ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿ ಮೋದಿ ಸರ್ಕಾರದಿಂದ ಲೂಟಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಟೀಕೆ
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಮುಟ್ಟಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
Published: 19th March 2021 05:23 PM | Last Updated: 19th March 2021 06:31 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಮುಟ್ಟಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಅದಕ್ಕೂ ಹಿಂದಿನ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಟೀಕಾ ಪ್ರಹಾರ ನಡೆಸಿದರು. ಸಾರ್ವಜನಿಕ ಜರೂರು ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯಿಂದಾಗಿ ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಇದರಿಂದ ಸಾಮಾನ್ಯ ಜನ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರ ತೆರಿಗೆ ಹೆಚ್ಚಳ ಮಾಡಿ ಕೊರೊನಾ ಸಂಕಷ್ಟದಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದ ದೇಶದ ಬಡ ಜನರ ಬೆನ್ನುಮೂಳೆ ಮುರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"2014 ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗ ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಇತ್ತು ಹಾಗೂ ಡೀಸೆಲ್ ಮೇಲೆ 3 ರೂಪಾಯಿ 46 ಪೈಸೆ ಇತ್ತು, ಇಂದು ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಹಾಗೂ ಡೀಸೆಲ್ ಮೇಲೆ 31 ರೂಪಾಯಿ 83 ಪೈಸೆ ಆಗಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್ ಗೆ ರೂ.6,794 ಇತ್ತು. ಇಂದು ಪ್ರತೀ ಬ್ಯಾರಲ್ ಗೆ ರೂ.4,008 ಯಷ್ಟು ಕಡಿಮೆಯಾಗಿದೆ. ಕಚ್ಚಾತೈಲ ಬೆಲೆ ಕಡಿಮೆಯಾದಂತೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಬೇಕಿತ್ತಲ್ಲವೇ? ಇದಕ್ಕೆ ನರೇಂದ್ರ ಮೋದಿ ಸರ್ಕಾರವನ್ನು ಹೊಣೆ ಮಾಡದೆ ಇನ್ಯಾರನ್ನು ಹೊಣೆ ಮಾಡಬೇಕು"? ಎಂದು ಪ್ರಶ್ನಿಸಿದರು.
2013-14 ರಲ್ಲಿ ಭಾರತ 184 ದಶಲಕ್ಷ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು, 2019-20 ರಲ್ಲಿ 228 ದಶಲಕ್ಷ ಟನ್ ಗೆ ಇದು ಏರಿಕೆಯಾಗಿದೆ.
ಕಚ್ಚಾತೈಲ ಆಮದು ಕಡಿಮೆ ಮಾಡಿಲ್ಲ ಎಂದು ಹಿಂದಿನ ಸರ್ಕಾರಗಳನ್ನು ದೂರುವ ಪ್ರಧಾನಿ ನರೇಂದ್ರ ಮೋದಿ ಕಳೆದ 7 ವರ್ಷಗಳಿಂದ ತಾವೇನು ಮಾಡಿದ್ದಾರೆ ಎಂದು ಒಮ್ಮೆ ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ವೊಂದಕ್ಕೆ 125 ಡಾಲರ್ ಗೆ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂಪಾಯಿ ಇತ್ತು. ಈಗ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್ ಗೆ ಕೇವಲ 54.77 ಡಾಲರ್ ಇದೆ, ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 94 ರೂಪಾಯಿ ಆಗಿದೆ. ಇದನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕರೆದರೆ ತಪ್ಪೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು