ಉಪಚುನಾವಣೆ ಕದನ: ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Published: 21st March 2021 09:08 AM | Last Updated: 21st March 2021 09:08 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಶನಿವಾರ ನಡೆದಿದ್ದು, ಸಬೆಯಲ್ಲಿ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್'ಗೆ ಕಳುಹಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೆಸರನ್ನು ಸೂಚಿಸಲಾಗಿದ್ದು, ಬಸವಕಲ್ಯಾಣ ಕ್ಷೇತ್ರಕ್ಕೆ ಮಾಜಿ ಶಾಸಕ ಮಲ್ಲಿಕಾರ್ಜುನ ಕೂಬಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಸುರೇಶ್ ಅಂಗಡಿಯವರ ಪುತ್ರಿ ಶ್ರದ್ಧಾ ಶೆಟ್ಟರ್ ಸೇರಿದಂತೆ ಇನ್ನಿತರರ ಹೆಸರು ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ಥಳೀಯ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಕೇಂದ್ರ ನಾಯಕರಿಗೆ ವರದಿ ಸಲ್ಲಿಸಿದ್ದಾರೆ. ಇದರೊಂದಿಗೆ ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳ ಹೆಸರು ಬಹಿರಂಗಗೊಳ್ಳಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಪ್ರತಿಕ್ರಿಯೆ ನೀಡಿ, ಕಟೀಲ್ ಅವರು ಪಟ್ಟಿಯನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನಿಸಲಿದ್ದಾರೆ. ಬಳಿಕ ಅಂತಿಮ ಪಟ್ಟಿ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಸುರೇಶ್ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯಬೇಕು ಎಂದು ತಿಳಿಸಿದ್ದಾರೆ.