ಜಾರಕಿಹೊಳಿ ಸಿಡಿ ಕೇಸ್ ಹಿಡಿದು ಸದನದಲ್ಲಿ ಕಾಲಹರಣ: ಕಾಂಗ್ರೆಸ್ ವಿರುದ್ಧ ಸಿಎಂ ಯಡಿಯೂರಪ್ಪ ಸಿಡಿಮಿಡಿ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೂ ಕುಂಟು ನೆಪ ಹೇಳಿ ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 24th March 2021 09:34 AM  |   Last Updated: 24th March 2021 09:34 AM   |  A+A-


Yeddyurappa

ಸಿಎಂ ಯಡಿಯೂರಪ್ಪ

Posted By : Manjula VN
Source : The New Indian Express

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೂ ಕುಂಟು ನೆಪ ಹೇಳಿ ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಸದನದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಸುಮ್ಮನೆ ಕುಂಟು ನೆಪ ಹೇಳಿ ಧರಣಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ತನಿಖೆಗೂ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಇಷ್ಟಾದರೂ ಧರಣಿ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಬೇರೆ ವಿಚಾರ ಸಿಗದೆ ಇರುವುದರಿಂದ ಧರಣಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಡಿಯಲ್ಲಿರುವ ಹೆಣ್ಣು ಮಗಳು ಪತ್ತೆಯಾದರೆ ಈ ಪ್ರಕರಣಕ್ಕೆ ಒಂದು ಅಂತ್ಯ ದೊರೆಯಲಿದೆ. ಆ ಹೆಣ್ಣು ಮಗಳು ಇನ್ನೂ ಸಿಕ್ಕಿಲ್ಲ. ಪತ್ತೆ ಕಾರ್ಯ ನಡೆದಿದೆ. ಕಾಂಗ್ರೆಸ್ ಸದಸ್ಯರು ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸದೆ ಸುಗಮ ಕಲಾಪಕ್ಕೆ ಸಹಕಾರ ನೀಡಬೇಕು. ಏನೇ ಸಮಸ್ಯೆಗಳಿದ್ದರೂ ಸದನದಲ್ಲಿ ಚರ್ಚೆ ಮಾಡೋಣ. ಸರ್ಕಾರವೂ ಉತ್ತರ ನೀಡಲು ಸಿದ್ಧವಿದೆ. ಇದು ಬಜೆಟ್ ಅಧಿವೇಶನ, ವಿವಿಧ ಇಲಾಖೆಗಳ ಬೇಡಿಕೆಗಳ ಮೇಲೂ ಚರ್ಚೆ ನಡೆಯಬೇಕಿದೆ. ಬಜೆಟ್‌ಗೂ ಸರ್ಕಾರ ಉತ್ತರ ಕೊಟ್ಟಿಲ್ಲ. ಸದನದ ಕಲಾಪಕ್ಕೆ ಅಡ್ಡಿ ಮಾಡಬೇಡಿ, ಸುಗಮ ಕಲಾಪಕ್ಕೆ ಸಹಕಾರ ನೀಡಬೇಕು.

ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಧರಣಿ ನಡೆಸುವುದು ಸರಿಯಲ್ಲ. ಈ ವಿಚಾರದಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನೂ ಸರ್ಕಾರ ಮಾಡಿ ತನಿಖೆಗೆ ಮುಂದಾಗಿದೆ. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಸದಸ್ಯರಿಗೆ ಕಲಾಪ ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸಿಡಿ ಬಗ್ಗೆ ನಡೆದ ಚರ್ಚೆಗೆ ರಾಜ್ಯ ಸರ್ಕಾರ ಸೋಮವಾರವೇ ಉತ್ತರ ನೀಡಿದ್ದರೂ ಕಾಂಗ್ರೆಸ್ ಸದಸ್ಯರು ತೃಪ್ತರಾಗಿರಲಿಲ್ಲ. ಹೀಗಾಗಿ ಮಂಗಳವಾರ ಸದನ ಸಮಾವೇಶಗೊಂಡಾಗ ಸಿಡಿ ಗಳನ್ನು ಪ್ರದರ್ಶಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಸದನದ ಬಾವಿಗಿಳಿದು ಮತ್ತೆ ಧರಣಿ ಆರಂಭಿಸಿದರು.

ಇದಕ್ಕೆ ಒಪ್ಪದ ರಾಜ್ಯ ಸರ್ಕಾರ, ಕಾಂಗ್ರೆಸ್ ಅವಧಿಯಲ್ಲಿ ಸಚಿವರಾಗಿದ್ದ ಹೆಚ್.ವೈ.ಮೇಟಿ ಪ್ರಕರಣಗಳಲ್ಲಿ ಸಿಐಟಿ ತನಿಖೆ ಹೆಸರಿನಲ್ಲಿ ವಿಚಾರಣೆಗೂ ಮೊದಲೇ ಕ್ಲೀನ್ ಚಿಟ್ ನೀಡಲಾಗಿತ್ತು. ಕಾಂಗ್ರೆಸ್'ಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಬೇಕಿಲ್ಲ. ಕೇವಲ ರಾಜಕೀಯಕ್ಕೆ ಸಿಡಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗೃಹ ಸಚಿವ ಬೊಮ್ಮಾಯಿ ತಿರುಗೇಟು ನೀಡಿದರು.

ಹೀಗಾಗಿ ಗದ್ದಲದ ನಡುವೆಯೇ ಪೂರಕ ಅಂದಾಜು ಮಂಡನೆ, ಕೆಲ ವಿಧೇಯಕಗಳ ಅನುಮೋದನೆ ಪಡೆದು ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು. ಈ ಮೂಲಕ ಆಡಳಿತ-ವಿರೋಧ ಪಕ್ಷದ ನಡುವಿನ ಸಿಡಿ ಜಟಾಪಟಿಯಿಂದಾಗಿ ಮಂಗಳವಾರದ ದಿನದ ಕಲಾಪ ವ್ಯರ್ಥವಾಯಿತು.


Stay up to date on all the latest ರಾಜಕೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp