ಸರ್ಕಾರದ ಆರ್ಥಿಕ ಪ್ಯಾಕೇಜ್'ನ್ನು 'ಬೋಗಸ್' ಎಂದ ಕಾಂಗ್ರೆಸ್ ನಾಯಕರು

ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕೋವಿಡ್-19 ಆರ್ಥಿಕ ಪ್ಯಾಕೇಜ್'ನ್ನು ರಾಜ್ಯ ಕಾಂಗ್ರೆಸ್ ನಾಯಕರು ಕಣ್ಣೊರೆಸುವ ಪ್ಯಾಕೇಜ್ ಎಂದು ಟೀಕಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಕೋವಿಡ್-19 ಆರ್ಥಿಕ ಪ್ಯಾಕೇಜ್'ನ್ನು ರಾಜ್ಯ ಕಾಂಗ್ರೆಸ್ ನಾಯಕರು ಕಣ್ಣೊರೆಸುವ ಪ್ಯಾಕೇಜ್ ಎಂದು ಟೀಕಿಸಿದ್ದಾರೆ. 

ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರುಗಳು, ಶಾಸಕರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ರಿಜ್ವಾನ್ ಅರ್ಷದ್ ಅವರು, ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ನ್ನು ಬೋಗಸ್ ಎಂದು ಕರೆದಿದ್ದಾರೆ. ಅಲ್ಲದೆ, ಲಾಕ್‌ಡೌನ್ ಬಾಧಿತರಿಗೆ ಕನಿಷ್ಟ ೧೦ ಸಾವಿರ ನೆರವು ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರದ ಆರ್ಥಿಕ ಪ್ಯಾಕೇಜ್ ನಿಂದ ಯಾರಿಗೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ಸಹ ಪ್ಯಾಕೇಜ್ ಘೋಷಿಸಲಾಗಿತ್ತು. ಆ ಪ್ಯಾಕೇಜೇ ಇನ್ನೂ ಫಲಾನುಭವಿಗಳಿಗೆ ತಲುಪಿಲ್ಲ ಎಂದು ದೂರಿದರು.

ಸರ್ಕಾರ ಈ ವರ್ಷ ರೂ.1,250 ಕೋಟಿ ಪ್ಯಾಕೇಜ್ ಘೋಷಿಸಿದೆ. ರಾಜ್ಯದಲ್ಲಿ 3.5 ಲಕ್ಷ ರೈತರಿದ್ದಾರೆ. ಆದರೆ, 89 ರೈತರಿಗೆ ಮಾತ್ರ ನೆರವು ನೀಡುವುದಾಗಿ ಹೆಳಿದೆ. ಉಳಿದವರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಲಾಕ್‌ಡೌನ್‌ನಿಂದ ಕೋಟ್ಯಂತರ ಜನ ಆದಾಯ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರತಿ ಬಡವರಿಗೂ 10 ಸಾವಿರ ರೂ.ಗಳನ್ನು ನೇರವಾಗಿ ಅವರ ಖಾತೆಗೆ ಹಾಕಿ ಎಂದು ಆಗ್ರಹಿಸಿದರು.

ಕಳೆದ ವರ್ಷದ ರಾಜ್ಯದ ಪ್ಯಾಕೇಜ್ ಆಗಲಿ, ಕೇಂದ್ರದ ಪ್ಯಾಕೇಜ್ ಆಗಲಿ ಯಾರಿಗೂ ತಲುಪಿಲ್ಲ. ಕಳೆದ ವರ್ಷ ಸರ್ಕಾರ ತೋಟಗಾರಿಕೆಗೆ 137 ಕೋಟಿ ಪ್ಯಾಕೇಜ್ ಘೋಷಿಸಿತ್ತು. ಆದರೆ, ಪಾವತಿಯಾಗಿರುವುದು 50 ಕೋಟಿ. ಹಾಗೆಯೇ ಹೂ ಬೆಳೆಗಾರರಿಗೆ ಘೋಷಿಸಿದ್ದ 31 ಕೋಟಿಯಲ್ಲಿ ಪಾವತಿಯಾಗಿರುವುದು 15 ಕೋಟಿ ಮಾತ್ರ. 2.5 ಲಕ್ಷ ಸವಿತಾ ಸಮಾಜದವರಿಗೆ ಘೋಷಿಸಿದ್ದ 5 ಸಾವಿರ ಪರಿಹಾರದ ಪೈಕಿ ಕೇವಲ 55.466 ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಆದರೆ, 7.45 ಲಕ್ಷ ಚಾಲಕರ ಪೈಕಿ 2 ಲಕ್ಷ 14 ಸಾವಿರ ಚಾಲಕರಿಗೆ ಮಾತ್ರ ಪರಿಹಾರ ದೊರೆತಿದೆ. ಹಾಗೆಯೇ ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ ಸರ್ಕಾರದ ಪ್ಯಾಕೇಜ್ ತಲುಪಿಲ್ಲ ಎಂದು ಹರಿಹಾಯ್ದರು.

ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರದಲ್ಲಿ ಲಾಕ್‌ಡೌನ್ ಬಾಧಿತರಾದ ರೈತರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಚಾಲಕರು, ಕುಶಲಕರ್ಮಿಗಳಿಗೆ ನೀಡಿರುವ ಪರಿಹಾರ ದೊಡ್ಡದು, ರಾಜ್ಯಸರ್ಕಾರ ಈಗಲಾದರೂ ಎಲ್ಲರಿಗೂ ಕನಿಷ್ಟ 10 ಸಾವಿರ ರೂ.ಗಳ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com