ಪ್ರಧಾನಿಯವರೇ, ಸಾಧನೆ ಸಂಭ್ರಮಾಚರಣೆ ಆಮೇಲೆ, ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಿ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದ ಶತಕೋಟಿ ಕೋವಿಡ್ ಲಸಿಕೆ ಪೂರೈಕೆ ಕೇವಲ ಫ್ಯಾನ್ಸಿ ನಂಬರ್ ಅಷ್ಟೆ,ಅದರೊಳಗೆ ಕೊರತೆಯಿದೆ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
Published: 22nd October 2021 11:40 AM | Last Updated: 22nd October 2021 04:48 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಸರ್ಕಾರದ ಶತಕೋಟಿ ಕೋವಿಡ್ ಲಸಿಕೆ ಪೂರೈಕೆ ಕೇವಲ ಫ್ಯಾನ್ಸಿ ನಂಬರ್ ಅಷ್ಟೆ, ಅದರೊಳಗೆ ಕೊರತೆಯಿದೆ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
ದೇಶವಾಸಿಗಳಿಗೆ ಶತಕೋಟಿ ಲಸಿಕೆ ಪೂರೈಕೆಯಾದ ಸಂತೋಷವನ್ನು ಹಂಚಿಕೊಳ್ಳಲು ಇಂದು ದೇಶವಾಸಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದರು. ಅದಾದ ಬಳಿಕ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ದೇಶದ 139 ಕೋಟಿ ಮಂದಿಯಲ್ಲಿ ಕೇವಲ 29 ಕೋಟಿ ಜನರಿಗೆ ಮಾತ್ರ ಕೋವಿಡ್ ಎರಡೂ ಲಸಿಕೆ ಸಿಕ್ಕಿದೆಯಷ್ಟೆ. ