂಗು ತೊರಿಸದಂತೆ ಎಚ್ಚರಿಕೆ ವಹಿಸಿ ಎಂದರು.
ಈ ಮಾತನ್ನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ಹೇಳಿದ್ದೆ. ಹೀಗಾಗಿ ಅವರಿಂದ ನಿಷ್ಠುರಕ್ಕೂ ಒಳಗಾಗಿದ್ದೆ. ಹಿಂದೆ ಇದ್ದಂತಹ ಬ್ಯಾಂಡ್ ಸೆಟ್ ನವರು ಈಗ ಯಡಿಯೂರಪ್ಪ ಅವರ ಸುತ್ತಲೂ ಇದ್ದಾರೆ ಎಂದರು. ರಸ್ತೆ ಉಬ್ಬುಗಳ ಬಗ್ಗೆ ರಮೇಶ್ ಕುಮಾರ್ ಅಸಮಧಾನ ವ್ಯಕ್ತಪಡಿಸಿದರು. ಯಾವ ರಸ್ತೆಯಲ್ಲಿ ಎಷ್ಟು ಹಂಪ್ ಹಾಕಬೇಕು ಎಂಬ ಕುರಿತು ಗಮನಹರಿಸುವವರು ಯಾರು ಎಂದು ಪ್ರಶ್ನಿಸಿದರು. ಸರ್ಕಾರ ನಡೆಸುವವರ ಪಂಚೇಂದ್ರೀಯಗಳು ಎಚ್ಚರ ಇರಬೇಕು. ರಾಜ್ಯದ ಆಡಳಿತ ಜವಾಬ್ದಾರಿ ಹೊತ್ತವರು ನೀತಿ ರೂಪಿಸುತ್ತಾರೆ. ಕಾರ್ಯಾಂಗ ಅದನ್ನು ಆಚರಣೆಗೆ ತರುತ್ತದೆ. ಆದರೆ ಜನರ ಕಷ್ಟಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಆಡಳಿತ ನಡೆಸುವವರ ಪಂಚೆಯೇಂದ್ರಿಗಳು ಸರಿ ಇರಬೇಕು ಎಂದ ರಮೇಶ್ ಕುಮಾರ್, ಇದಕ್ಕೆ ರಾಜರ ಕಥೆಯನ್ನು ಉದಾಹರಣೆಯಾಗಿ ನೀಡಿದರು. ರಾಜ ಕಿರೀಟ ಹಾಕಿಕೊಂಡು ಮಂತ್ರಿಗೆ ಪ್ರಶ್ನೆ ಮಾಡುತ್ತಾನೆ. ಮಂತ್ರಿ ಹೇಳಿದ್ದೆನ್ನೇ ರಾಜ ಕೇಳುತ್ತಾನೆ. ಆದರೆ ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ಲ ಇಂದ್ರಿಯಗಳು ಆಕ್ಟಿವ್ ಆಗಿರಬೇಕು. ಜನರ ಸಂಕಷ್ಟ ಆಲಿಸುವವರಾಗಿರಬೇಕು ಎಂದರು. ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಹೊಗುತ್ತಾರೆ. ಅವರಿಗೆ ಎಲ್ಲ ಸೌಲಭ್ಯ ಒದಗಿಸಬೇಕು. ಆದರೆ ಆಸ್ಪತ್ರೆಯಲ್ಲಿ ಸತ್ತರೆ, ಬಾಕಿ ಹಣ ಪಾವತಿಸಬೇಕಿದ್ದರೆ ಹೆಣ ಕೊಡುವುದಿಲ್ಲ. ಇದು ಮಾನವಿಯತೆಯೇ?. ಈ ಕುರಿತು ಯಾವ ಕಾನೂನು ರೂಪಿಸುತ್ತೀರಿ ಎಂದು ಪ್ರಶ್ನಿಸಿದರು.
ಆಡಳಿತವಷ್ಟೇ ಅಲ್ಲದೇ ಪ್ರತಿಪಕ್ಷಗಳ ಕುರಿತಂತೆಯೂ ಬೆಳಕು ಚೆಲ್ಲಿದ ರಮೇಶ್ ಕುಮಾರ್, ವಿರೋಧ ಪಕ್ಷಗಳು ಜನರ ಕರುಳಿನ ಧ್ವನಿಯಾಗಬೇಕು. ಆಡಳಿತದಲ್ಲಿ ಅವಕಾಶ ಸಿಕ್ಕಿಲ್ಲ ಅಂತ ವಿರೋಧ ಪಕ್ಷವಾಗಬಾರದು. ಎಲ್ಲವನ್ನೂ ವಿರೋಧಿಸುವುದು ವಿರೋಧ ಪಕ್ಷದ ಕೆಲಸವಲ್ಲ. ಜನರು ಸಮಸ್ಯೆ ಅಧಾರದ ಮೇಲೆ ಧ್ವನಿ ಎತ್ತಬೇಕು ಎಂದು ಹೇಳಿದರು. ಪ್ರತಿಪಕ್ಷವಾಗಿ ಲೋಹಿಯಾ ಅವರ ಹೋರಾಟದ ಉದಾಹರಣೆ ನೀಡಿದ ರಮೇಶ್ ಕುಮಾರ್, ಲೋಹಿಯಾ ಅವರು ಸದನಕ್ಕೆ ಬಂದಾಗ ಹಲವಾರು ಜನರು ಮಾತನಾಡಿಕೊಂಡರು ಇಲ್ಲಿಯೂ ಅವರು ಹೋರಾಟ ಮಾಡಿ ಸದನ ನಡೆಯಲು ಬಿಡುವುದಿಲ್ಲ ಎಂದು. ಆದರೆ ಅವರು ಜನರ ಧ್ವನಿಯಾಗಿ ಕೆಲಸ ಮಾಡಿದರು ಎಂದರು.