ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು: ಚರ್ಚೆಗೆ ಮುಂದಾದ ನಾಯಕರು

ಉಪಚುನಾವಣೆ ಫಲಿತಾಂಶವು ಭವಿಷ್ಯದ ಚುನಾವಣೆಗಳಿಗೆ ದಿಕ್ಸೂಚಿಯಾಗದಿರಬಹುದು, ಆದರೆ 2023ರ ವಿಧಾನಸಭಾ ಚುನಾವಣೆಗೆ ಕಾರಣವಾಗುವ ಸರಣಿ ಚುನಾವಣೆಗಳಿಗೆ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಬೆಂಗಳೂರು: ಉಪಚುನಾವಣೆ ಫಲಿತಾಂಶವು ಭವಿಷ್ಯದ ಚುನಾವಣೆಗಳಿಗೆ ದಿಕ್ಸೂಚಿಯಾಗದಿರಬಹುದು, ಆದರೆ 2023ರ ವಿಧಾನಸಭಾ ಚುನಾವಣೆಗೆ ಕಾರಣವಾಗುವ ಸರಣಿ ಚುನಾವಣೆಗಳಿಗೆ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹಾನಗಲ್ ಉಪಚುನಾವಣೆಗೆ ಸ್ವತಃ ಮುಖ್ಯಮಂತ್ರಿಗಳೇ ಮುಂದಾಳತ್ವ ವಹಿಸಿ ವಾರಗಳ ಕಾಲ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಪ್ರಚಾರ ನಡೆಸಿದರೂ ತವರು ಜಿಲ್ಲೆಯಲ್ಲೇ ಮುಖ್ಯಮಂತ್ರಿಗಳಿಗೆ ಸೋಲಾಗಿದೆ.

ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎದುರಿಸಿದ ಮೊದಲ ಚುನಾವಣೆ ಇದಾಗಿದ್ದರಿಂದ ಚುನಾವಣೆ ಅವರಿಗೆ ಅತ್ಯಂತ ಮುಖ್ಯವಾಗಿತ್ತು. ಪ್ರಮುಖವಾಗಿ ಪಕ್ಷದ ಹೈಕಮಾಂಡ್ ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಬೊಮ್ಮಾಯಿಯವರ ನೇತೃತ್ವ ಇರಲಿದೆ ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ ಈ ಚುನಾವಣೆ ಅತ್ಯಂತ ಮುಖ್ಯವಾಗಿತ್ತು. ಇದೀಗ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಸೋಲು ಕಂಡಿರುವುದು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ಮುಂದಿನ ಕೆಲವು ದಿನಗಳಲ್ಲಿ ಪಕ್ಷದ ಮುಖಂಡರು ಒಟ್ಟಾಗಿ ಕುಳಿತು ಫಲಿತಾಂಶದಿಂದ ಮುಂಬರುವ ಚುನಾವಣೆಗಳ ಮೇಲಿನ ಪರಿಣಾಮ ವಿಶ್ಲೇಷಣೆ ನಡೆಸುವುದು ಹಾಗೂ ಚುನಾವಣಾ ತಂತ್ರಗಳನ್ನು ಮರುಪರಿಶೀಲಿಸುವ ಕೆಲಸ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು ಸಿಂದಗಿಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಗೆಲುವು ಸಾಧಿಸಿದೆ.

ಹಾನಗಲ್ ಚುನಾವಣೆ ಸೋಲಿಗೆ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವಲ್ಲಿ ವಿಳಂಬ, ಟಿಕೆಟ್ ಹಂಚಿಕೆ ಸಮಸ್ಯೆ, ಮತದಾರರೊಂದಿಗೆ ಸ್ಥಳೀಯ ಮುಖಂಡರ ಸಂಪರ್ಕ ಕಡಿದುಕೊಂಡಿರುವುದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜನರೊಂದಿಗೆ ಬಾಂಧವ್ಯ ಹೊಂದಿರುವುದು ಕಾರಣ ಎಂದು ಹೇಳಲಾಗುತ್ತಿದೆ.

ಹಾನಗಲ್ ನಲ್ಲಿ ಕಾಂಗ್ರೆಸ್'ಗೆ ಉತ್ತಮ ಸ್ಪಂದನೆ ವ್ಯಕ್ತವಾಗಲಿದೆ ಎಂಬ ಮಾಹಿತಿ ಇತ್ತು. ಇದನ್ನು ಮಣಿಸಿ ಗೆಲುವು ಸಾಧಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ನಮ್ಮ ಬಳಿ ಸಮಯ ಅತ್ಯಂತ ಕಡಿಮೆಯಾಗಿದ್ದರಿಂದ ಸಾಧ್ಯವಾಗಿಲ್ಲ ಎಂದು ಪಕ್ಷದ ಮೂಲಗಳೂ ಮಾಹಿತಿ ನೀಡಿವೆ.

ಎರಡೂ ಕ್ಷೇತ್ರಗಳಲ್ಲಿ ಬೊಮ್ಮಾಯಿಯವರು ಪ್ರಚಾರ ನಡೆಸಿದ್ದರು. ಆದರೆ, ತವರು ಕ್ಷೇತ್ರವೆಂದು ಹಾನಗಲ್ ನಲ್ಲಿ ಇತರರಿಗಿಂತಲೂ ಬೊಮ್ಮಾಯಿಯವರೇ ಹೆಚ್ಚು ಪ್ರಚಾರ ನಡೆಸಿದ್ದರು. ಉಳಿದ ಸಚಿವರು ಸಿಂದಗಿಯಲ್ಲಿ ಪ್ರಚಾರ ನಡೆಸಿದ್ದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್'ಸಿ ಎನ್ ರವಿಕುಮಾರ್ ಅವರು ಮಾತನಾಡಿ, ಇದು ಮುಖ್ಯಮಂತ್ರಿಗಳಿಗೇ ಆಗಲೀ, ಪಕ್ಷಕ್ಕಾಗಲೀ ಆಗಿರುವ ಹಿನ್ನಡೆಯಲ್ಲ. ಸಿಂದಗಿಯಲ್ಲಿ ಪಕ್ಷ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆದರೂ ಹಾನಗಲ್ ಚುನಾವಣಾ ಫಲಿತಾಂಖ ನಮಗೆ ಎಚ್ಚರಿಕೆಯ ಗಂಟೆಯಂದೇ ಭಾವಿಸಬೇಕಾಗಿದೆ. ಸೋಲಿಗೆ ಕಾರಣ ಕುರಿತು ಪರಾಮರ್ಶೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com