ಸಚಿವ ಸುಧಾಕರ್ ಏಕಪತ್ನಿ ವ್ರತಸ್ತ ಹೇಳಿಕೆಗೆ ಪ್ರಮುಖ ನಾಯಕರ ಹೇಳಿದ್ದೇನು?
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಾವು ಏಕಪತ್ನಿ ವ್ರತಸ್ತ ಎಂಬ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಪಕ್ಷೀಯರು ಸಚಿವ ಸುಧಾಕರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Published: 24th March 2021 04:23 PM | Last Updated: 24th March 2021 04:23 PM | A+A A-

ಸುಧಾಕರ್
ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಾವು ಏಕಪತ್ನಿ ವ್ರತಸ್ತ ಎಂಬ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಪಕ್ಷೀಯರು ಸಚಿವ ಸುಧಾಕರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಮುಖಂಡರು ಸುಧಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಅವರ ಹೇಳಿಕೆ ರಾಜಕೀಯವಾಗಿ ತೀವ್ರ ಕಿಡಿ ಹೊತ್ತಿಸಿದೆ.
ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಏಕಪತ್ನಿ ವ್ರತಸ್ತ ನನಗೆ ಒಂದೇ ಹೆಂಡತಿ, ಒಂದೇ ಸಂಸಾರ ಇರುವುದು ಎಂದು ತಿಳಿಸಿದ್ದಾರೆ. ಇಂತಹ ನುಡಿಮುತ್ತುಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಅವನು ಏನೇ ಹೇಳಲಿ ನನಗೆ ಒಬ್ಬಳೆ ಹೆಂಡತಿ ಒಂದೆ ಸಂಸಾರ. ಉಳಿದ ವಿಚಾರದ ಬಗ್ಗೆ ಸದನದ ಒಳಗೆ ಚರ್ಚೆ ಮಾಡುತ್ತೇನೆ. ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಇದನ್ನು ಸದನದಲ್ಲಿ ಚರ್ಚಿಸುತ್ತೇವೆ. ಎಲ್ಲಾ ಸದಸ್ಯರ ಮೇಲೆ ಅವರು ಆರೋಪ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೇಳಿದ್ದಾರೆ. ಹಾಗಾದರೆ ಎಲ್ಲರ ಮೇಲೂ ತನಿಖೆ ಮಾಡಿಸಲಿ, ಇಲ್ಲವಾದಲ್ಲಿ ಸತ್ಯ ಶೋಧನ ಸಮಿತಿ ರಚಿಸಲಿ. ಆರೋಗ್ಯ ಸಚಿವರು ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ತನಿಖೆಗೆ ಆದೇಶಿಸುವುದು ಒಳ್ಳೆಯದು. ಎಲ್ಲಾ 225 ಜನರ ಮೇಲೂ ತನಿಖೆ ನಡೆಯಲಿ ಎಂದರು.
ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರದಲ್ಲೂ ಇವರೆ ರಾಜ್ಯದಲ್ಲೂ ಇವರೇ ಆಡಳಿತದಲ್ಲಿದ್ದು, ತನಿಖೆ ನಡೆಯಲಿ. ಅಗತ್ಯ ಬಿದ್ದರೆ ರಾಮನ ದೇವಸ್ಥಾನಕ್ಕೆ ಹೋಗಿ ಬರಲಿ. ತನಿಖೆ ಮಾಡಲಿ ಬಿಡಿ ಎಂದು ಆಗ್ರಹಿಸಿದರು.
ಸುಧಾಕರ್ ಹೇಳಿಕೆಯನ್ನು ಕೇಳಿದ ತಕ್ಷಣ ಗಹಿಗಹಿಸಿ ನಕ್ಕ ಶಾಸಕಿ ಸೌಮ್ಯ ರೆಡ್ಡಿ, ಸುಧಾಕರ್ ಅವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ವಾ?. ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಯಾರೇ ಆಗಲಿ ಸಿಬಿಐಗೆ ಹೋಗಲಿ. ನಾವು ಒಬ್ಬರ ಪರ್ಸನಲ್ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿಲ್ಲ. ಇದನ್ನು ಸಚಿವ ಸುಧಾಕರ್ ಅರ್ಥ ಮಾಡಿಕೊಳ್ಳಲಿ. ಜನ ನಗುತ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ವಕ್ಷೀಯರಿಂದಲೂ ವಿರೋಧ
ಸುಧಾಕರ್ ಹೇಳಿಕೆ ಸಂಬಂಧ ಸ್ವಪಕ್ಷೀಯರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಅದು ಸುಧಾಕರ್ ಅವರ ವೈಯಕ್ತಿಕ ವಿಚಾರ. ಹೇಳಿಕೆ ಕೊಡುವ ಸಮಯದಲ್ಲಿ ಸ್ಪಷ್ಟವಾಗಿ ಹೇಳಬೇಕು. ಇಂತವರು ಇಂತವರು ಅಂತ ಹೇಳಬೇಕು. 224 ಜನ ಅಂತ ಹೇಳಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ರಾಜೂಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಮಂತ್ರಿ ಇದ್ದಾರೆ ನಾವೆಲ್ಲ ಶಾಸಕರು. ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ನಾವು ಸಾಮಾನ್ಯ ಜನರಂತಲ್ಲ. ನಮಗೂ ಜವಾಬ್ದಾರಿ ಇದೆ. ಶಾಸಕರಾಗಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಇಂತಹ ಹೇಳಿಕೆಯನ್ನು ಅವರು ಕೊಡಬಾರದು ಎಂದರು.
ಅಂತಹ ಹೇಳಿಕೆ ನೀಡಿರುವುದು ತಪ್ಪು ಎಂದು ಸಚಿವೆ ಶಶಿಕಲಾ ಜೊಲ್ಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಅವರ ಹೇಳಿಕೆಯನ್ನು ಇನ್ನೂ ನೋಡಿಲ್ಲ. ಆ ರೀತಿ ಹೇಳಿಕೆ ಕೊಡುವುದು ತಪ್ಪು. ಎಲ್ಲರ ಕುರಿತು ಆ ರೀತಿ ಹೇಳುವುದು ಸರಿಯಲ್ಲ. ನಾವು ಮಹಿಳಾ ಶಾಸಕರೂ ಇದ್ದೇವೆ. ಎಲ್ಲರ ಕುರಿತು ಆಪಾದನೆ ಮಾಡುವುದು ಸರಿಯಲ್ಲ ಎಂದರು.