ಬಸವಕಲ್ಯಾಣ ಉಪ ಚುನಾವಣೆ: ದಿವಂಗತ ಶಾಸಕರ ಪತ್ನಿಗೆ ಕಾಂಗ್ರೆಸ್ ಟಿಕೆಟ್, ಫಲನೀಡುವುದೇ 'ಅನುಕಂಪ'ದ ಅಲೆ!
ತೀವ್ರ ಕುತೂಹಲ ಕೆರಳಿಸಿರುವ ಮತ್ತು ಕಾಂಗ್ರೆಸ್-ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿವಂಗತ ಶಾಸಕ ಬಿ ನಾರಾಯಣ್ ರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ 'ಅನುಕಂಪ' ಅಲೆಯನ್ನು ಮತಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
Published: 20th March 2021 10:37 PM | Last Updated: 20th March 2021 10:37 PM | A+A A-

ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ
ಬೀದರ್: ತೀವ್ರ ಕುತೂಹಲ ಕೆರಳಿಸಿರುವ ಮತ್ತು ಕಾಂಗ್ರೆಸ್-ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿವಂಗತ ಶಾಸಕ ಬಿ ನಾರಾಯಣ್ ರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ 'ಅನುಕಂಪ' ಅಲೆಯನ್ನು ಮತಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
ಬೀದರ್ ನ ಬಸವಕಲ್ಯಾಣ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಇದು ಎರಡನೇ ಬಾರಿ. ಈ ಹಿಂದೆ 1957 ಮತ್ತು 1962ರಲ್ಲಿ ಇದೇ ಕಾಂಗ್ರೆಸ್ ಪಕ್ಷ ಅನ್ನಪೂರ್ಣ ಭಾಯ್ ಅವರನ್ನು ಕಣಕ್ಕಿಳಿಸಿತ್ತು. ಎರಡೂ ಬಾರಿಯೂ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು. ಇದೀಗ ಮಲ್ಲಮ್ಮ ಅವರನ್ನು ಕಣಕ್ಕಿಳಿಸಿದ್ದು, ಮತ್ತೆ ಗೆಲುವು ಪುನಾರಾವರ್ತನೆ ಮಾಡಲು ಯೋಜನೆ ರೂಪಿಸಿದೆ.
2018 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿ ನಾರಾಯಣ್ ರಾವ್ ಅವರು ಕಳೆದ ವರ್ಷ ಸೆಪ್ಟೆಂಬರ್ 24 ರಂದು ಕೋವಿಡ್ ಸೋಂಕಿನ ಕಾರಣದಿಂದಾಗಿ ನಿಧನ ಹೊಂದಿದ್ದರು. ಹೀಗಾಗಿ ಬಸವಕಲ್ಯಾಣದಲ್ಲಿ ಉಪಚುನಾವಣೆ ನಡೆಯುತ್ತಿದೆ.
1957ರಿಂದ 1962 ರವರೆಗೂ ಮೈಸೂರು ರಾಜ್ಯದ ಅವಧಿಯಲ್ಲಿ ಈ ಕ್ಷೇತ್ರವನ್ನು ಕಲ್ಯಾಣಿ ಕ್ಷೇತ್ರವಾಗಿ ಕರೆಯಲಾಗುತ್ತಿತ್ತು. 1957 ಮತ್ತು 1962ರಲ್ಲಿ ಕಾಂಗ್ರೆಸ್ ಪಕ್ಷ ಅನ್ನಪೂರ್ಣ ಭಾಯ್ ಅವರನ್ನು ಕಣಕ್ಕಿಳಿಸಿ ಎರಡೂ ಬಾರಿಯೂ ಜಯಭೇರಿ ಭಾರಿಸಿತ್ತು. ಅನ್ನಪೂರ್ಣ ಭಾಯ್ ಅವರು 2016 ರಲ್ಲಿ ನಿಧನರಾದರು. ಇನ್ನು ಬಿ ನಾರಾಯಣ್ ರಾವ್ ಅವರು ಕುರುಬಾ ಸಮುದಾಯಕ್ಕೆ ಸೇರಿದ ಜನಪ್ರಿಯ ನಾಯಕರಾಗಿದ್ದು,. ಮೂರು ಬಾರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಳೆದ ವರ್ಷ ಅವರು ಕೋವಿಡ್ ಸೋಂಕಿನ ಕಾರಣದಿಂದಾಗಿ ನಿಧನರಾದರು. ಇದೀಗ ಕಾಂಗ್ರೆಸ್ ಪಕ್ಷ ಅವರ ಸಾವಿನಿಂದ ತೆರವಾಗಿರುವ ಸ್ಥಾನಕ್ಕೆ ಅವದೇ ಕುಟುಂಬದವರನ್ನು ಕರೆತರುವ ಮೂಲಕ ಸಹಾನುಭೂತಿಯ ಲಾಭ ಪಡೆಯಲು ಮುಂದಾಗಿದೆ. ಇದೇ ಕಾರಣಕ್ಕೆ ನಾರಯಣ ರಾವ್ ಅವರ ಪತ್ನಿ 51 ವರ್ಷದ ಮಲ್ಲಮ್ಮ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಪ್ರಸ್ತುತ ಬಸವಕಲ್ಯಾಣದಲ್ಲಿ 1.24 ಲಕ್ಷ ಪುರುಷರು ಮತ್ತು 1.14 ಲಕ್ಷ ಮಹಿಳಾ ಮತದಾರರು ಸೇರಿದಂತೆ ಒಟ್ಟು 2.38 ಲಕ್ಷ ಮತದಾರರಿದ್ದಾರೆ. ಲಿಂಗಾಯತರು, ಮರಾಠರು, ಕುರುಬರು ಮತ್ತು ಮುಸ್ಲಿಮರು ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಮಲ್ಲಮ್ಮ ಅವರೂ ಕೂಡ ಕುರುಬ ಸಮುದಾಯದವರಾಗಿದ್ದು, ಕುರುಬ ಸಮುದಾಯದ ಮತದಾರರು ತಮ್ಮ ಪರವಾಗಿ ತಮ್ಮ ಮತದಾನವನ್ನು ಚಲಾಯಿಸುತ್ತಾರೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಬಸವಕಲ್ಯಾಣ ಉಪ ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ವಹಿಸಲಾಗಿದ್ದು, ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ ಜನಪ್ರಿಯ ನಾಯಕರಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಇದೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಿದೆ.
ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ: ಮಲ್ಲಮ್ಮ
ಬಿಎ ಪದವೀಧರರಾಗಿರುವ ಮಲ್ಲಮ್ಮ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಜಿಲ್ಲೆಯ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ಮೇಲೆ ಭರವಸೆ ಇಟ್ಟು ಅಭ್ಯರ್ಥಿಯನ್ನಾಗಿಸಿದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಮತ್ತು ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಂತೆಯೇ ಚುನಾವಣಾ ಪ್ರಚಾರದ ವೇಳೆ ಕಳೆದ ಮೂರು ವರ್ಷಗಳಲ್ಲಿ ತಮ್ಮ ಪತಿ ನಾರಾಯಣರಾವ್ ಅವರು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ನೆನಪಿಸುತ್ತೇನೆ ಎಂದು ಮಲ್ಲಮ್ಮ ಹೇಳಿದ್ದಾರೆ. ತಮ್ಮ ಪತಿಯ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡೇ ನಾನು ಪ್ರಚಾರ ನಡೆಸುತ್ತೇನೆ. ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ನಾನು ನನ್ನ ಪತಿ ನಾರಾಯಣರಾವ್ ಅವರೊಂದಿಗೆ ಕ್ಷೇತ್ರದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಹೀಗಾಗಿ ಕ್ಷೇತ್ರಗದ ಕುರಿತು ನನಗೂ ಸಾಕಷ್ಟು ಪರಿಚಯವಿದೆ. ತನ್ನ ಪತಿ ಮಾಡಬೇಕು ಎಂದು ಕೊಂಡಿದ್ದ ಎಲ್ಲ ಕೆಲಸವನ್ನೂ ನಾನು ಪೂರ್ತಿ ಮಾಡುತ್ತೇನೆ. ಅನುಭವ ಮಂಟಪದ ನಿರ್ಮಾಣ ಪೂರ್ಣಗೊಳಿಸಲು ಪತಿ ಶ್ರಮಿಸಿದ್ದರು. ಆ ಕೆಲಸವನ್ನು ನಾನು ಪೂರ್ಣಗೊಳಿಸುತ್ತೇನೆ. ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಇನ್ನೂ ಮೂಲ ಸೌಲಭ್ಯಗಳಿಲ್ಲ. ನಾನು ಆಯ್ಕೆಯಾದರೆ, ಖಂಡಿತಾ ಅಭಿವೃದ್ಧಿಗೆ ಎಲ್ಲ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಿಂದ ಕಾಂಗ್ರೆಸ್ ಗೆ ಮತ ವಿಭಜನೆ ಭೀತಿ
ಮುಸ್ಲಿಂ ಸಮುದಾಯದವರಾದ ಸೈಯದ್ ಯಸ್ರಾಬ್ ಅಲಿ ಖಾದ್ರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದು, ಮುಸ್ಲಿ ಮತಗಳನ್ನು ಆಕರ್ಷಿಸುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಗೆ ತಲೆನೋವಾಗಿದ್ದು, ಜೆಡಿಎಸ್ ಅಭ್ಯರ್ಥಿಯಿಂದಾಗಿ ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಗಬಹುದು ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ
ಇನ್ನು ಇತ್ತ ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿ ಆಯ್ಯೆ ಕಸರತ್ತು ಮುಂದುವರೆದಿದ್ದು, ಭಾನುವಾರ ಸಂಜೆ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಇಂದು ನಡೆದ ಕೋರ್ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ಕಮಿಟಿ ಸಭೆಯಲ್ಲಿ ಬಸವಕಲ್ಯಾಣದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ದಿ.ನಾರಾಯಣರಾವ್ ಅವರ ಪತ್ನಿಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅನುಕಂಪ ಸಿಕ್ಕರೆ ಬಿಜೆಪಿಗೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ ಬಿಜೆಪಿಯಿಂದ ವಿಜಯೆಂದ್ರ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಕೋರ್ಕಮಿಟಿ ಸಭೆಯ ಪ್ರಮುಖರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸೋಮವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಾರ್ಚ್ 30ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಏಪ್ರಿಲ್ 17ರಂದು ಬಸವಕಲ್ಯಾಣದಲ್ಲಿ ಚುನಾವಣೆ ನಡೆಯಲಿದೆ.
1957 ರಿಂದ ಬಸವಕಲ್ಯಾಣ ಕ್ಷೇತ್ರ ಪ್ರತಿನಿಧಿಸಿದ್ದ ಶಾಸಕರ ಹೆಸರುಗಳು
ಮೈಸೂರು ರಾಜ್ಯ
1957: ಅನ್ನಪೂರ್ಣ ಬಾಯಿ (ಕಾಂಗ್ರೆಸ್)
1962: ಅನ್ನಪೂರ್ಣ ಬಾಯಿ (ಕಾಂಗ್ರೆಸ್)
1967: ಎಸ್.ಸಂಗನಬಸಪ್ಪ, ಸ್ವತಂತ್ರ
1972: ಬಾಪುರಾವ್ ಆನಂದ್ ರಾವ್ (ಕಾಂಗ್ರೆಸ್)
ಕರ್ನಾಟಕ ರಾಜ್ಯ
1978: ಬಾಪುರಾವ್ ಹುಲ್ಸೂರ್ಕರ್ (ಕಾಂಗ್ರೆಸ್)
1983: ಬಸವರಾಜ್ ಶಂಕರಪ್ಪ ಪಾಟೀಲ್ (ಜೆಡಿಎಸ್)
1985: ಬಸವರಾಜ್ ಪಾಟೀಲ್ ಅತ್ತೂರ್ (ಜೆಡಿಎಸ್)
1989: ಬಸವರಾಜ್ ಪಾಟೀಲ್ ಅತ್ತೂರ್ (ಜೆಡಿಎಸ್)
1994: ಬಸವರಾಜ್ ಪಾಟೀಲ್ ಅತ್ತೂರ್ (ಜೆಡಿಎಸ್)
1999: ಎಂ. ಜಿ. ಮ್ಯೂಲ್ (ಜೆಡಿಎಸ್)
2004: ಮಲ್ಲಿಕರ್ಜುನ್ ಸಿದ್ರಮಪ್ಪ ಖುಬಾ (ಜೆಡಿಎಸ್)
2008: ಬಸವರಾಜ್ ಪಾಟೀಲ್ ಅತ್ತೂರ್ (ಬಿಜೆಪಿ)
2013: ಮಲ್ಲಿಕರ್ಜುನ್ ಸಿದ್ರಾಮಪ್ಪ ಖುಬಾ (ಜೆಡಿಎಸ್)
2018: ಬಿ.ನಾರಾಯಣರಾವ್ (ಕಾಂಗ್ರೆಸ್)