ಪ್ರಧಾನಿ ನರೇಂದ್ರ ಮೋದಿಯದ್ದು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರದ್ದು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರದ್ದು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಛೇರಿಯಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ಕೊಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೇಂದ್ರಕ್ಕೆ ಛೀಮಾರಿ ಹಾಕಿದರೂ ರಾಜ್ಯಕ್ಕೆ ವ್ಯಾಕ್ಸಿನ್ ನೀಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೇಜವಬ್ದಾರಿ ಸರ್ಕಾರವನ್ನು ನೋಡುತ್ತಿರುವುದು ಇದೇ ಮೊದಲು.

ಕೋವಿಡ್ 19 ಸಾಂಕ್ರಾಮಿಕ ರೋಗ ಬಂದು ಒಂದು ವರ್ಷಕ್ಕಿಂತ ಜಾಸ್ತಿ ಆಗಿದೆ. ಕಳೆದ ಜನವರಿಯಲ್ಲಿಯೇ ಭಾರತಕ್ಕೆ ಕಾಲಿಟ್ಟಿದೆ. ಮೊದಲ ಅಲೆಯಿಂದಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಡು ಅನುಭವವಾಗಿದೆ‌. ಎರಡನೇ ಅಲೆ ಪ್ರಖರತೆ ಬಗ್ಗ ತಜ್ಞರ ಸಲಹೆ ಬಗ್ಗೆ ಮಾಹಿತಿ ಇತ್ತು. ಎಲ್ಲರಿಗೂ ವ್ಯಾಕ್ಸಿನ್ ನೀಡಿದರೆ ಸೋಂಕು ನಿಯಂತ್ರಣವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದರು‌. ಇದು ಕೇಂದ್ರಕ್ಕೂ ಗೊತ್ತಿತ್ತು. ಕರ್ನಾಟಕದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು 45 ಕೆಳಗಿನವರು 3 ಕೋಟಿ 24 ಲಕ್ಷ ಜನ ಇದಾರೆ. 1ಕೋಟಿ ವ್ಯಾಕ್ಸಿನ್ ಗೆ ಸುಮಾರು 300ಕೋಟಿ ರೂ.ಹಣ ಬೇಕು. ಸರ್ಕಾರ ಯಾವುದೇ ರೀತಿಯ ತಯಾರಿಯಲ್ಲಿ‌ ಇರಲಿಲ್ಲ‌. ಹೀಗಾಗಿ ವ್ಯಾಕ್ಸಿನ್ ಕೂಡ ಸಿಗುತ್ತಿಲ್ಲ. 18ರಿಂದ 44ವರ್ಷದ ಒಳಗಿನ ಅವರಿಗೆ 1% ವ್ಯಾಕ್ಸಿನ್ ಕೂಡ ಸರ್ಕಾರ ಹಾಕಿಲ್ಲ. ಸರ್ಕಾರ ಜನರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಕೋವಿ ಶೀಲ್ಡ್ 12ರಿಂದ 16 ವಾರ‌ ಸೆಕೆಂಡ್ ಡೋಸ್ ತಗೋಬಹುದೆಂದು ಸರ್ಕಾರ ಹೇಳಿದೆ. ಮೊದಲೇ ಹೇಳಿದಂತೆ ನಾಲ್ಕರಿಂದ 6 ವಾರ ಸೆಕೆಂಡ್ ಡೋಸ್ ತೆಗೆದುಕೊಳ್ಳಬಹುದಾಗಿತ್ತು. ಆದರೆ ಈಗ ತಜ್ಞರು ಸುಳ್ಳು ಹೇಳುತ್ತಿದ್ದಾರೆ ಎಂದನಿಸುತ್ತಿದೆ. ಒಂದು ಸಲ ನಾಲ್ಕು ವಾರ, ಆರು ವಾರ, 12 ರಿಂದ 16 ವಾರ ಎನ್ನುತ್ತಾರೆ. ಇವರಿಗೆ ಯಾವುದೇ ಸ್ಪಷ್ಟತೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿದಂತೆ ಒಟ್ಟು ನೂರು ಕಾಂಗ್ರೆಸ್ ನಾಯಕರು ತಲಾ‌ ಒಂದು ಕೋಟಿ ಹಣವನ್ನು ವ್ಯಾಕ್ಸಿನ್ ಖರೀದಿಗೆ ಕೊಡುವುದಾಗಿ ಅವರು ಘೋಷಿಸಿದರು.

ಈ ಸರ್ಕಾರಗಳು ಜನರನ್ನು ಗೊಂದಲ ಮಾಡುತ್ತಿವೆ. ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್ ಎನ್ ವಿ ರಮಣ ಅವರು ಸಹ ಕೊರೋನಾ ಆತಂಕದಲ್ಲಿದ್ದಾರೆ. ಯಾವುದೇ ಧರ್ಮ, ಯಾವುದೆರ ಜಾತಿಯ ಜನರನ್ನು ಕೊರೋನಾ ಬಿಡುವುದಿಲ್ಲ. ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ವ್ಯಾಕ್ಸಿನ್ ಕೊಡುತ್ತೇವೆ ಎನ್ನುವ ಮೂಲಕ ಬಿಜೆಪಿ ನಾಯಕರು ಜವಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ‌ಕೊಡುವಂತಹ ವ್ಯವಸ್ಥೆ ಆಗಬೇಕು. ಈಗಿನ ವರದಿ ಪ್ರಕಾರ ಮಕ್ಕಳು ಗರ್ಭಿಣಿಯರಿಗೂ ಕೊಡಬಹುದೆಂದು ವರದಿ ಹೇಳಿದೆ ಎಂದರು.

