ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ?: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಬಿಟ್ ಕಾಯಿನ್ ಅವ್ಯವಹಾರ ಕೇಸಿಗೂ ಆರೋಗ್ಯ ಸಚಿವರಿಗೂ ಏನು ಸಂಬಂಧ, ಹಾಗಾದರೆ ಗೃಹ ಸಚಿವರನ್ನು ಏನೆಂದು ಕರೆಯಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
Published: 14th November 2021 09:27 AM | Last Updated: 14th November 2021 09:32 AM | A+A A-

ಪ್ರಿಯಾಂಕ್ ಖರ್ಗೆ, ಡಾ ಕೆ ಸುಧಾಕರ್(ಸಂಗ್ರಹ ಚಿತ್ರ)
ಬೆಂಗಳೂರು: ಬಿಟ್ ಕಾಯಿನ್ ಅವ್ಯವಹಾರ ಕೇಸಿಗೂ ಆರೋಗ್ಯ ಸಚಿವರಿಗೂ ಏನು ಸಂಬಂಧ, ಹಾಗಾದರೆ ಗೃಹ ಸಚಿವರನ್ನು ಏನೆಂದು ಕರೆಯಬೇಕು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆಯ ಕೇಸು ರಾಷ್ಟ್ರಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಇದನ್ನು ಪ್ರಮುಖ ಅಸ್ತ್ರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅವ್ಯವಹಾರವಾಗಿದೆ, ಇದರಲ್ಲಿ ಬಿಜೆಪಿ ಸಚಿವರು, ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಕಾಂಗ್ರೆಸ್ ನವರ ಆರೋಪ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ- ಡಾ. ಕೆ. ಸುಧಾಕರ್
ಈ ಬಗ್ಗೆ ನಿನ್ನೆ ರಾತ್ರಿ ಸುದ್ದಿಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ. ನಾವು ಯಾವುದೇ ಸತ್ಯಗಳನ್ನು ಮರೆಮಾಚಲು ಅಥವಾ ಯಾರನ್ನೂ ರಕ್ಷಿಸಲು ಬಯಸುವುದಿಲ್ಲ, ತನಿಖೆಗೆ ಆದೇಶಿಸಿದ್ದು ನಾವೇ. ಶೀಘ್ರದಲ್ಲೇ ಎಲ್ಲ ಸಾಕ್ಷ್ಯಗಳೊಂದಿಗೆ ಸರ್ಕಾರ ಮುಂದೆ ಬರಲಿದೆ ಎಂದು ಹೇಳಿದ್ದರು.
ಆರೋಗ್ಯ ಸಚಿವರು ಸುದ್ದಿಗೋಷ್ಠಿ ನಡೆಸಿದ್ದಕ್ಕೆ ವ್ಯಂಗ್ಯವಾಡಿರುವ ಪ್ರಿಯಾಂಕ್ ಖರ್ಗೆ, ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ? ನಾಳೆ ಗೃಹ ಸಚಿವರು ಬಂದು ರಾಜ್ಯದ ಕರೋನಾ ಲಸಿಕೆಯ ಮಾಹಿತಿ ನೀಡ್ತಾರಾ ಎಂದು ಕೇಳಿದ್ದಾರೆ.
HM ಅಂದರೆ ಹೋಮ್ ಮಿನಿಸ್ಟರ್ ಅನ್ನಬೇಕೋ, ಹೆಲ್ತ್ ಮಿನಿಸ್ಟರ್ ಅನ್ನಬೇಕೋ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 13, 2021
ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ?
ನಾಳೆ ಗೃಹ ಸಚಿವರು ಬಂದು ರಾಜ್ಯದ ಕರೋನಾ ಲಸಿಕೆಯ ಮಾಹಿತಿ ನೀಡ್ತಾರಾ?