ಇದು ದೇಶದ ದುರಂತ: ಪೆಟ್ರೋಲ್ ಬೆಲೆ 100 ರೂ. ಆದರೂ ಜನ ಯಾಕೆ ಪ್ರತಿಭಟಿಸುತ್ತಿಲ್ಲ - ಸಿದ್ದರಾಮಯ್ಯ

ದೇಶದಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿಗೆ ಏರಿಕೆಯಾಗಿದ್ದರೂ ಜನ ಪ್ರತಿಭಟನೆ ನಡೆಸುತ್ತಿಲ್ಲ. ಇದು ದೇಶದ ದುರಂತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

Published: 21st March 2021 09:25 PM  |   Last Updated: 21st March 2021 09:25 PM   |  A+A-


Siddaramaiah

ಸಿದ್ದರಾಮಯ್ಯ

Posted By : Vishwanath S
Source : Online Desk

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿಗೆ ಏರಿಕೆಯಾಗಿದ್ದರೂ ಜನ ಪ್ರತಿಭಟನೆ ನಡೆಸುತ್ತಿಲ್ಲ. ಇದು ದೇಶದ ದುರಂತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಎಚ್.ಎಂ ರೇವಣ್ಣ ಅಭಿನಂದನೆ ಸಮಾರಂಭದಲ್ಲಿ ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಟೋಪಿ ಹಾಕಿದ್ದಾರೆ. ಇಷ್ಟಾದರೂ ಜನ ಪ್ರತಿಭಟನೆ ಮಾಡುತ್ತಿಲ್ಲ. ಜನತೆಯಲ್ಲಿ ಹೋರಾಟದ ಮನೋಭಾವನೆಯೇ ಸತ್ತುಹೋಗಿದೆ ಎಂದರು.

ಭ್ರಷ್ಟಾಚಾರ ಈಗ ಗಂಭೀರ ವಿಷಯವಾಗಿ ಉಳಿದಿಲ್ಲ. ಈಗ ರಾಜಕೀಯ ಕುಸಿಯುತ್ತಿದೆ. ಗುಣಾತ್ಮಕ ರಾಜಕಾರಣ ಮರೆಯಾಗುತ್ತಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ದೇಶ ಅರಾಜಕತೆಗೆ ಸಿಲುಕುತ್ತದೆ. ಜನ  ಮೌಲ್ಯಯುತ ರಾಜಕಾರಣಕ್ಕೆ ಬೆಂಬಲ ಕೊಡುವವರೆಗೆ, ಭ್ರಷ್ಟರನ್ನು ದೂರ ಇರಿಸುವವರೆಗೆ ದೇಶ ಉದ್ದಾರ ಆಗುವುದಿಲ್ಲ. ಜನಪರ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದರು. 

ಎಚ್.ಎಂ. ರೇವಣ್ಣ ಜನಪರ ರಾಜಕಾರಣಿ. ಅವರು ಮತ್ತಷ್ಟು ಜನ ಮುಖಿಯಾಗಿ ಕೆಲಸ ಮಾಡಲಿ. ನಾನು ಇನ್ನೂ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದು ಕೊಂಡಿದ್ದೇನೆ. ಹಾಗಾಗಿ, ರೇವಣ್ಣ ಸಹ ರಾಜಕಾರಣದಲ್ಲಿ ಮುಂದುವರಿಯಲಿ.  ರಾಜಕೀಯ ಹಿನ್ನೆಲೆ, ಗಾಡ್ ಫಾದರ್ ಇಲ್ಲದೆ ನಾನು ಮತ್ತು ರೇವಣ್ಣ ಇಷ್ಟು ಬೆಳವಣಿಗೆಯಾಗಿವುದು ಮಹತ್ವದ ಸಾಧನೆ ಎಂದರು.

ನನಗೆ ರಾಜಕೀಯ ಆಸಕ್ತಿ ಬೆಳೆದಿದ್ದು ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರಿಂದ.ಆ ಬೆಳವಣಿಗೆ ಆಗಿರದಿದ್ದರೆ ನಾನು ಮುಖ್ಯ ಮಂತ್ರಿ ಆಗುತ್ತಿರಲಿಲ್ಲ, ನಿಮ್ಮ ಪ್ರೀತಿ-ವಿಶ್ವಾಸಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಅವಕಾಶಗಳನ್ನು  ಬಳಸಿಕೊಂಡವರು ಮಾತ್ರ ನಾಯಕರಾಗುತ್ತಾರೆ. ರಾಜಕಾರಣಕ್ಕೆ ಬರುವವರಿಗೆ ಸಿದ್ದಾಂತದ ಸ್ಪಷ್ಟತೆ ಇರಬೇಕು. ಹಣ, ಅಧಿಕಾರಕ್ಕಾಗಿ ರಾಜಕೀಯಕ್ಕೆ ಬರಬಾರದು ಎಂದರು.

