ನಿಮ್ಮ ಪಾಪದ ಹಣದಲ್ಲಿ ಲಸಿಕೆ ಪಡೆಯುವ ಅನಿವಾರ್ಯತೆ ಜನರಿಗಿಲ್ಲ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ಕೋವಿಡ್ ಲಸಿಕೆ ಪಡೆಯಲು 100 ಕೋಟಿ ರೂ ದೇಣಿಗೆ ನೀಡುವ ಕುರಿತು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಿಮ್ಮ ಪಾಪದ ಹಣದಲ್ಲಿ ಲಸಿಕೆ ಪಡೆಯುವ ಅನಿವಾರ್ಯತೆ ಜನರಿಗಿಲ್ಲ ಎಂದು ಹೇಳಿದೆ.
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ (ಪಿಟಿಐ ಚಿತ್ರ)
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ (ಪಿಟಿಐ ಚಿತ್ರ)

ಬೆಂಗಳೂರು: ಕೋವಿಡ್ ಲಸಿಕೆ ಪಡೆಯಲು 100 ಕೋಟಿ ರೂ ದೇಣಿಗೆ ನೀಡುವ ಕುರಿತು ಘೋಷಣೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಬಿಜೆಪಿ, ನಿಮ್ಮ ಪಾಪದ ಹಣದಲ್ಲಿ ಲಸಿಕೆ ಪಡೆಯುವ ಅನಿವಾರ್ಯತೆ ಜನರಿಗಿಲ್ಲ ಎಂದು ಹೇಳಿದೆ.

ಜನರಿಗೆ ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ. 'ಡಿ.ಕೆ. ಶಿವಕುಮಾರ್ ಅವರೇ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ.  ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ ಎಂದು ರಾಜ್ಯ ಬಿಜೆಪಿ ಟ್ವಿಟರ್‌ ಖಾತೆಯಲ್ಲಿ ಟೀಕಿಸಲಾಗಿದೆ. 

'ಮಾನ್ಯ ಡಿಕೆ ಶಿವಕುಮಾರ್ ಅವರೇ, ಉಚಿತ ಲಸಿಕೆ‌ ನೀಡಲು ನಿಮ್ಮ‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು,  ಗೋವಾದಿಂದ ಇಟಲಿಗೋ? ಎಂದು ವ್ಯಂಗ್ಯ ಮಾಡಲಾಗಿದೆ.

ಅಂತೆಯೇ, 'ಸಂಕಷ್ಟದ ಸಮಯದಲ್ಲಿ ಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿಕೆ ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಒಂದಿಷ್ಟು ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು  ಬಿಟ್ಟು ಸುಮ್ಮನಿರುವಿರಾ? ಎಂದು ಕೇಳಿದೆ.

ಬೆಳಗ್ಗೆಯಷ್ಟೇ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರ‌ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ ಸೇರಿದಂತೆ 100 ರೂ ಕೋಟಿಯನ್ನು ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ ಒಪ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಶುಕ್ರವಾರ ಜಂಟಿ  ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಷಯ ಪ್ರಕಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com