ಪಕ್ಷ ವಿರೋಧಿ ಚಟುವಟಿಕೆ: ಮಾಧುಸ್ವಾಮಿ ವಿರುದ್ಧ ದೂರು ನೀಡುತ್ತೇನೆಂದ ಮಾಜಿ ಶಾಸಕ ಬಿ.ಸುರೇಶ್ ಗೌಡ

ತುಮಕೂರು ಜಿಲ್ಲೆ ಬಿಜೆಪಿ ಘಟಕದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿ ತೋರುತ್ತಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಕಾನೂನು ಸಚಿವ ಮಾಧುಸ್ವಾಮಿಯವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆಂದು ಸೋಮವಾರ ಆರೋಪಿಸಿದ್ದಾರೆ.
ಮಾಧುಸ್ವಾಮಿ
ಮಾಧುಸ್ವಾಮಿ

ತುಮಕೂರು: ತುಮಕೂರು ಜಿಲ್ಲೆ ಬಿಜೆಪಿ ಘಟಕದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿ ತೋರುತ್ತಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಕಾನೂನು ಸಚಿವ ಮಾಧುಸ್ವಾಮಿಯವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆಂದು ಸೋಮವಾರ ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಧುಸ್ವಾಮಿಯವರು ಪಕ್ಷ ವಿರೋಧಿ ಚಟುವಟಿಕೆಗಳ ನಡೆಸುತ್ತಿದ್ದಾರೆ, ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುತ್ತೇನೆಂದು ಹೇಳಿದ್ದಾರೆ. 

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ,‌ ನಮಗೆ ನೀರು ಬಂದಿಲ್ಲ ಎಂದು ನಮ್ಮ ಜನ ನನ್ನ ಬಳಿ ಹೇಳಿದ್ದಾರೆ.. ಹೀಗಾಗಿ ನಾನು ನೀರು ಬಿಡಿ ಎಂದು ಹೇಳಿದ್ದೆ.. ನೀರು ಬಿಡುವುದು ಬಿಡದೇ ಇರುವುದು ನಿಮಗೆ ಬಿಟ್ಟದ್ದು. ನೀರು ಬಿಡೋಕಾಗ್ದೆ, ಕೆರೆ ತುಂಬಿಸೋಕಾಗ್ದೆ ಅವೈಜ್ಞಾನಿಕ ಅಂತ ಹೇಳ್ತೀರಲ್ಲ ಹಂಗಾದ್ರೆ ಅವತ್ತು ಬಿಎಸ್‌ ಯಡಿಯೂರಪ್ಪ ಪೂಜೆ ಮಾಡಿದ್ದು ಸುಳ್ಳಾ..? ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ಗೌರವವಾಗಿ ನೀರು ಬಿಡೋ ಕೆಲಸ ಮಾಡಿ. ನೀವು ಹೀಗೆ ಗೊಂದಲ ಸೃಷ್ಟಿ ಮಾಡಿದ್ರೆ ನಾನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಜೆಪಿ ನಡ್ಡಾ, ನಳಿನ್‌ ಕುಮಾರ್‌ ಕಟೀಲ್‌ಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ.

ಮಾಧುಸ್ವಾಮಿ ಒಬ್ಬರು ಕಾನೂನು ಸಚಿವರು ಜವಾಬ್ದಾರಿಯಿಂದ ಮಾತನಾಡ್ಬೇಕು. ವೈಜ್ಞಾನಿಕವೋ ಅವೈಜ್ಞಾನಿಕವೋ ಎಂದು ಮಾತನಾಡಲು ಅವರಿಗೆ ಹಕ್ಕಿಲ್ಲ.‌ ಮನಸೋ ಇಚ್ಚೆ ಮಾತನಾಡ್ಬಾರ್ದು‌. ಗೊಂದಲದ ಹೇಳಿಕೆಗಳನ್ನ ಕೊಡಬಾರದು. 40-50 ಎಚ್ ಪಿ ಮೋಟಾರ್ ಎಂದು ಹೇಳುತ್ತಾರೆ. ಅವರಿಗೆ ಎಷ್ಟು ಎಚ್ ಪಿ ಮೋಟರ್ ಎಂಬುದೇ ಗೊತ್ತಿಲ್ಲ.. 00 ಎಚ್ ಪಿ ಪಂಪ್‌ಗಳು ನಾಲ್ಕು ಇವೆ. ಏಕಕಾಲದಲ್ಲಿ 50 ಕ್ಯುಸೆಕ್ ನೀರು ಡಿಸ್‌ಚಾರ್ಜ್‌ ಆಗುತ್ತೆ. ಕುಡಿಯೋಕೆ ನೀರು ಕೇಳಿದ್ರೆ ಗೊಂದಲಗಳನ್ನ ಸೃಷ್ಟಿ ಮಾಡಿದ್ರೆ ಅದಕ್ಕೆ ದೇವರೇ ಉತ್ತರ ಕೊಡ್ಬೇಕು ಎಂದರು.

ಟೆಕ್ನಿಕಲ್ ಕಮಿಟಿ ಅಪ್ರೂವಲ್ ಮಾಡಿರುವ ಯೋಜನೆಯನ್ನು ಅವೈಜ್ಞಾನಿಕವಾಗಿದೆ ಎಂದು ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೆ. ಯಾರ ಮೇಲೆ ದ್ವೇಷ ಇಟ್ಟುಕೊಂಡು ಹೇಳಿದ್ದಾರೆ, ಯಾರನ್ನ ತೆಗಿಬೇಕು ಅಂತ ಹೇಳಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳಿಂದ ತನಿಖೆ ಮಾಡಿಸಿ ಎಂದು ನಡ್ಡಾಗೆ ಪತ್ರ ಬರೆಯುತ್ತೇನೆ. ಈ ಮುಂಚೆ ತಾಲೂಕಿನ ಎಲ್ಲ ಕೆರೆಗಳು ತುಂಬಿದ್ವು.. ಶಿಸ್ತಿನ ಕ್ರಮಕ್ಕೆ ನಾನಂತೂ ಪತ್ರ ಬರೆಯುತ್ತೇನೆ. ಸಾರ್ವಜನಿಕ ಸಭೆಯೊಳಗೆ ನೀರು ಕೇಳೋದು ನಮ್ಮ ಕರ್ತವ್ಯ. ನೀರು ಬಿಡಿ ಎಂದು ವಿನಂತಿ ಮಾಡಿದ್ದೆ ಅದು ತಪ್ಪಾ..? ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ ನನಗೋಸ್ಕರ ಮಾಡಿದ್ದ ಯೋಜನೆ ಇದು. ಮೂಲ ಬಿಜೆಪಿಯವರಿಗೆ ನೋವಿದೆ.. ಆ ನೋವನ್ನ ಸರಿ ಮಾಡಿ ಎಂದು ನೂರು ಸರಿ ಹೇಳಿದ್ದೇನೆ ಎಂದು ಸುರೇಶ್‌ ಗೌಡ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com