ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ: ಕಾಂಗ್ರೆಸ್ ಆಗ್ರಹ

ಸತತ ಹೋರಾಟದ ನಂತರ ಕೇಂದ್ರ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಇದೀಗ ಹೋರಾಟದಲ್ಲಿ ಮೃತಪಟ್ಟಿದ್ದ ರೈತರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸತತ ಹೋರಾಟದ ನಂತರ ಕೇಂದ್ರ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದ್ದು, ಇದೀಗ ಹೋರಾಟದಲ್ಲಿ ಮೃತಪಟ್ಟಿದ್ದ ರೈತರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ.

ಈ ಕುರಿತು ನಿನ್ನೆಯಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರ ವಿಧಿಯಿಲ್ಲದೆ ಕಡೆಗೂ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟಿದೆ. ಕಳೆದ ಒಂದು ವರ್ಷದಿಂದ ರೈತರು ಮಳೆ ಗಾಳಿ ಲೆಕ್ಕಿಸದೆ ಹೋರಾಟ ಮಾಡಿಕೊಂಡು ಬರುತ್ತಿದ್ದರು ಸರ್ಕಾರ ಮೊಂಡು ಹಠ ಬಿಟ್ಟಿರಲಿಲ್ಲ. ಕಾಯ್ದೆ ವಾಪಸ್ ಪಡೆಯುವಂತೆ ಕಳದೆ ಒಂದು ವರ್ಷದಿಂದಲೂ ಹೋರಾಟ ಮಾಡಿ ಅನೇಕ ರೈತರು ಹುತಾತ್ಮರಾಗಿದ್ದಾರೆ ಅವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ರೈತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ಜರುಗಿದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನುವಿಧಿಯಿಲ್ಲದೆ ಕಡಿಮೆ ಮಾಡಲಾಯಿತು. ಈಗ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ಉಂಟಾಗಲಿದೆ ಎಂಬ ಆತಂಕದಿಂದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ವಿಜಯವಾಗಿದೆ. ಆಡಳಿತಗಾರ ಎಷ್ಟೇ ಬಲವಾಗಿದ್ದರೂ ಪ್ರಜಾಪ್ರಭುತ್ವದ ಎದುರು ತಲೆಬಾಗಲೇಬೇಕಿದೆ. ರೈತರಿಗೆ ಸ್ವಾತಂತ್ರ್ಯ ಸಿಕ್ಕಿದೆ ಜೈ ಕಿಸಾನ್ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿರುವುದು ದೇಶದ ಅನ್ನದಾತ, ಕಾಂಗ್ರೆಸ್ ಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. 700 ಮಂದಿ ಮೃತ ರೈತ ಹೋರಾಟಗಾರರನ್ನು ಹುತಾತ್ಮರೆಂದು ಘೋಷಿಸುವುದರೊಂದಿಗೆ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ನೀಡಿ ಕುಟುಂಬ ಪೋಷಣೆಗೆ ಬೆನ್ನೆಲುಬಾಗಿ ನಿಲ್ಲುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಜೆಡಿಎಸ್ ನಾಯಕ ಹಾಗೂ ಮಾಜಿ ಸಿಂ ಹೆಚ್.ಡಿ.ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ರೈತರ ಆಂದೋಲನಕ್ಕೆ ಕಾರಣವಾಗಿದ್ದ 3 ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಧಾನಿ ಮೋದಿಯವರ ಘೋಷಣೆ ಸ್ವಾಗತಾರ್ಹ. ಐದು ರಾಜ್ಯಗಳಿಗೆ ಚುನಾವಣೆ ನಡೆಯಬೇಕಿದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಇದು ಕೇವಲ ಮತಕ್ಕಾಗಿ ನಡೆಸುತ್ತಿರುವ ಹೈ ಡ್ರಾಮಾ ಆಗಬಾರದು. ರೈತರ ಮೇಲಿನ ದೌರ್ಜನ್ಯಕ್ಕೆ ಪ್ರಧಾನಿ ಮೋದಿ ಕ್ಷಮೆ ಕೇಳಬೇಕಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com