ಸದನ ಸಮಿತಿಗೆ ಜೆಡಿಎಸ್ ಪಟ್ಟು; ನರ್ಸಿಂಗ್ ಕಾಲೇಜು ಪರವಾನಗಿ ವಿಷಯದ ಗದ್ದಲಕ್ಕೆ ಮೇಲ್ಮನೆ ಕಲಾಪ ಬಲಿ

ನರ್ಸಿಂಗ್ ಕಾಲೇಜುಗಳಿಗೆ ಪರವಾನಗಿ ವಿಷಯ ವಿಧಾನ ಪರಿಷತ್ ಕಲಾಪವನ್ನು ಬಲಿ ತೆಗೆದುಕೊಂಡಿತು. ಸದನ ಸಮಿತಿ ರಚನೆ ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ಜಟಾಪಟಿಯಿಂದಾಗಿ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಯಿತು.

Published: 19th March 2021 04:05 PM  |   Last Updated: 19th March 2021 04:05 PM   |  A+A-


legislative council

ವಿಧಾನ ಪರಿಷತ್

Posted By : Vishwanath S
Source : UNI

ಬೆಂಗಳೂರು: ನರ್ಸಿಂಗ್ ಕಾಲೇಜುಗಳಿಗೆ ಪರವಾನಗಿ ವಿಷಯ ವಿಧಾನ ಪರಿಷತ್ ಕಲಾಪವನ್ನು ಬಲಿ ತೆಗೆದುಕೊಂಡಿತು. ಸದನ ಸಮಿತಿ ರಚನೆ ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ಜಟಾಪಟಿಯಿಂದಾಗಿ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಯಿತು.

ಸದನ ಆರಂಭಗೊಳ್ಳುತ್ತಿದ್ದಂತೆ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರೆಸಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಮೂರೂ ಪಕ್ಷಗಳ ನಾಯಕರ ಸಭೆ ನಡೆಸಿ ಮನವೊಲಿಕೆಗೆ ಪ್ರಯತ್ನಿಸಿದರು. ಕಲಾಪ ಮತ್ತೆ ಆರಂಭಗೊಂಡರೂ ಜೆಡಿಎಸ್ ಧರಣಿ ಮುಂದುವರೆಸಿತು. ಸದನ ಸಮಿತಿ ರಚನೆ ಮಾಡುವಂತೆ ಪಟ್ಟು ಹಿಡಿಯಿತು.

ಈ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ನರ್ಸಿಂಗ್ ಕಾಲೇಜಿಗೆ ಪರವಾನಗಿ ಅನೇಕ ವರ್ಷಗಳಿಂದ ಕೊಡಲಾಗುತ್ತಿದೆ ನಾವು ಮೂರು ಹಂತಗಳಲ್ಲಿ ಪರಿಶೀಲಿಸಿ ಪರವಾನಗಿ ಕೊಡುತ್ತಿದ್ದೇವೆ. ಸೆನೆಟ್ ಸದಸ್ಯರ ಸಮಿತಿ ಶಿಫಾರಸ್ಸು ಮಾಡಲಿದೆ, ಅಕಾಡೆಮಿಕ್ ಕೌನ್ಸಿಲ್ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲಿದೆ. ಸಿಂಡಿಕೇಟ್ ಸಮಿತಿ ಅರ್ಜಿಗಳ ಪುನರ್ ಪರಿಶೀಲನೆ ಮಾಡಿ ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹೈಪವರ್ ಕಮಿಟಿ ಅಂತಿಮವಾಗಿ ಶಿಫಾರಸ್ಸು ಮಾಡಲಿದೆ ಮೂರು ಹಂತದಲ್ಲಿ ಪರಿಶೀಲಿಸಿ ನಾವು ಪರವಾನಗಿ ಕೊಡಲಿದ್ದೇವೆ ಎಂದರು.

