
ಕರ್ನಾಟಕ ವಿಧಾನಸಭೆ ಚುನಾವಣೆ
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನ ಮುಕ್ತಾಯಗೊಂಡಿದ್ದು ಮೂರು ರಾಜಕೀಯ ಪಕ್ಷಗಳು ಉಪ ಚುನಾವಣೆಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಿದ್ದಾರೆ.
ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆ ಉಪಚುನಾವಣೆ ಕ್ಷೇತ್ರಗಳ ಚುನಾವಣೆಗಾಗಿ ವಿರೋಧ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿವೆ.
ವಿಧಾನ ಮಂಡಲ ಅಧಿವೇಶನವನ್ನು ಮುಂದೂಡುವ ಮೊದಲು ಧನ ವಿಧೇಯಕ ಮಸೂದೆಗೆ ಅಂಗೀಕಾರ ನೀಡಲಾಯಿತು. ಇನ್ನು ರಾಜ್ಯ ವಿಧಾನಸಭೆ ಉಪಚುನಾವಣೆ ಮಾತ್ರವಲ್ಲದೆ ಇತರ ನಾಲ್ಕು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಳಿಗಾಗಿ ಸಿ.ಟಿ ರವಿ, ಡಾ.ಸಿಎನ್ ಅಶ್ವತ್ಥ್ ನಾರಾಯಣ, ಮತ್ತು ಸುರೇಶ್ ಕುಮಾರ್ ಹಾಗೂ ಸುನೀಲ್ ಕುಮಾರ್ ಅವರನ್ನು ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಧರಣಿ ನಡುವೆಯೇ ಅನುದಾನದ ಬೇಡಿಕೆಗಳು, 2021-22ನೇ ಸಾಲಿನ ಬಜೆಟ್ ಗೆ ಸದನದಲ್ಲಿ ಅನುಮೋದನೆ ನೀಡಲಾಯಿತು. ಸದನದಲ್ಲಿ ಗದ್ದಲ ಉಂಟು ಮಾಡಿದ ಸದಸ್ಯರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಗಂಭೀರತೆಯಿಂದ ವರ್ತಿಸಬೇಕು. ಈ ರೀತಿ ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು. ಸಂಸದೀಯ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಭಿನ್ನಾಭಿಪ್ರಾಯಗಳಿದ್ದರೆ ಸದನದ ಹೊರಗೆ ಬಗೆಹರಿಸಿಕೊಳ್ಳಬೇಕು ಎಂದರು.
ಬಳಿಕ, ಮುಖ್ಯಮಂತ್ರಿ ಅವರು ಕರ್ನಾಟಕ ಸಾರ್ವಜನಿಕ ಸಂಗ್ರಹ ವಿಧೇಯಕವನ್ನು ಮಂಡಿಸಿದರು. ಧರಣಿ ನಡುವೆಯೇ ಈ ಮಸೂದೆಗೆ ಸದನ ಅನುಮೋದನೆ ನೀಡಿತು. ಬಳಿಕ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ಭೋಜನ ವಿರಾಮದ ನಂತರವೂ ಗದ್ದಲ ಕೋಲಾಹಲ ಉಂಟಾದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು