ಮೇಕೆದಾಟು ಡಿಪಿಆರ್'ನ್ನು ಕಾಂಗೆಸ್ ಸರ್ಕಾರ ತಡ ಮಾಡಿರಲಿಲ್ಲ: ಸಿದ್ದರಾಮಯ್ಯ

ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ತಡ ಮಾಡಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಒಂದೇ ವೇದಿಕೆಯಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇರುವುದು.
ಒಂದೇ ವೇದಿಕೆಯಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇರುವುದು.

ಮೈಸೂರು: ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ತಡ ಮಾಡಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮೇಕೆದಾಟು ಡಿಪಿಆರ್ ಮಾಡಲು ತಡ ಮಾಡಿದ್ದರು. ಈಗ ಪಾದಯಾತ್ರೆ ಮಾಡುವುದಕ್ಕೆ ಅರ್ಥವಿದೆಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮೇಕೆದಾಟು ಯೋಜನೆ ಆರಂಭಿಸುವಂತೆ ಕಾಂಗ್ರೆಸ್ ಒತ್ತಾಯವಿದೆಯೇ ಹೊರತು ನಮ್ಮದು ಯಾವ ತಂತ್ರವೂ ಇಲ್ಲ. ನಮ್ಮ ಕಾಲದಲ್ಲೇ ಡಿಪಿಆರ್ ಆಗಿದೆ. ಆರು ಸಾವಿರ ಚಿಲ್ಲರೆ ಕೋಟಿಗೆ ಆಗಿದೆ ಪಕ್ಕಾ ಮಾಹಿತಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೆವು, ಇದಕ್ಕೆ ಪ್ರತಿಕ್ರಿಯೆಗಳು ಬಂದಿಲ್ಲ. ಕೆಲಸ ಪ್ರಾರಂಭಿಸಲು ಯಾವುದೇ ಅಡೆ ತಡೆ ಇಲ್ಲ. ನ್ಯಾಯಾಲಯದ ಆದೇಶ ಕೂಡ ಸ್ಪಷ್ಟವಾಗಿದೆ. ತಮಿಳುನಾಡಿನವರು ಸುಮ್ಮನೆ ರಾಜಕೀಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಬಂದು ಆಗಲೇ ಎರಡೂ ಕಾಲು ವರ್ಷವಾಯಿತು. ಶೀಘ್ರ ಕೆಲಸ ಪ್ರಾರಂಭ ಮಾಡಲಿ ಎಂದಷ್ಟೇ ಪಾದಯಾತ್ರೆ ಮಾಡುತ್ತಿದ್ದೇವೆಂದು ತಿಳಿಸಿದರು.

ಕಾಂಗ್ರೆಸ್ ಒತ್ತಡದ ತಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒತ್ತಡ ಹಾಕಿದರೆ ಮಾತ್ರ ಅಲ್ಲವೇ ಇವರು ಮಾಡೋದು, ತಂತ್ರ ಅಲ್ಲ ಬೊಮ್ಮಾಯಿಯವರು ಏನಾದರೂ ಹೇಳುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ನವರನ್ನು ಬಿಟ್ಟು ಬಿಡಿ ಹೋಗಲಿ ಅವರೇ ಮಾಡಲಿ. ಕೆಲಸ ಪ್ರಾರಂಭ ಮಾಡಿ, ಕೆಲಸ ವಿಳಂಬವಾಗುತ್ತಿದೆ. ಅನಗತ್ಯವಾಗಿ ತಡ ಮಾಡುತ್ತಿದ್ದಾರೆ. ಯಾಕೆ ಅವರು ಪ್ರಾರಂಭ ಮಾಡುತ್ತಿಲ್ಲ. ಪ್ರಾರಂಭ ಮಾಡಲು ತೊಂದರೆ ಏನು, ತಮಿಳುನಾಡಿನವರು ವಿರೋಧ ಮಾಡಲು ಅವರಿಗೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಸುಪ್ರೀಂಕೋರ್ಟ್ ಬೆಂಬಲವಿಲ್ಲ, ಪ್ರಾರಂಭಿಸದೇ ವಿಳಂಬ ಮಾಡುತ್ತಿದ್ದಾರೆ. ಕೂಡಲೇ ಕೆಲಸ ಮಾಡಿ ಅಂತ ಒತ್ತಾಯಕ್ಕೋಸ್ಕರ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬಳಿಕ ಬಿಟ್ ಕಾಯಿನ್ ಹಗರಣ ಕುರಿತು ಮಾತನಾಡಿ,  ಬಿಟ್ ಕಾಯಿನ್ ವಿಚಾರದಲ್ಲಿ ಆಡಳಿತ ವಿರೋಧ ಪಕ್ಷದವರು ಯಾರೆ ಇರಲಿ ನೀವು ಮೊದಲು ತನಿಖೆ ಆರಂಭಿಸಿ. ಚುರುಕಾಗಿ ಯಾಕೆ ತನಿಖೆ ಆರಂಭಿಸುತ್ತಿಲ್ಲ. ಸರ್ಕಾರ ನನ್ನ ಬಳಿಯೇ ಸಾಕ್ಷಿ ಕೇಳುತ್ತಿದೆ. ಅದರ ಸಾಕ್ಷಿ ಹುಡುಕಬೇಕಾದವರು, ತನಿಖೆ ಮಾಡಬೇಕಾದವರು ತನಿಖಾಧಿಕಾರಿಗಳು. ಆ ಕೆಲಸವನ್ನು ಸರ್ಕಾರ ಮಾಡಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಕೊಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಇನ್ನು ಸಾಕ್ಷಿಗಳು ಬೇಕಿವೆ. ನಾನು ಸಾಕ್ಷಿಗಳ ಸಂಗ್ರಹದಲ್ಲಿ ಇದ್ದೇನೆ. ನಾನು ನನ್ನ ಬಳಿ ಇರುವ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂದರು.

ಬಳಿಕ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, ಹೈಕಮಾಂಡ್ ದಲಿತ ಸಿಎಂ ಮಾಡಲು ತೀರ್ಮಾನ ಮಾಡಿದರೆ ನಾನೇ ಮೊದಲು ಸ್ವಾಗತಿಸುತ್ತೇನೆ. ನಾನೇ ಹೆಚ್ಚು ಸಂತೋಷ ಪಡುತ್ತೇನೆ. ದಲಿತರೆಂದರೆ ಬರೀ ಪರಿಶಿಷ್ಟ ಜಾತಿಯವರು ಮಾತ್ರವಲ್ಲ. ಅವಕಾಶ ವಂಚಿತರೆಲ್ಲಾ ದಲಿತರು. ನಾನು ದಲಿತನೇ ಎಂದು ವ್ಯಾಖ್ಯಾನಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com