ಅನುಭವ ಇಲ್ಲದವರು ಕಂತೆ ಕಂತೆಯಾಗಿ ನರ್ಸಿಂಗ್ ಕಾಲೇಜಿಗೆ ಅನುಮತಿ ನೀಡಿದ್ದಾರೆ ಅದರ ಫಲವನ್ನು ಈಗ ನಾವು ಅನುಭವಿಸುತ್ತಿದ್ದೇವೆ, ಹಿಂದೆ 300 ಪರವಾನಗಿಗಳನ್ನು ಕೊಟ್ಟಾಗ ಯಾಕೆ ಯಾರೂ ಸದನ ಸಮಿತಿ ಕೇಳಲಿಲ್ಲ? ಸರ್ಕಾರ ಎಲ್ಲಿ ಎಡವಿದೆ, ಎಲ್ಲಿ ಭ್ರಷ್ಟಾಚಾರ ನಡೆದಿದೆ, ತಾಂತ್ರಿಕವಾಗಿ ಎಲ್ಲಿ ತಪ್ಪು ಮಾಡಿದ್ದೇವೆ ಎಂದು ತೋರಿಸಿ, ಹೈಪವರ್ ಸಮಿತಿ ಯಾರೂ ಕೇಳಿಲ್ಲ ಆದರೂ ನಾವೇ ಮಾಡಿದ್ದೇವೆ, ಸಮಿತಿ ಶಿಫಾರಸ್ಸು ಮಾಡಿದ್ದಕ್ಕಿಂತ ಕಡಿಮೆ ಸಂಖ್ಯೆಯಲ್ಕಿ ಪರವಾನಗಿ ನೀಡಿದ್ದೇವೆ. ಹೆಚ್ಚು ನೀಡಿದ್ದರೆ ಕೇಳಬಹುದಿತ್ತು. ವಿವಿ ಶಿಫಾರಸ್ಸು ಮಾಡಿದ್ದನ್ನು ಮೂರು ಹಂತದಲ್ಲಿ ಪರಿಶೀಲಿಸಿ ಪರವಾನಗಿ ನೀಡಲಾಗಿದೆ. ಇದರಲ್ಲಿ ಎರಡೂ ಸದನದ ಸದಸ್ಯರ ಸಂಸ್ಥೆಗಳಿಲ್ಲವಾ? ಇದು ಕೂಡ ಒಂದು ಸೇವೆ, ವಿದ್ಯಾಸೇವೆ, ಪ್ರತಿ ಪಕ್ಷದವರೇ ಹೆಚ್ಚಿನ ಪರವಾನಗಿ ಪಡೆದಿದ್ದಾರೆ ಎಂದರು.

ಹಿಂದೆ ನಡೆದ ಅಕ್ರಮ ಸರಿಮಾಡಬೇಕು 600-700 ಸಂಸ್ಥೆಗಳಿವೆ ಎಲ್ಲ ತನಿಖೆ ಮಾಡಿಸಿ ಅರ್ಹ, ಗುಣಮಟ್ಟ ಕಾಯ್ದುಕೊಂಡ ಸಂಸ್ಥೆಗಳು ಮಾತ್ರ ಇರಬೇಕು, ಗುಣಮಟ್ಟ ಇಲ್ಲದ ಸಂಸ್ಥೆ ಮಾನ್ಯತೆ ರದ್ದು ಮಾಡಬೇಕು ಎಂದು ನಿರ್ಧರಿಸಲಾಗಿದೆ, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ನರ್ಸಿಂಗ್, ವೈದ್ಯಕೀಯ ಶಿಕ್ಷಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ತರಬೇಕು ಎಂದು ಆಮೂಲಾಗ್ರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ನರ್ಸಿಂಗ್ ಸಂಸ್ಥೆಗಳಿಗೆ ಅವಕಾಶ ನೀಡಿದ್ದೇವೆ. ತಾಂತ್ರಿಕ ಲೋಪ ಇದ್ದಲ್ಲಿ ತಿಳಿಸಿ ಬದಲಿಸಿಕೊಳ್ಳಲು, ಸರಿಪಡಿಸಿಕೊಳ್ಳಲು ಸಿದ್ದ, ನಮ್ಮದೇನು ಒಣ ಪ್ರತಿಷ್ಠೆ ಇಲ್ಲ, ಪ್ರತಿಪಕ್ಷ ಸದಸ್ಯರು ಎತ್ತಿರುವ ವಿಷಯಕ್ಕೆ ಉತ್ತರ ಕೊಟ್ಟಿದ್ದೇನೆ, ಅನುಮಾನ ಇದ್ದಲ್ಲಿ ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖೆ ಮಾಡಿಸಲು ಸಿದ್ದ, ಸಮಾಜದಲ್ಲಿ ಗುರುತರ ಜವಾಬ್ದಾರಿ ಹೊಂದಿರುವ ಮೂರು ಜನರ ಸಮಿತಿ ರಚಿಸಲಾಗುವುದು. ಮೂರು ತಿಂಗಳ ಸಮಯ ಕೊಡೋಣ ವರದಿ ನೋಡಿ ಕ್ರಮ ಕೈಗೊಳ್ಳೋಣ ಎಂದು ಸದನ ಸಮಿತಿ ಬೇಡಿಕೆ ನಿರಾಕರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಸದನ ಸಮಿತಿ ರಚನೆ ಎಂದಾಗ ನನ್ನ ಅವದಿ ಮಾತ್ರವಲ್ಲ ಈವರೆಗೆ ಪರವಾನಗಿ ಕೊಟ್ಟಿರುವ ಎಲ್ಲಾ ಕಾಲೇಜುಗಳ ತನಿಖೆಗೆ ಒಳಪಡಿಸುತ್ತೇವೆ ಎಂದು ಸಚಿವ ಸುಧಾಕರ್ ನಮ್ಮನ್ನು ಗಾಬರಿ ಪಡಿಸಿದ್ದಾರೆ, ನಮ್ಮವೂ ಅದರಲ್ಲಿ ಇವೆ ಎಂದು ಗಾಬರಿಪಡಿಸುವ ರೀತಿ ಹೇಳಿದ್ದಾರೆ ಎಂದು ಸುಧಾಕರ್ ಎಚ್ಚರಿಕೆಗೆ ಟಾಂಗ್ ನೀಡಿದರು.

