ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಸಿದ್ದರಾಮಯ್ಯ ನಿರ್ಧಾರ!

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊರೋನಾ ಸೋಂಕು ಬಗ್ಗೆ ಬಹಳ ಸುಳ್ಳುಗಳನ್ನು ಹೇಳುತ್ತಿದೆ. ನಾವದನ್ನು ಬಯಲು ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮುಂಬರಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ‌ ನಿರ್ಧರಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಕೊರೋನಾ ಸ್ಥಿತಿಗತಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಿದ್ದರಾಮಯ್ಯ ಮಾಹಿತಿ ಕೇಳಿದ್ದಕ್ಕೆ ಸರ್ಕಾರ ತಡೆಹಿಡಿದಿದೆ‌. ಕೊರೋನಾದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊರೋನಾದಿಂದಾಗಿ ರಾಜ್ಯ ಸೂತಕದ ಮನೆಯಾಗಿದೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಂದ ತಾವು ಮಾಹಿತಿ ಪಡೆಯುವ ಉದ್ದೇಶವೇ ಹೊರತು ಇದು ಜಿಲ್ಲಾಧಿಕಾರಿಗಳ ಸಭೆ ಅಥವಾ ಪ್ರಗತಿ ಪರಿಶೀಲನೆ ಸಭೆ ಅಲ್ಲ. ಆದರೆ ಮಾಹಿತಿ ಸಂಗ್ರಹಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ವಿರೋಧ ಪಕ್ಷದ ನಾಯಕ ಎನ್ನುವುದು ಸಾಂವಿಧಾನಿಕ ಹುದ್ದೆ. ಹೀಗಾಗಿ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿರುವುದರಿಂದ ಹಕ್ಕುಚ್ಯುತಿ ಆಗಿದೆ. ಆದ್ದರಿಂದ ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.

2009ರಲ್ಲಿಯೂ ಸರ್ಕಾರ ಇದೇ ನಿಲುವು ಅನುಸರಿಸಿತ್ತು. ಸರ್ಕಾರದ ಹುಳುಕು ಹೊರ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿದ್ದಾರೆ. ಕೊರೋನಾ ನಿಯಂತ್ರಣ ಮತ್ತು ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರಯಪಯುಕ್ತ ಎಂಬುದು ಸಾಬೀತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜನತೆ ಸರ್ಕಾರಕ್ಕೆ ಹಾಗೂ ಸಿಎಂ ಅವರಿಗೆ ಶಾಪ ಹಾಕುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ಈ ವರೆಗೆ 12 ಪತ್ರಗಳನ್ನು ಬರೆದಿದ್ದರೂ ಸಹ ಅದಕ್ಕೂ ಸರ್ಕಾರದಿಂದ ಉತ್ತರ ಬಂದಿಲ್ಲ. ಉತ್ತರಿಸುವ ಸೌಜನ್ಯವೂ ಮುಖ್ಯಮಂತ್ರಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಗೆ ದ್ರೋಹವೆಸಗುತ್ತಿದೆ. ಅತ್ತ ಪ್ರಧಾನಿ ನರೇಂದ್ರ ಮೋದಿಯವರೂ ಪ್ರತಿಪಕ್ಷಗಳ ಯಾವುದೇ ಪತ್ರಕ್ಕೂ ಉತ್ತರ ನೀಡುವುದಿಲ್ಲ. ಅದೇ ನಿಲುವನ್ನೂ ಯಡಿಯೂರಪ್ಪ ಸಹ ಅನುಸರಿಸುತ್ತಿದ್ದಾರೆ. ಯಥಾ ರಾಜ ತಥಾ ಪ್ರಜೆ ಎನ್ನುವಂತೆ ಆಗಿದೆ. ಈ ಸರ್ಕಾರದ ವೈಫಲ್ಯದಿಂದ ಸಾವಿರಾರು ಜನ ಸಾಯುತ್ತಿದ್ದಾರೆ. ಸತ್ಯ ಹೇಳಿದರೆ ಕೇಸು ದಾಖಲಿಸುವ, ಬಂಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ ಸುಮಾರು 24 ಸಾವಿರ ಮಂದಿ ನಿಧನರಾಗಿದ್ದಾರೆ ಎಂದು ಸರ್ಕಾರ ತೋರಿಸುತ್ತಿದೆ. ಆದರೆ ನನ್ನ ಪ್ರಕಾರ, ಕೋವಿಡ್ ಎರಡನೇ ಅಲೆ ಬಂದ ಮೇಲೆ 10 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಇನ್ನು ಹಳ್ಳಿಗಳಲ್ಲಿ ಸೋಂಕಿತರು, ಐಸೊಲೇಷನ್ ನಲ್ಲಿರುವವರು ಎಷ್ಟಿದ್ದಾರೆಂದು, ಎಷ್ಟು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಸರಿಯಾಗಿ ಅಂಕಿಅಂಶ ಕೊಡುತ್ತಿಲ್ಲ. ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಆಪಾದಿಸಿದರು.

ಚಾಮರಾಜನಗರದಲ್ಲಿ ಸತ್ತಿದ್ದು 36 ರೋಗಿಗಳು: ರೋಗಿಗಳು ಆಕ್ಸಿಜನ್ ಇಲ್ಲದೆ ಸತ್ತರೆ ಸರ್ಕಾರವೇ ಹೊಣೆಯಾಗುತ್ತದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸತ್ತ ಬಳಿಕ ನಾನು ಮತ್ತು ಡಿ ಕೆ ಶಿವಕುಮಾರ್ ಹೋಗಿದ್ದೆವು. ಮೇ 2ನೇ ತಾರೀಖು ರಾತ್ರಿ 36 ರೋಗಿಗಳು ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ, ಹಾಗಾದರೆ ಈ ಸಾವಿಗೆ ಸರ್ಕಾರ ಹೊಣೆಯಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪರಿಹಾರ ವಿಚಾರದಲ್ಲಿ ತಾರತಮ್ಯ: ಪ್ರವಾಹ ಪರಿಹಾರದ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಧೊರಣೆ ಅನುಸರಿಸುತ್ತಿದೆ. ಗುಜರಾತ್ ಗೆ ಒಂದು ಸಾವಿರ ಕೋಟಿ ರೂಪಾಯಿಗಳ ಪರಿಹಾರ ಘೋಷಣೆ ಮಾಡಿರುವ ಪ್ರಧಾನಿಯವರು ಚಂಡಮಾರುತದಿಂದ ತತ್ತರಿಸಿರುವ ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ. ಚಂಡಮಾರುತದಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಆದರೂ ಪರಿಹಾರ ಕೊಟ್ಟಿಲ್ಲ. ನಾವು ಕೋವಿಡ್ ಲಸಿಕೆ ನೀಡುವುದಕ್ಕೆ ನಾವು ವಿರೋಧ ಮಾಡಿರಲಿಲ್ಲ. ಎಲ್ಲರಿಗೂ ಲಸಿಕೆ ಸಿಗಗಲಬೇಕು. ಅದಕ್ಕಾಗಿ ಅಭಿಯಾನ ನಡೆಸಬೇಕು ಎಂದು ಈಗಲೂ ಒತ್ತಾಯ ಮಾಡುತ್ತೇವೆ. ಲಸಿಕೆಯೇ ಇಲ್ಲದೆ ಆಂದೋಲನಕ್ಕೆ ಚಾಲನೆ ನೀಡಿದವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com