ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು: ಸಿದ್ದರಾಮಯ್ಯ

ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹಾಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹಾಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು: ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹಾಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ನಾನು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದೀನಾ ಬಿಟ್ಟಿದೀನಾ ಎಂದು ನಮ್ಮ ಪಕ್ಷದ ಅಲ್ಪಸಂಖ್ಯಾತ ನಾಯಕರು ಹೇಳ್ತಾರೆ, ನಾನು ಈ ಬಗ್ಗೆ ಮಾತನಾಡಲ್ಲ.

ಕಾಂಗ್ರೆಸ್ ಕಚೇರಿಯಿಂದ ಎಲ್ಲರಿಗೂ ಪ್ರಚಾರಕ್ಕೆ ಬರುವಂತೆ ಪತ್ರ ಕಳಿಸಿದ್ದಾರೆ, ಸಿ.ಎಂ ಇಬ್ರಾಹಿಂ ಅವರಿಗೆ ಚುನಾವಣಾ ಪ್ರಚಾರಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ. ಮುಂದೆ ಅವರು ಬಂದರೂ ಬರಬಹುದು.

ಆರ್.ಎಸ್.ಎಸ್ ಒಂದು ಕೋಮುವಾದಿ ಸಂಘಟನೆ, ಅವರು ಮನುಸ್ಮೃತಿ ಮತ್ತು ಶ್ರೇಣೀಕೃತ ವ್ಯವಸ್ಥೆ ಪರವಾಗಿದ್ದಾರೆ. ನಾನು 1971 ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದ ಈ ಸಂಘಟನೆಯನ್ನು ವಿರೋಧಿಸುತ್ತಾ ಬಂದಿದ್ದೇನೆ. ಆರ್.ಎಸ್.ಎಸ್ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಅವರ ಇತಿಹಾಸವನ್ನು ನೋಡಿದರೆ ಅವರು ಸಮಾಜ ಒಡೆಯುವವರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. 'ಸಬ್ ಕ ಸಾಥ್, ಸಬ್ ಕ ವಿಕಾಸ್' ಎಂಬುದು ಬರಿ ಸುಳ್ಳು. ಬಿಜೆಪಿ ಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಶಾಸಕ ಇದ್ದಾರ? ಯಾಕೆ ಅವರಿಗೆ ಪಕ್ಷದ ಟಿಕೆಟ್ ಕೊಡಲ್ಲ?

ಅಲ್ಪಸಂಖ್ಯಾತರಿಗೆ ಬಿಜೆಪಿ ಟಿಕೆಟ್ ಬೇಕಾದರೆ ತಮ್ಮ ಕಚೇರಿ ಕಸ ಗುಡಿಸಬೇಕು ಎಂದು ಈಶ್ವರಪ್ಪ ಹೇಳುತ್ತಾರೆ. ಬಿಜೆಪಿಯವರು ಪ್ರಜಾಪ್ರಭುತ್ವ, ಬ್ರಾತ್ರುತ್ವ, ಸಮಾನತೆ, ಸೌಹಾರ್ದತೆ, ಸರ್ವಧರ್ಮ ಸಹಿಷ್ಣುತೆ ಸಾರುವ ಸಂವಿಧಾನ ಬದಲಾವಣೆ ಮಾಡುತ್ತೀವಿ ಎನ್ನುತ್ತಾರೆ.

ಸಂಗೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದವರು ಉದಾಸಿ, ಉಪಾಧ್ಯಕ್ಷರಾಗಿದ್ದವರು ಶಿವರಾಜ್ ಸಜ್ಜನರ್. ಈ ಇಬ್ಬರೂ ಸೇರಿ ಕಾರ್ಖಾನೆಯನ್ನು ಸಂಪೂರ್ಣ ಹಾಳು ಮಾಡಿದರು. ಇದಕ್ಕೆ ನಾವೇನು ಮಾಡಬೇಕು? ಇವತ್ತು ಕಾರ್ಖಾನೆಯನ್ನು ಬೋಗ್ಯಕ್ಕೆ ಕೊಟ್ಟಿರೋದು ಸುಳ್ಳಾ? ಉದಾಸಿ ಅಧ್ಯಕ್ಷರಾಗುವ ಮೊದಲು ಕಾರ್ಖಾನೆ ಲಾಭದಲ್ಲಿ ಇದ್ದಿದ್ದು ಸುಳ್ಳಾ? ಈ ಬಗ್ಗೆ ಮಾತಾಡಿ ಎಂದು ಜನರೇ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಸತ್ಯ ವಿಚಾರವನ್ನು ನಿನ್ನೆ ಹೇಳಿದ್ದೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಿಸೇಲ್ ಬೆಲೆ 45 ರೂಪಾಯಿ ಇತ್ತು, ಈಗ 100 ರೂಪಾಯಿ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರದ ತೆರಿಗೆ ಹೆಚ್ಚಳ ಕಾರಣ. ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ 3 ರೂಪಾಯಿ 45 ಪೈಸೆ ಇದ್ದ ಅಬಕಾರಿ ಸುಂಕವನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 31 ರೂಪಾಯಿ 84 ಪೈಸೆಗೆ ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 125 ಡಾಲರ್ ಗೆ ತಲುಪಿದಾಗಲೂ ಡೀಸೆಲ್ ಬೆಲೆ 50 ರೂಪಾಯಿಯ ಆಸುಪಾಸಿನಲ್ಲೇ ಇತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿಮೆ ಮಾಡಲಿ. ಪೆಟ್ರೋಲ್ ಮೇಲೆ ತೆರಿಗೆ ಹಾಕೋದು ರಾಜ್ಯಗಳ ಹಕ್ಕು, ಪೆಟ್ರೋಲ್ ಡೀಸೆಲ್ ಜಿಎಸ್‌ಟಿಗೆ ಸೇರಿಸಿದರೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಹೋಗುತ್ತದೆ. ಹಾಗಾಗಿ ಇದಕ್ಕೆ ನನ್ನ ವಿರೋಧವಿದೆ.

ಹಿಂದೆ ಜಿ.ಎಸ್.ಟಿ ಕೌನ್ಸಿಲ್ ಸಭೆಗೆ ಯಡಿಯೂರಪ್ಪ ಅವರ ಪರವಾಗಿ ಹೋಗುತ್ತಿದ್ದದ್ದು ಬಸವರಾಜ ಬೊಮ್ಮಾಯಿ ಅವರೆ. ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ ಅಂತ ಮುಖ್ಯಮಂತ್ರಿ ಆದವರಿಗೆ ಗೊತ್ತಿರಲ್ವಾ? ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಅಷ್ಟೆ.

ವರ್ಕಿಂಗ್ ಕಮಿಟಿಯ ಹಲವಾರು ಮಂದಿ ಸದಸ್ಯರು ನೀವೇ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ರಾಹುಲ್ ಗಾಂಧಿಯವರ ಬಳಿ ಒತ್ತಾಯ ಮಾಡಿದ್ದಾರೆ, ಹಾಗಾಗಿ ನಿಮ್ಮೆಲ್ಲರ ಮನವಿಯ ಬಗ್ಗೆ ಯೋಚನೆ ಮಾಡ್ತೀನಿ ಎಂದು ರಾಹುಲ್ ಗಾಂಧಿಯವರು ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com