ಹೈಪವರ್ ಕಮಿಟಿ 62 ಸಂಸ್ಥೆಗಳಿಗೆ ಪರವಾನಗಿ ನೀಡಲು ಶಿಫಾರಸ್ಸು ಮಾಡಿದ್ದು ಅದರಲ್ಲಿ 47ಕ್ಕೆ ಪರವಾನಗಿ ಕೊಟ್ಟಿದೆ. ಇವುಗಳಲ್ಲಿ ನಿಯಮದ ಪ್ರಕಾರ ಶೇ.50 ರಷ್ಟು ಕಾಲೇಜುಗಳಿದ್ದರೂ ನಾನು ರಾಜೀನಾಮೆ ಕೊಡಲು ಸಿದ್ದ, ನಿಮ್ಮ ನೇತೃತ್ವದಲ್ಲಿ ಸ್ಥಳ ಪರಿಶೀಲನೆಗೆ ಹೋಗೋಣ ಬನ್ನಿ ಎಂದು ಸಭಾಪತಿಗಳನ್ನು ಆಗ್ರಹಿಸಿದರು. ಇವರು ಕಾಲೇಜುಗಳ ಪಟ್ಟಿ ಮಾಡಿರುವುದು ದುಡ್ಡು ಮಾಡುವುದಕ್ಕೆ ಇಡೀ ದೇಶವೇ ಇದನ್ನು ಹೇಳುತ್ತದೆ ಎಂದು ಮರಿತಿಬ್ಬೇಗೌಡ ಆರೋಪ ಮಾಡಿದರು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು ಮರಿತಿಬ್ಬೇಗೌಡರ ಮೇಲೆ ಮುಗಿಬಿದ್ದು ವಾಗ್ದಾಳಿ ನಡೆಸಿದರು.

ಇವರಿಗೆ ಸದನ ಸಮಿತಿ ಕೇಳುವ ಅಭ್ಯಾಸ ಕರಗತವಾಗಿದೆ/ಅದಕ್ಕೆ ಸಮಿತಿ ಕೇಳುತ್ತಿದ್ದಾರೆ ಎಂದು ಸುಧಾಕರ್ ಮರಿತಿಬ್ಬೇಗೌಡರ ವಿರುದ್ಧ ಹರಿಹಾಯ್ದರು. ನಂತರ ಮಾತು ಮುಂದುವರೆಸಿದ ಮರಿತಿಬ್ಬೇಗೌಡ ಅಧಿಕಾರಿ ನೇತೃತ್ವ, ತಜ್ಞರ ಮೇಲೆ ಇರುವ ವಿಶ್ವಾಸ ಸದಸ್ಯರ ಮೇಲಿಲ್ಲ, ಪಾರದರ್ಶಕ ಎನ್ನುವ ನಿಮಗೆ ಸದನ ಸಮಿತಿ ಬಗ್ಗೆ ವಿಶ್ವಾಸ ಇರಬೇಕು ಎಂದರು. ಈ ವೇಳೆಯಲ್ಲಿಯೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಮರಿತಿಬ್ಬೇಗೌಡರ ಭಾಷಣ ಮುಂದವರಿಕೆಗೆ ಸಭಾಪತಿ ಅವಕಾಶ ನಿರಾಕರಿಸಿದರು. ಸಾಕು ಮುಗಿಸಿ ಎಂದರು ಇದಕ್ಕೆ ಕೆರಳಿದ ಮರಿತಿಬ್ಬೇಗೌಡ ಮಾತನಾಡಲು ಅವಕಾಶ ನಿರಾಕರಿಸುವಂತಿಲ್ಲ, ಯಾಕೆ ಅವಕಾಶ ನೀಡಲ್ಲ ಎಂದು ಪ್ರಶ್ನಿಸಿದರು.ನಿದಕ್ಕೆ ಅಷ್ಟೇ ತೀಕ್ಷ್ಣವಾಗಿ ಯಾಕೆ ಎಂದು ಕೇಳುವ ಅಧಿಕಾರ ನಿಮಗಿಲ್ಲ ಎಂದು ಸಭಾಪತಿಗಳು ಗದರಿದರು.

