ವಾರ್ ರೂಂ ಭೇಟಿ ವೇಳೆ ನಾನು ಕ್ಷಮೆ ಕೇಳಿಲ್ಲ: ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ ವಾರ್ಡ್‌ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ರೀತಿ ಯಾರದೇ ಕ್ಷಮೆ ಕೇಳಿಲ್ಲ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ ವಾರ್ಡ್‌ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ರೀತಿ ಯಾರದೇ ಕ್ಷಮೆ ಕೇಳಿಲ್ಲ ಎಂದು ತೇಜಸ್ವಿ ಸೂರ್ಯ ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ನಾನು ಕ್ಷಮೆಯಾಚಿಸಿಲ್ಲ ಎಂದಿದ್ದಾರೆ. ಅಲ್ಲದೆ ವಾರ್‌ ರೂಮ್‌ ಸಿಬ್ಬಂದಿ ಮೊಬೈಲ್‌ ಸಂಖ್ಯೆಗಳು ಸೋರಿಕೆಯಾಗಿದ್ದು, ಬೆದರಿಕೆ ಕರೆಗಳು ಬರುತ್ತಿರುವ ಕುರಿತು ತೇಜಸ್ವಿ ಸಿಬ್ಬಂದಿಯ ಬಳಿ ಕ್ಷಮೆ ಕೇಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಾವು ಯಾರ ಬಳಿಯೂ ಕ್ಷಮೆ ಕೇಳಿಲ್ಲ ಎಂದು ತೇಜಸ್ವಿ ಸೂರ್ಯ ಖಚಿತ ಪಡಿಸಿದ್ದಾರೆ, ಈ ಸಂಬಂಧ ಬಂದಿರುವ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ.

ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದ ತೇಜಸ್ವಿ ಸೂರ್ಯ, ಈ ವೇಳೆ 17 ಮುಸ್ಲಿಂ ನೌಕರರ ಹೆಸರು ಮಾತ್ರ ಉಲ್ಲೇಖಿಸಿ ನೇರ ಆರೋಪ ಮಾಡಿದ್ದರು. ಆದರೆ, 200ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುವ ಈ ವಾರ್ ರೂಮ್ ನ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಒಬ್ಬ ಮುಸ್ಲಿಂ ಯುವಕ ಮಾತ್ರ ಕೆಲಸ ಮಾಡುತ್ತಿದ್ದರು. ಬೆಡ್ ಬ್ಲಾಕಿಂಗ್ ಹಗರಣಕ್ಕೂ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ಸಂಸದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ಸಂಜೆ 7 ಗಂಟೆ ಸುಮಾರಿಗೆ ವಾರ್ ರೂಂ ಬಳಿ ಬಂದ ತೇಜಸ್ವಿ ಸೂರ್ಯ ಪಾರ್ಕಿಂಗ್ ಬಳಿ ಕಾಯುತ್ತಿದ್ದರು. ವಾರ್ ರೂಂ ಬಳಿ ಜನ ಕಡಿಮೆಯಾದ ನಂತರ ಸುಮಾರು 7.30ರ ವೇಳೆಗೆ ವಾರ್ ರೂಂಗೆ ಬಂದರು, ಆ ನಂತರ ನನ್ನ ಉದ್ದೇಶ ಇದಾಗಿರಲಿಲ್ಲ, ದಯವಿಟ್ಟು ನನ್ನ ಕ್ಷಮಿಸಿ,  ಜನರಿಗೆ ಸಹಾಯ ಮಾಡುವುದು ನನ್ನ ಉದ್ದೇಶವಾಗಿತ್ತು, ನಿಮ್ಮ ನಂಬರ್ ಲೀಕ್ ಮಾಡಿ ಜನರೆದರು ಸಣ್ಣವರನ್ನಾಗಿ ಮಾಡುವ ಉದ್ದೇಶ ನನ್ನದಾಗಿರಲಿಲ್ಲ,  