ಯಡಿಯೂರಪ್ಪ ಭೇಟಿ ಮಾಡಿದ ಬಿಎಲ್ ಸಂತೋಷ್; 111 ದಿನಗಳ ನಂತರ ಬಿಎಸ್ ವೈ ಮನೆಗೆ ಬರಲು ಕಾರಣವೇನು?

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿ ಮಾಡಿದ್ದಾರೆ.  
ಯಡಿಯೂರಪ್ಪ -ಬಿಎಲ್ ಸಂತೋಷ್ ಭೇಟಿ
ಯಡಿಯೂರಪ್ಪ -ಬಿಎಲ್ ಸಂತೋಷ್ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿ ಮಾಡಿದ್ದಾರೆ.  

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾದ ಬಿ.ಎಲ್. ಸಂತೋಷ್‌ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಉಪಚುನಾವಣೆ ಸಂಬಂಧ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.  ವಿಜಯದಶಮಿ ಹಿನ್ನಲೆಯಲ್ಲಿ ಉಭಯ ನಾಯಕರು ಪರಸ್ಪರ ಬನ್ನಿ ಹಂಚಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಪುತ್ರ ಬಿಎವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಸಂತೋಷ್ ಅವರಿಗೂ ಬನ್ನಿ ಹಂಚಿ, ದಸರಾ ಶುಭಾಶಯ ಕೋರಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಮೊದಲ ಬಾರಿಗೆ ಸಂತೋಷ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಜೊತೆಗೆ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂಬುದನ್ನು ತೋರಿಸುವ ಪ್ರಯತ್ನ ಇದಾಗಿದೆ. ಬಿಜೆಪಿಗೆ ಯಡಿಯೂರಪ್ಪನವರ ಅಗತ್ಯವಿದೆ, ಅದರಲ್ಲೂ ಮುಖ್ಯವಾಗಿ ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ಬಿಎಸ್ ವೈ ನಿರ್ಣಾಯಕರಾಗಿದ್ದಾರೆ ಎಂಬುದನ್ನು ಅರಿತಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಮೊದಲಿನ ಉತ್ಸಾಹದಂತೆ ತೊಡಗಿಸಿಕೊಳ್ಳಲು ಯಡಿಯೂರಪ್ಪ ಅವರನ್ನು ಕರೆತರಲು ಇದೊಂದು ಮಾರ್ಗವಾಗಿದೆ. ಆದರೆ ಜೂನ್ 26 ರಂದು ಯಡಿಯೂರಪ್ಪ ಕಣ್ಣೀರು ಹಾಕಿಕೊಂಡು ಸಿಎಂ ಸ್ಥಾನದಿಂದ ಕೆಳಗಿಳಿದ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮತ್ತು ಬಿಎಲ್ ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು, ಇದರ ಜೊತೆಗೆ ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯ ಉಸ್ತುವಾರಿಯನ್ನು ಬಿವೈ ವಿಜಯೇಂದ್ರ ಅವರಿಗೆ ನೀಡಲು ನಿರಾಕರಿಸಿದಾಗ ಕೂಡ ಸಂತೋಷ್ ವಿರುದ್ಧ ವಿರೋಧ ವ್ಯಕ್ತವಾಗಿತ್ತು.

ಪಕ್ಷವು ಯಡಿಯೂರಪ್ಪ ಅವರೊಂದಿಗಿದೆ ಎಂಬುದನ್ನು ತೋರಿಸಿಕೊಳ್ಳಲು ಈ ಭೇಟಿಯ ಉದ್ದೇಶವಿರಬಹುದು, ಯಡಿಯೂರಪ್ಪ ರಾಜಿನಾಮೆ ನೀಡಿದ 111 ದಿನಗಳ ನಂತರ ಈಗ ಭೇಟಿ ಮಾಡುವ ಅಗತ್ಯವೇನಿತ್ತು ಎಂದು ಯಡಿಯೂರಪ್ಪ ಬೆಂಬಲಿಗರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com