ಶೀಘ್ರದಲ್ಲೇ ಕೆಪಿಸಿಸಿ ಪುನಾರಚನೆ: ಪ್ರಾಮಾಣಿಕರು, ಶ್ರಮದಾಯಿಗಳಿಗೆ ಆದ್ಯತೆ ನೀಡಲು ನಿರ್ಧಾರ

ಹಲವು ತಿಂಗಳುಗಳಿಂದ ನಡೆಯುತ್ತಿರುವ ಕೆಪಿಸಿಸಿ ಪುನಾರಚನೆ ಕುರಿತ ಕಸರತ್ತುಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಹಲವು ತಿಂಗಳುಗಳಿಂದ ನಡೆಯುತ್ತಿರುವ ಕೆಪಿಸಿಸಿ ಪುನಾರಚನೆ ಕುರಿತ ಕಸರತ್ತುಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಕ್ಟೋಬರ್ 19 ಮತ್ತು 20 ರಂದು ರಾಜ್ಯಕ್ಕೆ ಬರುವ ನಿರೀಕ್ಷೆಯಿದ್ದು, ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಸಿಂದಗಿ ಹಾಗೂ ಹಾನಗಲ್ ಚುನಾವಣೆ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭವನ್ನೇ ಬಳಸಿಕೊಂಡು ಪಕ್ಷ ಕಟ್ಟಲು ಶ್ರಮಿಸುತ್ತಿರುವವರು, ಪ್ರಮಾಣಿಕರು ಹಾಗೂ ಪಕ್ಷಕ್ಕಾಗಿ ತಮ್ಮ ಸಾಕಷ್ಟು ಸಮಯವನ್ನು ಕಳೆಯುತ್ತಿರುವವರನ್ನು ಸುರ್ಜೇವಾಲಾ ಅವರು ಗಮನಿಸಲಿದ್ದಾರೆ. ಬಳಿಕ ಶ್ರಮದಾಯಿಗಳಾಗಿರುವ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಈ ನಡುವೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಇಬ್ಬರೂ ವಿವಿಧ ಹುದ್ದೆಗಳಿಗೆ ಶಿಫಾರಸು ಮಾಡಿರುವ ಪಟ್ಟಿ ದೊಡ್ಡದಾಗಿಯೇ ಇದ್ದು, ಇಬ್ಬರು ನಾಯಕರು ನೀಡುರುವ ಈ ಪಟ್ಟಿ ಇದೀಗ ಹೈಕಮಾಂಡ್'ನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಇಬ್ಬರೂ ನಾಯಕರು ಬಹಳ ಹಿಂದೆಯೇ ಈ ಪಟ್ಟಿಯನ್ನು ಹೈಕಮಾಂಡ್'ಗೆ ನೀಡಿದ್ದು, ಇತ್ತೀಚೆಗೆ ದೆಹಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶ್ರಮದ ಆಧಾರದ ಮೇಲೆ ನಾಯಕರ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. 

ಇದು ಹೈಕಮಾಂಡ್‌ ನೀಡಿರುವ ನಿರ್ದೇಶನವಾಗಿದೆ. ಹೊಣೆಗಾರಿಕೆಯನ್ನು ಪರಿಶೀಲಿಸುತ್ತಾರೆ. ಬಳಿಕ ಯಾವ ನಾಯಕರನ್ನು ಆಯ್ಕೆ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಕೆಲ ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ್ದ ಡಿಕೆ.ಶಿವಕುಮಾರ್ ಅವರು, ಆಯುಧ ಪೂಜೆಗೂ ಮುನ್ನ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ಹೇಳಿದ್ದರು. 

ಸುಮಾರು 10-12 ವರ್ಷಗಳ ಹಿಂದೆ ಡಾ ಜಿ ಪರಮೇಶ್ವರ ಅಧ್ಯಕ್ಷರಾಗಿದ್ದ ಸಮಯದಲ್ಲಿ ನೇಮಕಗೊಂಡ ಪದಾಧಿಕಾರಿಗಳೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಂದುವರಿಯುತ್ತಿದೆ. ಅವರಲ್ಲಿ ಸಾಕಷ್ಟು ಮಂದಿಗೆ 50-60 ವರ್ಷ ವಯಸ್ಸಾಗಿದೆ. ಹೀಗಾಗಿ ಯುವಕರನ್ನು ನೇಮಕ ಮಾಡುವ ಮೂಲಕ ಕೆಪಿಸಿಸಿಯನ್ನು ಪುನಾರಚನೆ ಮಾಡಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com