ನಿಮ್ಮ ಮೊಬೈಲ್ ನಂಬರ್ಸ್ ಲೀಕ್ ಆಗಿರುವ ಕಾರಣ ನಿಮಗೆ ಕರೆಗಳು ಬರುತ್ತಿವೆ, ಎಲ್ಲರೂ ಹೊಣೆಗಾರರು ಎಂದು ಹೇಳುತ್ತಿಲ್ಲ. ಅವರಲ್ಲಿ ಕೆಲವರ ಬಂಧನವಾಗಿದೆ. ನಿಮ್ಮ ನಂಬರ್ ಬದಲಾಯಿಸಿ, ನಾನು ಹೊಸ ಸಿಮ್ ಕಾರ್ಡ್ ನೀಡುತ್ತೇನೆ, ಎರಡು ಮೂರು ದಿನ ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ, ನಿಮಗೆ ಕಿರುಕುಳ ನೀಡುತ್ತಿರುವವರು ಸುಮ್ಮನಾಗುತ್ತಾರೆ, ನಿಮ್ಮ ಕುಟುಂಬದ ಸದಸ್ಯರ ಕರೆ ಮಾತ್ರ ಸ್ವೀಕರಿಸಿ, ಉಳಿದ ಕರೆಗಳನ್ನು ನಿರ್ಲಕ್ಷ್ಯಿಸಿ,
ನಾನು ಹೇಗೆ ಮಾಡುತ್ತೇನೋ ನೀವು ಹಾಗೆಯೇ ಮಾಡಿ ಎಂದು ಹೇಳಿದ್ದಾರೆಂದು ವರದಿಯಾಗಿತ್ತು.

ಆದರೆ ಈ ಐಡಿಯಾ ಸಿಬ್ಬಂದಿಗೆ ಸರಿಕಾಣಲಿಲ್ಲ, ನಮ್ಮ ನಂಬರ್ ಹೇಗೆ ಲೀಕ್ ಆದವು? ಬ್ಯಾಂಕ್ ಖಾತೆ ಮತ್ತು ಸರ್ಕಾರಿ ದಾಖಲೆಗಳಿಗೆ ನೀಡಿರುವ ನಂಬರ್ ಬದಲಾಯಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ, ಈ ವೇಳೆ ಸೂರ್ಯ ಬಿಬಿಎಂಪಿ ಅಧಿಕಾರಿಗಳು ಮತ್ತು ಏಜೆನ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿ ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿ ಮೊಬೈಲ್ ಸಂಖ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಡಿಲೀಟ್ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿ ಎಂದು ಹೇಳಿದ್ದಾರೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಇದೆಲ್ಲಾ ಮುಗಿದು ಹೋಗುತ್ತದೆ. ಒಳ್ಳೆಯ ಸಲಹೆ ಎಂದರೇ ಮೊಬೈಲ್ ಸ್ವಿಚ್ ಆಫ್ ಮಾಡುವುದಾಗಿದೆ ಎಂದು ಹೇಳಿದ್ದಾರೆ. ನನ್ನ ಮತದಾರರು ನನ್ನನ್ನು ಪ್ರಶ್ನಿಸುತ್ತಿರುವುದರಿಂದ ನಾನು ವಿಚಾರಿಸಬೇಕಾಗಿತ್ತು ಎಂದು ಅವರು ಹೇಳಿದ ಸೂರ್ಯ ಹಾನಿಯನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಾಗ ನಾನು ಕೂಡ ನಿಮ್ಮ ಜೊತೆ ಬಂದು ತೆಗೆದುಕೊಳ್ಳುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇನ್ನೂ ಪ್ರಕರಣ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಸಿಬ್ಬಂದಿ ತೇಜಸ್ವಿ ಸೂರ್ಯ ಸ್ಟಿಂಗ್ ಮಾಡಬಹುದಾದರೇ ನಾವೇಕೆ ಮಾಡಬಾರದು? ಅವರು ಹೇಳಿದ ಮಾತುಗಳಲ್ಲಿ ನಮಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com