ನೂತನ ಶಾಸಕರ ಪ್ರಮಾಣ: ಟ್ರಾಫಿಕ್ ನಲ್ಲಿ ಡಿಕೆಶಿ ಹೈರಾಣ; ಪ್ರಮಾಣ ವಚನ ಸ್ವೀಕರಿಸದೆ ಶ್ರೀನಿವಾಸ ಮಾನೆ ನಿರ್ಗಮನ
ಹಾನಗಲ್ ನೂತನ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕಾರ ಮಾಡಲು ಸಾಧ್ಯವಾಗದೇ ವಾಪಸ್ ಹೋದ ಘಟನೆಗೆ ವಿಧಾನಸೌಧ ಗುರುವಾರ ನಡೆಯಿತು. ಇದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟಾಗಿದೆ.
Published: 12th November 2021 09:22 AM | Last Updated: 12th November 2021 01:11 PM | A+A A-

ಶ್ರೀನಿವಾಸ ಮಾನೆ
ಬೆಂಗಳೂರು: ಹಾನಗಲ್ ನೂತನ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸ್ವೀಕಾರ ಮಾಡಲು ಸಾಧ್ಯವಾಗದೇ ವಾಪಸ್ ಹೋದ ಘಟನೆಗೆ ವಿಧಾನಸೌಧ ಗುರುವಾರ ನಡೆಯಿತು. ಇದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟಾಗಿದೆ.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಪ್ರಮಾಣ ವಚನ ಕಾರ್ಯಕ್ರಮವನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿಂದಗಿ ಶಾಸಕ ರಮೇಶ್ ಭೂಸನೂರು ನಿಗದಿತ ಸಮಯದಲ್ಲಿ ಪ್ರಮಾಣ ವಚನ ಸ್ಪೀಕಾರ ಮಾಡಿದರೂ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಮಾತ್ರ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಬರಲು ತಡವಾದ ಕಾರಣ ನಿಗದಿತ ಸಮಯಕ್ಕೆ ಪ್ರಮಾಣ ವಚನ ಸ್ಪೀಕರಿಸದೇ ಹೊರ ಹೋದರು.
ಆದರೆ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣ ವಚನ ಸಂದರ್ಭದಲ್ಲಿ ಎರಡು ನಿಮಿಷ ಬರುತ್ತೇನೆ ಎಂದು ಹೊರ ನಡೆದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಬರುವಿಕೆಗೆ ಕಾಯುತ್ತಿದ್ದ ಅವರು, ತಡವಾದ ಕಾರಣ ಶ್ರೀನಿವಾಸ್ ಮಾನೆ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿಲ್ಲ.
ಪ್ರಮಾಣ ವಚನ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀನಿವಾಸ್ ಮಾನೆ ಹೊರ ಹೋದ ಕಾರಣದಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಡಿಮಿಡಿಗೊಂಡರು. ಶ್ರೀನಿವಾಸ ಮಾನೆಗಾಗಿ ಕೆಲ ಹೊತ್ತು ಕಾದು ಕುಳಿತ ಸ್ಪೀಕರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಕ್ತಾಯಗೊಳಿಸಿದರು. ಇದೊಂದು ಅಶಿಸ್ತಿನ ನಡವಳಿಕೆ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.
ಮಾನೆ ಅವರು ತಮ್ಮ ಕಚೇರಿಗೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡಲಿ ಎಂದು ಕಾಗೇರಿ ಬಳಿಕ ಹೇಳಿದರು. ಆದರೆ ನಂತರ ಅವರು ಸಭಾಪತಿ ಅವರನ್ನು ಭೇಟಿ ಮಾಡಲು ತೆರಳಿದರು. ಇದರಿಂದ ಡಿಕೆ ಶಿವಕುಮಾರ್ ಹಾಗೂ ಇತರೆ ನಾಯಕರೊಂದಿಗೆ ಶ್ರೀನಿವಾಸ ಮಾನೆ ಅವರು ಸ್ಪೀಕರ್ ಕೊಠಡಿಯಲ್ಲಿಯೇ ಕಾಯುವಂತಾಯಿತು.
ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? ಬಿಜೆಪಿ ಟೀಕೆ
ಬಳಿಕ ಸ್ಪೀಕರ್ ಕಚೇರಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನೂತನ ಶಾಸಕ ಶ್ರೀನಿವಾಸ್ ಮಾನೆ, ರಿಜ್ವಾನ್ ಅರ್ಷದ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಐವನ್ ಡಿಸೋಜಾ ಸ್ಪೀಕರ್‌ಗಾಗಿ ಕಾಯುತ್ತಾ ಕುಳಿತರು. 12.15ಕ್ಕೆ ಸ್ಪೀಕರ್ ಕಚೇರಿಗೆ ಡಿಕೆಶಿ ಹಾಗೂ ಶಾಸಕರು ಬಂದರೂ ಸ್ಪೀಕರ್ ಕಾಗೇರಿ ಮಾತ್ರ ಬರಲೇ ಇಲ್ಲ. ಈ ವೇಳೆ ಸ್ಪೀಕರ್ ಕಾಗೇರಿಗೆ ಕರೆ ಮಾಡಿದ ಡಿಕೆಶಿ ಐದು ನಿಮಿಷ ಬಂದು ಪ್ರಮಾಣ ವಚನ ಬೋಧಿಸುವಂತೆ ಮನವಿ ಮಾಡಿದರು. ಆದರೆ ಬೇರೆ ಕಾರ್ಯಕ್ರಮ ಇದೆ ಬರಲು ಸಾಧ್ಯವಾಗಲ್ಲ ಎಂದು ಸ್ಪೀಕರ್ ಉತ್ತರಿಸಿದರು. ಇದರಿಂದ ಕೈ ಮುಖಂಡರು ಕಸಿವಿಸಿ ಅನುಭವಿಸುವಂತಾಯಿತು.
ಪ್ರಮಾಣ ವಚನ ಕಾರ್ಯಕ್ರಮ ಕಾಂಗ್ರೆಸ್ ಮುಖಂಡರು ಕಾದರೂ ಸ್ಪೀಕರ್ ಮಾತ್ರ ಬಂದಿಲ್ಲ. ಈ ವೇಳೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಲ್ಲಿ ಸ್ಪೀಕರ್ ಕಾಗೇರಿಯವರಲ್ಲಿ ಮಾತನಾಡುವಂತೆ ಡಿಕೆಶಿ ಮನವಿ ಮಾಡಿದರು. ಸ್ಪೀಕರ್ ಬಳಿ ಮಾತನಾಡಿದ ವಿಶಾಲಾಕ್ಷಿ ಪೂರ್ವ ನಿಯೋಜಿತ ಕಾರ್ಯಕ್ರಮದ ಕಾರಣದಿಂದ ಅವರು ಬರಲು ಸಾಧ್ಯವಿಲ್ಲ ಎಂದರು. ಇದರಿಂದ ಬೇಸರಗೊಂಡ ಕಾಂಗ್ರೆಸ್ ಮುಖಂಡರು ಸ್ಪೀಕರ್ ಕಚೇರಿಯಿಂದ ಹೊರ ನಡೆದರು.
ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಟ್ರಾಫಿಕ್ ಕಾರಣದಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸೂಕ್ತ ಸಮಯಕ್ಕೆ ಬರಲು ಸಾಧ್ಯವಾಗಿಲ್ಲ. ಸಭಾಧ್ಯಕ್ಷರು ಕೆಲ ಹೊತ್ತು ಕಾಯಬಹುದಿತ್ತು. ನಮ್ಮಿಂದ ತಡವಾಗಿದೆ. ಸ್ಪೀಕರ್ ಅವರಿಗೆ ಗೌರವ ನೀಡಿ ಅವರ ಕಚೇರಿಗೆ ಹೋಗುತ್ತೇವೆ ಎಂದು ಹೇಳಿದರು.
ಹೊಸದಾಗಿ ಆಯ್ಕೆಯಾದ ಬಿಜೆಪಿಯ ಬಸವಕಲ್ಯಾಣ ಶಾಸಕ ಶರಣು ಸಲಗರ ಮತ್ತು ಕಾಂಗ್ರೆಸ್‌ನ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ್ ಅವರು ಜೂನ್ 8, 2021 ರಂದು ಸ್ಪೀಕರ್ ಅವರನ್ನು ಸುಮಾರು 15 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದರು ಎಂದು ವರದಿಯಾಗಿದೆ.
ಇಂತಹ ವರ್ತನೆಯಿಂದ ಅಸಮಾಧಾನಗೊಂಡಿದ್ದರೂ, ಸ್ಪೀಕರ್ ತಾಳ್ಮೆಯಿಂದ ಕಾಯುತ್ತಿದ್ದರು. ಅವರು ಮೊದಲ ಬಾರಿಗೆ ಶಾಸಕರಾಗಿದ್ದರಿಂದ ಸ್ಪೀಕರ್ ಸಹಕರಿಸಿದ್ದರು. ಆದರೆ ಮಾನೆ ಅವರು ಹಿರಿಯ ನಾಯಕರಾಗಿದ್ದು, ಸಭಾಧ್ಯಕ್ಷರ ಪೀಠವನ್ನು ಗೌರವಿಸಲು ಸಮಯಪಾಲನೆ ಮಾಡಬೇಕಿತ್ತು ಎಂದು ಕಾರ್ಯದರ್ಶಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.