ನಂತರ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸದನದ ಎಲ್ಲರ ಅಭಿಪ್ರಾಯ ತೆಗೆದುಕೊಂಡು ಸದನ ಸಮಿತಿ ರಚಿಸುವ ವಿಚಾರದಲ್ಲಿ ನಿರ್ಧಾರ ಪ್ರಕಟಿಸಿ ಎಂದು ಮತಕ್ಕೆ ಹಾಕಬೇಕು ಎನ್ನುವ ಬೇಡಿಕೆ ಇರಿಸಿದರು. ಮತ ವಿಭಜನೆಗೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಈ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸುಧಾಕರ್, ನಮ್ಮ ಸದಸ್ಯರ ಪ್ರಶ್ನೆಗೆ ಉತ್ತರಿಸಿದ್ದೇನೆ ಅದಕ್ಕೆ ಅವರು ಸಮಾಧಾನಿತರಾಗಿದ್ದಾರೆ. ಆ ನಿಯಮದ ಪ್ರಕಾರ ಬೇರೆಯವರಿಗೆ ಮಾತನಾಡಲು ಅವಕಾಶ ಇರಲಿಲ್ಲ ಆದರೂ, ಬೇರೆಯವರ ಅಭಿಪ್ರಾಯ ಆಲಿಸಿ ಉತ್ತರ ಕೊಟ್ಟಿದ್ದೇನೆ ಎಂದರು.

ಸಚಿವರ ಈ ಉತ್ತರದಿಂದ ಕೆರಳಿದ ಮರಿತಿಬ್ಬೇಗೌಡ ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಹಾಗೆ ಮಾತನಾಡುವಂತಿಲ್ಲ, ಯಾವ ಸದಸ್ಯರು ಬೇಕಾದರೂ ಮಾತನಾಡಬಹುದು ಎಂದರು ಈ ವೇಳೆ ನಿಮ್ಮ ಜಾಗಕ್ಕೆ ಬಂದು ಮಾತನಾಡಿ ಎಂದು ಸಭಾಪತಿ ಸೂಚಿಸಿದರು. ನಮ್ಮ ಸ್ಥಳದಲ್ಲಿದ್ದಾಗ ಅವಕಾಶ ನೀಡಲ್ಲ ಇಲ್ಲಿ ಬಂದರೆ ಅಲ್ಲಿ ಹೋಗಿ ಅಂತೀರಾ ಎಂದು ಏರಿದ ದನಿಯಲ್ಲಿ ಅಸಮಧಾನ ವ್ಯಕ್ತಪಡಿಸಿದರು. ನಂತರ ವಿವೇಚನೆ ಕಳೆದುಕೊಳ್ಳಬೇಡಿ ಎಂದು ಮರಿತಿಬ್ಬೇಗೌಡರನ್ನು ಸಮಾಧಾನಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಯಾವುದೇ ಪ್ರಸ್ತಾವನೆ ಇಲ್ಲದೆ ಮತ ವಿಭಜನೆಗೆ ಹಾಕಲು ಬರುವುದಿಲ್ಲ. ಬಿಲ್, ಪ್ರಸ್ತಾವನೆ ಇದ್ದಲ್ಲಿ ಮಾತ್ರ ಮತಕ್ಕೆ ಹಾಕಲಾಗುತ್ತದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸದನದಲ್ಲಿ ಗದ್ದಲ ಮುಂದುವರಿಸಿದ್ದರಿಂದ ಕಲಾಪವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿದರು.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp