ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಮೂರು ಹೈಕಮಾಂಡ್ ಅಡಿ ಕೆಲಸ ಮಾಡುತ್ತಿದ್ದಾರೆ: ಸಿದ್ದರಾಮಯ್ಯ 

ಕಾಂಗ್ರೆಸ್ ಸಿಂದಗಿ ಮತ್ತು ಹಾನಗಲ್ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ, ಬಿಜೆಪಿ ವಿರುದ್ಧ ಭಾರೀ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಸಿಂದಗಿ ಮತ್ತು ಹಾನಗಲ್ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ, ಬಿಜೆಪಿ ವಿರುದ್ಧ ಭಾರೀ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಆರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಸಿ ವಿವಾದ ಸೃಷ್ಟಿ ಮಾಡಿದ್ದ ಸಿದ್ದರಾಮಯ್ಯನವರು 2023ರಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಪುನರುಚ್ಛರಿಸಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಅತಿ ದುರ್ಬಲ ಮುಖ್ಯಮಂತ್ರಿಯಾಗಿದ್ದು ಬಿಜೆಪಿ, ಆರ್ ಎಸ್ ಎಸ್ ಮತ್ತು ಬಿ ಎಸ್ ಯಡಿಯೂರಪ್ಪನವರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.ಅವರ ಜೊತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ: 
ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಏನು ಹೇಳುತ್ತೀರಿ?
-ಕಾಂಗ್ರೆಸ್ ಖಂಡಿತವಾಗಿಯೂ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲಲಿದೆ. ಸಾಮಾನ್ಯ ಜನರ ಸ್ಥಿತಿಗತಿ, ಅವರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ.ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಸಾಮಾನ್ಯ ಜನತೆಗೆ ದಿನನಿತ್ಯದ ಜೀವನಕ್ಕೆ ಕಷ್ಟವಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ಮತ್ತು ಪ್ರವಾಹ ಪರಿಹಾರ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

12 ವರ್ಷಗಳ ನಂತರ ಕಾಂಗ್ರೆಸ್ ನಲ್ಲಿ ಪುನಶ್ಚೇತನ ಮಾಡಲಾಗುತ್ತಿದೆ. ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ನಿಮ್ಮ ಮಧ್ಯೆ ಹೊಂದಾಣಿಕೆಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆಯಲ್ಲವೇ?
ಇವೆಲ್ಲಾ ಕೇವಲ ಊಹಾಪೋಹವಷ್ಟೆ, ಎಲ್ಲಾ ಮಟ್ಟಗಳಲ್ಲಿಯೂ ಪಕ್ಷವನ್ನು ಬಲಪಡಿಸಿ ಬಿಜೆಪಿಯ ವೈಫಲ್ಯವನ್ನು ಜನರ ಮುಂದೆ ತೋರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಅದರ ಫಲಿತಾಂಶ ಮುಂಬರುವ ಚುನಾವಣೆಯಲ್ಲಿ ನೀವು ನೋಡಬಹುದು.

ಪಂಜಾಬ್ ಕಾಂಗ್ರೆಸ್ ನಲ್ಲಿನ ಬೆಳವಣಿಗೆ ಬಗ್ಗೆ ಏನು ಹೇಳುತ್ತೀರಿ?
ಅಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗೆ ಸರಿಯಾಗಿ ಗೊತ್ತಿದೆ. ಪಕ್ಷದ ಮತ್ತು ಜನರ ಒಳಿತಿಗೆ ಮುಂದೆ ಏನು ಮಾಡಬಹುದು ಎಂದು ನಿರ್ಧಾರ ಮಾಡಲಿದೆ. ಪಂಜಾಬ್ ನಲ್ಲಿ ಈಗ ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಅವರು ಮುಂದಿನ ವಿಧಾನಸಭೆ ಚುನಾವಣೆಯವರೆಗೆ ಸರ್ಕಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ನನಗಿದೆ.