ಅಸಮಾನತೆ ತೊಲಗಿಸುವುದು ಸಮ ಸಮ ಸಮಾಜ ನಿರ್ಮಾಣದ ಗುರಿಯಾಗಿದೆ. ರಾಜಕಾರಣಿಗಳಿಗೆ ಸಾಮಾಜಿಕ ನ್ಯಾಯದ ಬಗ್ಗೆ ಪರಿಕಲ್ಪನೆ  ಇರಬೇಕು. ಇಂದಿರಾಗಾಂಧಿ ಅವರಿಗೆ ಆ ಗುರಿ ಇತ್ತು. ಸ್ಪಷ್ಟತೆ ಹೊಂದಿದ್ದರು. ನಾವು ಏನೇ ಹೇಳಿದರೂ ಜಾತಿ ವಾಸ್ತವವಾಗಿದೆ. ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಜಾತಿ ವ್ಯವಸ್ಥೆ ಹೋಗದೆ ಬದಲಾವಣೆ ಅಸಾಧ್ಯ. ಅದರ ಬೇರುಗಳನ್ನು ಕತ್ತರಿಸಲು ನಾವು ಮುಂದಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರೇವಣ್ಣ ಅವರೊಂದಿಗಿನ ಸ್ನೇಹವನ್ನು ಸ್ಮರಿಸಿದರು. ಇತ್ತೀಚಿನ ದಿನಗಳಲ್ಲಿ ಪಕ್ಷಗಳ ಆಚೆಗೆ ರಾಜಕಾರಣಿಗಳ ನಡುವೆ ಸ್ನೇಹ ಉಳಿಯುವುದು ಕಷ್ಟ ಅನ್ನಿಸುತ್ತಿದೆ. ಆದರೆ ರೇವಣ್ಣ ಅತ್ಯಂತ ಸ್ನೇಹಮಹಿ ನಾಯಕ ಎಂದು ವರ್ಣಿಸಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪಮೊಯಿಲಿ ಮಾತನಾಡಿ, ನಾನು ಗುರುತಿಸಿದ ಶಾಸಕ ಎಚ್.ಎಂ.ರೇವಣ್ಣ ಉತ್ತಮ ರೀತಿಯಲ್ಲಿ ಜನ ಪರ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ನಾಯಕತ್ವದ ಗುಣಗಳಿವೆ. ಇಂತಹ ಜನ ನಾಯಕರು ರಾಜಕಾರಣಕ್ಕೆ ಅನಿವಾರ್ಯ ಎಂದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ರೇವಣ್ಣ ನನಗೆ ಕಾಲೇಜು ದಿನಗಳ ಗೆಳೆಯ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಪ್ರಬಲವಾಗಿ ಕಟ್ಟಲು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಅನ್ನು ಸಂಘಟಿಸಬೇಕಿದೆ. ರೇವಣ್ಣನವರಿಗೆ ರಾಜಕೀಯವಾಗಿ ಸಾಕಷ್ಟು ಸ್ಥಾನ ಮಾನ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶ ದೊರೆಯಲಿ ಎಂದು ಆಶಿಸಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಬ್ರಾಹ್ಮಣ ಯುವತಿಯರು ಬೇರೆ ಜಾತಿಯ ಹುಡುಗರನ್ನು ಮದುವೆಯಾಗದಂತೆ ನೀಡಿರುವ ಕರೆ ಖಂಡನೀಯ. ಅಂತಹ ಮದುವೆಗಳು ಪ್ರೀತಿಯಿಂದ ಆಗುತ್ತವೆ. ಅದನ್ನು ಯಾರಿಂದಲೂ ತಡೆಯುವುದು ಅಸಾಧ್ಯ. ಈಗಿನ ತುರ್ತು ದೇವಾಲಯ ಕಟ್ಟುವುದಲ್ಲ, ಆಸ್ಪತ್ರೆಗಳ ನಿರ್ಮಾಣ ಮತ್ತು ಜನೋಪಯೋಗಿ ಕೆಲಸಗಳನ್ನು ಮಾಡಬೇಕಿದೆ ಎಂದರು.

ಹಿರಿಯ ಕವಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿದ್ದಲಿಂಗಯ್ಯ ಮಾತನಾಡಿ, ಜನ ವೈಚಾರಿಕತೆ ಅಳವಡಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ವಿಚಾರವಂತರು ಕಡಿಮೆಯಾಗುತ್ತಿದ್ದು, ವಿಚಾರಶೀಲತೆ ಹೆಚ್ಚಬೇಕು ಎಂದು ಹೇಳಿದರು.

ರೇವಣ್ಣ ನವರ ಬಹು ಕಾಲದ ಗೆಳೆಯ, ಕಮ್ಯೂನಿಟಿ ಸೆಂಟರ್ ಕಾಲೇಜಿನ ಅಧ್ಯಕ್ಷ ಕೆಂ.ಎಂ.ನಾಗರಾಜ್  ಮಾತನಾಡಿ, ಎಚ್.ಎಂ.ರೇವಣ್ಣ ರಾಜಕಾರಣದಲ್ಲಿ ಮುಂದೆ ಬರಲು ಜಾತಿ ಬೆಂಬಲಕ್ಕಿಂತ ಜನರೊಂದಿಗಿನ ಉತ್ತಮ ಒಡನಾಟ ಸಹಕಾರಿಯಾಯಿತು. ಇದೇ ಅವರನ್ನು ನಾಯಕನನ್ನಾಗಿಮಾಡಲು ಕಾರಣವಾಯಿತು. ಅನೇಕ ಜನ ಅತ್ಯುತ್ತಮ ಸಾಮರ್ಥ್ಯ ಹೊಂದಿದ್ದರೂ ಅವರು ರಾಜಕಾರಣದಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ ಎಂದರು.

ಅಭಿನಂದನೆಗೆ ಸ್ಪಂದಿಸಿದ ಎಚ್.ಎಂ.ರೇವಣ್ಣ,  ನಾನು ಎಷ್ಟೇ ಬೆಳೆದರೂ ನಾನು ಮಾಗಡಿ ರೇವಣ್ಣನೆ ಹೊರೆತು ಬೆಂಗಳೂರಿನ ರೇವಣ್ಣ ಅಲ್ಲ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟವನ್ನು ಮುಂದುವರೆಸುತ್ತೇನೆ ಎಂದರು.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp