ಆಪ್ತನ ಮೇಲೆ ಐಟಿ ದಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಒಳಸಂಚು ನಡೆದಿದೆಯೇ?

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿಷ್ಠಾವಂತರ ಜೊತೆ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಊಹಾಪೋಹ ಕೇಳಿಬರುತ್ತಿರುವುದರ ಮಧ್ಯೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿನ್ನೆ ಅವರ ನಿಷ್ಠಾವಂತ ಎ ಉಮೇಶ್ ನಿವಾಸ ಮೇಲೆ ದಾಳಿಯಾಗಿದೆ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಪಕ್ಷದೊಳಗಿನ ಬೆಳವಣಿಗೆಗಳು ಮತ್ತು ತಮ್ಮನ್ನು ನಡೆಸಿಕೊಳ್ಳುತ್ತಿರುವವರ ಬಗ್ಗೆ ಅಸಮಾಧಾನ-ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿಷ್ಠಾವಂತರ ಜೊತೆ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಊಹಾಪೋಹ ಕೇಳಿಬರುತ್ತಿರುವುದರ ಮಧ್ಯೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿನ್ನೆ ಅವರ ನಿಷ್ಠಾವಂತ ಎ ಉಮೇಶ್ ನಿವಾಸ ಮೇಲೆ ದಾಳಿಯಾಗಿದೆ.

ಈ ಎರಡೂ ಸಂಗತಿಗಳು ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡುಬಂದರೂ ಕೂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ಈ ಆದಾಯ ತೆರಿಗೆ ಇಲಾಖೆ ದಾಳಿ ಪಕ್ಷದೊಳಗಿನ ಆಂತರಿಕ ಪೈಪೋಟಿ ಹೊರಗೆ ಬಂದಿದೆ ಎಂಬ ಚಾಣಾಕ್ಷತನದ ಉತ್ತರ ಕೊಡುತ್ತಾರೆ. 

ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಗಳಿಗೆ ಉಸ್ತುವಾರಿ ನಾಯಕರ ಹುದ್ದೆಯಿಂದ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೆಸರನ್ನು ಕೈಬಿಟ್ಟದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ. ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪಕ್ಷದ ನಾಯಕರು ತೀವ್ರ ಮುಜುಗರಕ್ಕೀಡಾಗಿ ತಕ್ಷಣವೇ ಪರಿಷ್ಕೃತ ಪಟ್ಟಿ ತಯಾರಿಸಿ ಅದರಲ್ಲಿ ವಿಜಯೇಂದ್ರ ಅವರ ಹೆಸರನ್ನು ಸೇರಿಸಿದ್ದಾರೆ.

ನಿನ್ನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ ನಿಷ್ಠಾವಂತ.ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕನಾಗಿದ್ದ ಉಮೇಶ್ ಕಳೆದ ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ನಿಯೋಜನೆ ಮೇಲೆ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು.

ಆಯನೂರು ಮೂಲದವರಾದ ಉಮೇಶ್ ನೀರಾವರಿ ಇಲಾಖೆಯ ವ್ಯವಹಾರದಲ್ಲಿ ಅಕ್ರಮವೆಸಗುತ್ತಿದ್ದರು ಎಂಬ ಆರೋಪವಿದೆ.  ಅವರ ಕೆಳಮಟ್ಟದ ಸರ್ಕಾರಿ ಸ್ಥಾನದ ಹೊರತಾಗಿಯೂ, ಅವರು ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದರು. ಉನ್ನತ ಅಧಿಕಾರಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಿಸುತ್ತಿದ್ದರು ಎಂಬ ಆರೋಪಗಳಿವೆ. ಬೆಂಗಳೂರಿನ ಪೀಣ್ಯದ ಬಳಿ ಬೆಲೆಬಾಳುವ ಆಸ್ತಿಯನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದ್ದು, ಕಳೆದ ಒಂದು ದಶಕದಿಂದ ಯಡಿಯೂರಪ್ಪ ಕುಟುಂಬಕ್ಕೆ ಹತ್ತಿರವಾಗಿದ್ದಾರೆ.

ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರಭಾವಿ ವಲಯದಿಂದ ದೂರವಿಡಲು ಈ ಐಟಿ ದಾಳಿ ನಡೆದಿದೆಯೇ ಎಂಬ ಮಾತುಗಳು ಮುಖ್ಯಮಂತ್ರಿ ಕಚೇರಿಯ ಮೂಲಗಳಿಂದ ಕೇಳಿಬರುತ್ತಿದೆ. ಯಡಿಯೂರಪ್ಪನವರ ಇಮೇಜ್ ಗೆ ಧಕ್ಕೆ ತಂದು ಬೊಮ್ಮಾಯಿಯವರನ್ನು ಅವರಿಂದ ದೂರವಿಡಲು ನಡೆಸುವ ಪ್ರಯತ್ನವೇ ಎಂಬ ಅನುಮಾನ ಹುಟ್ಟಿಕೊಂಡಿದೆ. 

ಮಾಜಿ ಸಿಎಂ ಯಡಿಯೂರಪ್ಪನವರು ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದ್ದು ಅದಕ್ಕೂ ಮುನ್ನ ಅವರಿಗೆ ಅಪಖ್ಯಾತಿ ತರಲು ನಡೆಸಿದ ಕಾರ್ಯತಂತ್ರವೇ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಜಯೇಂದ್ರ ಅವರು ತಮ್ಮ ಸಹಾಯಕ ಉಮೇಶ್ ಮೂಲಕ ನೀರಾವರಿ ಇಲಾಖೆಯನ್ನು ನಡೆಸಿಕೊಂಡು ಹೋಗುತ್ತಿದ್ದು, ಸಾಕಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳಲ್ಲಿ ಶೇಕಡಾ 10ರಷ್ಟು ಲಂಚಕ್ಕೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮತ್ತು ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಹೆಚ್ ವಿಶ್ವನಾಥ್ ಮಾಡುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com