ಪ್ರತಿಪಕ್ಷದವರೇನು ಮರ್ಯಾದಾ ಪುರುಷೋತ್ತಮರಾ? ಎಲ್ಲರೂ ತನಿಖೆ ಎದುರಿಸಲಿ, ಯಾರಿಗೆ ಅನೈತಿಕ ಸಂಬಂಧ ಇದೆ ಗೊತ್ತಾಗಲಿ: ಸಚಿವ ಸುಧಾಕರ್ ಸವಾಲು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಆರು ಸಚಿವರು ತಮ್ಮ ವಿರುದ್ಧ ಮಾನಹಾನಿಯ ವರದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂದು ಕೋರಿ ಕೋರ್ಟ್ ಮೊರೆ ಹೋಗಿರುವ ಕುರಿತು ಮುಖ್ಯವಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರು ಸದನದಲ್ಲಿ, ಹೊರಗೆ ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.
Published: 24th March 2021 12:21 PM | Last Updated: 24th March 2021 01:11 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಆರು ಸಚಿವರು ತಮ್ಮ ವಿರುದ್ಧ ಮಾನಹಾನಿಯ ವರದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂದು ಕೋರಿ ಕೋರ್ಟ್ ಮೊರೆ ಹೋಗಿರುವ ಕುರಿತು ಮುಖ್ಯವಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರು ಸದನದಲ್ಲಿ, ಹೊರಗೆ ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.
ಇದರಿಂದ ರೊಚ್ಚಿಗೆದ್ದು ಹೋಗಿರುವ ಆಡಳಿತ ಪಕ್ಷದ ಸಚಿವರು ತೀಕ್ಷ್ಣವಾಗಿ ಪ್ರತಿಪಕ್ಷ ನಾಯಕರಿಗೆ ಸವಾಲು, ತಿರುಗೇಟು ನೀಡುತ್ತಿದ್ದಾರೆ. ಇಂದು ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶದಿಂದ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಪ್ರತಿಪಕ್ಷದ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಸಿಡಿ ಗದ್ದಲಕ್ಕೆ ಸಚಿವರು ಸಿಡಿಮಿಡಿಗೊಂಡಿದ್ದಾರೆ.
ನಮ್ಮ ಮೇಲೆ ಇಂದು ಆರೋಪ ಮಾಡುವವರ ಜೀವನದಲ್ಲಿ ಏನೇನು ನಡೆಯಿತು, ಅವರು ವೈಯಕ್ತಿಕ ಜೀವನದಲ್ಲಿ ಹೇಗಿದ್ದಾರೆ ಎಂದು ತನಿಖೆಯಾಗಲಿ, ಕೆಲವು ಮಾಜಿ ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಏನೇನು ಮಾಡಿದ್ದರು ಎಂದು ಎಲ್ಲವೂ ತನಿಖೆಯಾಗಲಿ, ನೈತಿಕತೆ, ಮೌಲ್ಯಗಳ ಪ್ರಶ್ನೆ ಬಗ್ಗೆ ಮಾತನಾಡುತ್ತಾರೆ,ಅವರಿಗೆ ನೈತಿಕತೆ ಬಗ್ಗೆ ಮಾತನಾಡಲು ಎಷ್ಟು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಇಂದು ನಮ್ಮನ್ನು ಗುರಿಯಾಗಿಟ್ಟುಕೊಂಡು ಆರೋಪ ಮಾಡುವ ಪ್ರತಿಪಕ್ಷ ನಾಯಕರುಗಳು ಅವರ ಜೀವನದಲ್ಲಿ ಎಷ್ಟು ಮಾದರಿಯಾಗಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ, ಎಲ್ಲಾ ಸಚಿವರುಗಳು, ಶಾಸಕರ ಬಗ್ಗೆ ತನಿಖೆಯಾಗಲಿ, ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ಅಫೈರ್ ಇದೆ ಎಂದು ರಾಜ್ಯದ 224 ಜನಪ್ರತಿನಿಧಿಗಳ ಬಗ್ಗೆ ಕೂಡ ತನಿಖೆಯಾಗಿ ಹೊರಬರಲಿ, ನಾನು ಬಹಿರಂಗವಾಗಿಯೇ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.
ಯಾರು ಇವತ್ತು ಮರ್ಯಾದಾ ಪುರುಷರು, ಶ್ರೀರಾಮಚಂದ್ರನಂತವರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೋ ಅವರಿಗೆ ಸವಾಲು ಹಾಕುತ್ತೇನೆ, ನನ್ನನ್ನು ಸೇರಿಸಿ 224 ಜನ ಶಾಸಕರು ತನಿಖೆ ಎದುರಿಸಲಿ, ಯಾರ್ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ತನಿಖೆಯಿಂದ ಹೊರಬರಲಿ, ಆಗ ಗೊತ್ತಾಗುತ್ತದೆ ಯಾರ್ಯಾರ ಚರಿತ್ರೆ ಏನೇನು ಎಂದು ವಿರೋಧ ಪಕ್ಷದ ನಾಯಕರಿಗೆ ಸಚಿವ ಸುಧಾಕರ್ ತಿರುಗೇಟು ನೀಡಿದರು.