ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ: ಬಿಜೆಪಿ ವ್ಯಂಗ್ಯ
‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ’ ಎಂದು ಬಿಜೆಪಿ ಮಂಗಳವಾರ ವ್ಯಂಗ್ಯವಾಡಿದೆ.
Published: 12th October 2021 01:57 PM | Last Updated: 12th October 2021 02:07 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ’ ಎಂದು ಬಿಜೆಪಿ ಮಂಗಳವಾರ ವ್ಯಂಗ್ಯವಾಡಿದೆ.
ದೇಶದದ್ಯಾಂತ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಇದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ತಿರುಗೇಟು ನೀಡಿರುವ ಬಿಜೆಪಿ, ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರು ಕತ್ತಲೆಯಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡು, ಇವರು ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ ಎಂದು ಕಿಡಿಕಾರಿದೆ.
ಮಾರ್ಚ್ 18, 2016ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ವಿಧಾನಸೌಧದ ಸದನದಲ್ಲಿ ವಿದ್ಯುತ್ ‘ಕೈ’ಕೊಟ್ಟು, ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಬಜೆಟ್ ಪ್ರತಿ ಓದಿದ ಪ್ರಸಂಗ ನಡೆದಿತ್ತು. ಆ ಸನ್ನಿವೇಶವನ್ನು ಬಿಜೆಪಿ ಮತ್ತೊಮ್ಮೆ ನೆನಪಿಸಿದೆ.