ಸಂವಿಧಾನದ ಬಗ್ಗೆ ಗೊತ್ತಿದ್ದರೂ ಬಿಜೆಪಿ ನಾಯಕ ಸಿ.ಟಿ ರವಿ ನ್ಯಾಯಾಧೀಶರ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಟೀಕಿಸಿದ ಸಿದ್ದರಾಮಯ್ಯ, ಇಂತಹ ಬೇಜವಬ್ದಾರಿ ಹೇಳಿಕೆ ಸಿ.ಟಿ‌ ರವಿಯಿಂದ‌ ನಿರೀಕ್ಷೆ ‌ಮಾಡಿರಲಿಲ್ಲ. ಇದು ದುರಂಹಕಾರದ ಹೇಳಿಕೆ. ಸರ್ಕಾರ ವಿಫಲವಾದರೆ ಸುಪ್ರೀಂ, ಹೈಕೋರ್ಟ್ ಕಣ್ಮುಚ್ಚಿ‌ ಕುಳಿತುಕೊಂಡಿರಬೇಕೇ.? ನಮ್ಮಲ್ಲೇ ಇಷ್ಟೊಂದು ಜನಸಂಖ್ಯೆ ಇದ್ದಾಗ ಲಸಿಕೆ ಅವಶ್ಯಕತೆಯಿದ್ದಾಗ ಕೇಂದ್ರ ಬೇರೆಕಡೆ ರಫ್ತು ಮಾಡಬೇಕಿತ್ತೇ? ಸಿ.ಟಿ ರವಿ ನ್ಯಾಯ ಕೊಡಲು ಆಗುತ್ತದೆಯೇ? ಇವರಿಗೆ ಸಂವಿಧಾನದ ಬಗ್ಗೆ ಗೌರವ ಇದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಆರೋಗ್ಯ ಸಚಿವರು ಆಕ್ಸಿಜನ್ ನಿಂದ ಮೂರೇ ಜನರು ಸತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಆದರೆ ನನಗೆ ಬಂದಿರುವ ಮಾಹಿತಿ‌ ಪ್ರಕಾರ ಆಕ್ಸಿಜನ್ ಕೊರತೆಯಿಂದಲೇ 36 ಜನ ಸತ್ತಿದ್ದಾರೆಂದು ವರದಿಯೇ ಹೇಳಿದೆ. ಘಟನೆ ನಂತರ ಆರೋಗ್ಯ ಸಚಿವರು ಆಸ್ಪತ್ರೆಗೆ ಹೋಗೀಮೂರೇ ಜನ ಆಕ್ಸಿಜನ್ ಕೊರತೆಯಿಂದ ಸತ್ತಿದ್ದು ಎಂದರು. ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು. ನಾವು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆವು.

ಆಕ್ಸಿಜನ್ ನಿಂದ 28 ಜನ ಸತ್ತಿದ್ದಾರೆ ಎಂದು ವೈದ್ಯರೇ ಒಪ್ಪಿದ್ದಾರೆ. ಈಗ ವರದಿ ಬಂದಿರುವುದು ಜನ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಅಂತ. ಇವರು ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸುರೇಶ್ ಕುಮಾರ್, ಸುಧಾಕರ್ ರಾಜೀನಾಮೆ ಕೊಡಬೇಕು‌. ಒಂದು ಕ್ಷಣ ಇವರನ್ನ ಇಟ್ಟುಕೊಳ್ಳದೆ ರಾಜೀನಾಮೆ ಪಡೆಯಬೇಕು. ಸಿಎಂ, ಈ ಇಬ್ಬರು ಸಚಿವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಹೈಕೋರ್ಟ್ ರಿಟೈರ್ಡ್ ಜಡ್ಜ್ ಕಮಿಟಿ ವರದಿ ಕೊಟ್ಟಿದೆ. ವರದಿ ಕೊಟ್ಟ ಮೇಲೆ ಒಂದು ಕ್ಷಣವೂ ಇವರು ಸಚಿವರಾಗಿರಬಾರದು. ಸುಧಾಕರ್, ಸುರೇಶ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇವರು ಸಾಕ್ಷಿನಾಶಕ್ಕೆ ಪ್ರಯತ್ನ ಮಾಡಿದ್ದಾರೆ. ಆಕ್ಸಿಜನ್ ನಿಂದ ಸತ್ತವರ ಲೆಕ್ಕ ಮರೆಮಾಚೋಕೆ ನೋಡಿದ್ದಾರೆ. ಇದರ ಬಗ್ಗೆಯೂ ತನಿಖೆಯಾಗಬೇಕು ಎಂದಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com