ವಿಧಾನ ಪರಿಷತ್ ಚುನಾವಣೆ: 2 ದಿನದಲ್ಲಿ ಟಿಕೆಟ್ ಫೈನಲ್- ಸಿಎಂ ಬೊಮ್ಮಾಯಿ

ವಿಧಾನಪರಿಷತ್ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್'ನ 25 ಸ್ಥಾನಗಳಿಗೆ ಚುನಾವಣೆ ನಡೆಯಲು ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ವೇಳಾಪಟ್ಟಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿ ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಅಭ್ಯರ್ಥಿಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಎಲ್ಲಾ ಜಿಲ್ಲೆಗಳಿಂದ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಪ್ರತೀ ಕ್ಷೇತ್ರದಿಂದಲೂ 2-3 ಮಂದಿಯ ಹೆಸರು ನಮ್ಮ ಬಳಿ ಇವೆ. ಕೆಲವರ ಹೆಸರುಗಳು ಸಭೆ ವೇಳೆಯೂ ಕೇಳಿ ಬಂದಿದೆ. ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಸ್ಥಳೀಯ ನಾಯಕರ ಅಭಿಪ್ರಾಯವನ್ನೂ ಸಂಗ್ರಹಿಸುತ್ತೇವೆ. ಬಳಿಕ ದೆಹಲಿಯಲ್ಲಿರುವ ಸಂಸದೀಯ ಸಮಿತಿಗೆ ಪಟ್ಟಿಯನ್ನು ರವಾನಿಸಿ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಕುರಿತು ಸ್ಥಳೀಯ ಶಾಸಕರು ಮತ್ತು ಸಂಸದರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ, ಇತರೆ ಪಕ್ಷಗಳ ಮುಖಂಡರಿಗೆ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ, ಈ ಬಗ್ಗೆ ಚರ್ಚೆ ನಡೆದರೂ ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಯಡಿಯೂರಪ್ಪ, ಶೆಟ್ಟರ್, ಕೆಎಸ್ ಈಶ್ವರಪ್ಪ ಹಾಗೂ ಕಟೀಲ್ ನೇತೃತ್ವದಲ್ಲಿ ತಲಾ ನಾಲ್ಕು ತಂಡಗಳು ಸೇರಿ ರಾಜ್ಯಾದ್ಯಂತ ಜನಸ್ವರಾಜ್ ಯಾತ್ರೆ ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮಿತಿಯ ಭಾಗವಾಗಿದ್ದ ಸಚಿವ ಈಶ್ವರಪ್ಪ ಅವರು 24 ಕ್ಷೇತ್ರಗಳಿಗೆ ಹೆಸರನ್ನು ಅಂತಿಮಗೊಳಿಸಿದ್ದು, ಅಂತಿಮ ಅನುಮೋದನೆಗಾಗಿ ದೆಹಲಿಗೆ ಕಳುಹಿಸಲಾಗುತ್ತಿದೆ. ''ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಎಂಕೆ ಪ್ರಾಣೇಶ್, ಸುನೀಲ್ ಸುಬ್ರಮಣಿ ಸೇರಿದಂತೆ ಬಹುತೇಕ ಹಾಲಿ ಎಂಎಲ್ಸಿಗಳಿಗೆ ಟಿಕೆಟ್ ನೀಡಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬೇಡಿಕೆ ಇದೆ ಎಂದರು.

ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಗರಿಷ್ಠ 25 ಸ್ಥಾನಗಳನ್ನೂ ಗೆಲ್ಲಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com