2 ತಿಂಗಳು ಪೂರ್ಣಗೊಳಿಸಿರುವ ಬಸವರಾಜ ಬೊಮ್ಮಾಯಿಯವರ ಬಗ್ಗೆ ಏನು ಹೇಳುತ್ತೀರಿ?
-ಅವರು ಬಿ ಎಸ್ ಯಡಿಯೂರಪ್ಪನವರ ರಬ್ಬರ್ ಸ್ಟ್ಯಾಂಪ್ ಅಷ್ಟೆ, ನನಗೆ ಅವರ ಮೇಲೆ ಭರವಸೆಯಿಲ್ಲ, ಅವರ ಆಡಳಿತದಲ್ಲಿ ರಾಜ್ಯದಲ್ಲಿ ಮ್ಯಾಜಿಕ್ ನಡೆಯಬಹುದು ಎಂಬ ನಂಬಿಕೆ ಕೂಡ ಇಲ್ಲ.

ಭ್ರಷ್ಟಾಚಾರ ನಡೆಯುತ್ತಿದೆ. ಜನರಿಗೆ ಅರ್ಥವಾಗಲಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಬೊಮ್ಮಾಯಿಯವರು ದಕ್ಷವಾಗಿ ಕೆಲಸ ಮಾಡುತ್ತಾರೆ ಎಂದು ನಾನು ಬಯಸಿದ್ದೆ ಮತ್ತು ಯೋಚಿಸಿದ್ದೆ ಕೂಡ. ಆದರೆ ಇತ್ತೀಚೆಗಷ್ಟೆ ಮುಗಿದ ವಿಧಾನಮಂಡಲ ಅಧಿವೇಶನ ಸರ್ಕಾರದ, ಬಿಜೆಪಿಯವರ ಅಭದ್ರತೆಯನ್ನು ತೋರಿಸಿದೆ. ಬಸವರಾಜ ಬೊಮ್ಮಾಯಿಯವರು ಅತಿ ದುರ್ಬಲ ಮುಖ್ಯಮಂತ್ರಿ, ಹೈಕಮಾಂಡ್, ಪಕ್ಷದ ನಾಯಕರು, ಆರ್ ಎಸ್ ಎಸ್ ಮತ್ತು ಬಿ ಎಸ್ ಯಡಿಯೂರಪ್ಪನವರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ.

ಎಲ್ಲ ಮತಗಳನ್ನು ಗೆಲ್ಲಲು ಮೋದಿ ಹೆಸರು ಮಾತ್ರ ಸಾಕಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮೋದಿಯ ಜನಪ್ರಿಯತೆ ಕ್ಷೀಣಿಸಿದೆ ಎಂದು ನೀವು ಭಾವಿಸುತ್ತೀರಾ?
ನಾನು ಅದನ್ನು ಎರಡು ಕೋನಗಳಿಂದ ನೋಡಲು ಬಯಸುತ್ತೇನೆ. ಮೊದಲನೆಯದಾಗಿ, 7 ವರ್ಷಗಳ ಶೋಚನೀಯ ವೈಫಲ್ಯದ ನಂತರ ಮೋದಿಯವರ ಜನಪ್ರಿಯತೆಯು ಖಂಡಿತವಾಗಿಯೂ ಕಡಿಮೆಯಾಗಿದೆ, ಅವರ ಮಹಾಪುರುಷ ಪ್ರಕ್ಷೇಪಗಳು ಈಗ ಕುಸಿದಿವೆ. ಯಾವುದೇ ಜನಪ್ರಿಯತೆ ಮತ್ತೆ ಅವರನ್ನು ಬೆಳಕಿಗೆ ತರುವುದಿಲ್ಲ. ಯಡಿಯೂರಪ್ಪ ಇದನ್ನು ಅರ್ಥಮಾಡಿಕೊಂಡಿರಬಹುದು.

ಎರಡನೆಯದಾಗಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿರುವುದು ಅವರಿಗೆ ಹೈಕಮಾಂಡ್ ಮೇಲೆ ಕೋಪವಿರಬಹುದು. ಆಂತರಿಕ ಸಂಘರ್ಷವಿರಬಹುದು.

ರಾಜ್ಯದಲ್ಲಿ 2023ರ ಏಪ್ರಿಲ್-ಮೇಗಿಂತ ಮೊದಲೇ ಚುನಾವಣೆ ಬರಬಹುದೇ?
ನಾವು ಪ್ರಸ್ತುತ 2023 ಚುನಾವಣೆಗಳಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಲು ನಾವು ನೋಡುವುದಿಲ್ಲ. ಆದರೆ ಬಿಜೆಪಿ ನಾಯಕರೇ ಸರ್ಕಾರವನ್ನು ಕೆಡವಲು ನೋಡುತ್ತಿದ್ದಾರೆ. 

ನಿಮ್ಮ ಕ್ಷೇತ್ರವನ್ನು ನೀವು ಬದಲಾಯಿಸುವ ಊಹಾಪೋಹವಿದೆಯೇ?
ನಾನು ಬಾದಾಮಿಯಿಂದ ಆಯ್ಕೆಯಾಗಿದ್ದೇನೆ ಮತ್ತು ಅಲ್ಲಿಂದ ಮತ್ತೆ ಸ್ಪರ್ಧಿಸುತ್ತೇನೆ.

ನೀವು ಆರ್ ಎಸ್ ಎಸ್ ನ್ನು ತಾಲಿಬಾನ್ ಸಂಸ್ಕೃತಿಗೆ ಹೋಲಿಸಿದ್ದೀರಿ?
ಮಾಧ್ಯಮ ವರದಿಗಳ ಆಧಾರದ ಮೇಲೆ ನನ್ನ ಅಭಿಪ್ರಾಯವನ್ನು ಬಲಪಡಿಸಲಾಗಿದೆ. ನೈತಿಕ ಪೊಲೀಸ್ ಗಿರಿಯಲ್ಲಿ ಆರ್ ಎಸ್ ಎಸ್ ಹಿಂಸಾಚಾರವನ್ನು ನೋಡಿದ್ದೇವೆ. ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಅವರಿಗೆ ಜಾತ್ಯತೀತತೆ ಮೇಲೆ ಮತ್ತು ಸಾಮೂಹಿಕ ಸೋದರತ್ವ ಮೇಲೆ ನಂಬಿಕೆಯಿಲ್ಲ. ತಾಲಿಬಾನ್ ಸಂಸ್ಕೃತಿಯ ಸಂಪೂರ್ಣ ಸಾಕಾರ.

ಬಿಬಿಎಂಪಿ ಚುನಾವಣೆ ಏಕೆ ವಿಳಂಬವಾಗುತ್ತಿದೆ?
ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭೀತಿ ಬಿಜೆಪಿಯವರಿಗಿದೆ. ಅವರು ಮೀಸಲಾತಿಯನ್ನು ಬದಲಾಯಿಸಲು ಮತ್ತು ಮತದಾನ ರಚನೆಯನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಖಂಡಿತವಾಗಿಯೂ ಅವರ ಪಿತೂರಿಯ ವಿರುದ್ಧ ಹೋರಾಡುತ್ತೇವೆ ಮತ್ತು ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ನೀಡಲು ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುತ್ತೇವೆ.

ಜೆಡಿಎಸ್ 2023ರ ಚುನಾವಣೆಯಲ್ಲಿ  123 ಸ್ಥಾನಗಳನ್ನು ಗೆಲ್ಲಲು ಯೋಜನೆಗಳನ್ನು ರೂಪಿಸುತ್ತಿದೆ. ನೀವು ಇದನ್ನು ಹೇಗೆ ನೋಡುತ್ತೀರಿ?
ಕಾದು ನೋಡೋಣ.
 

Related Stories

No stories found.

Advertisement

X
Kannada Prabha
www.kannadaprabha.com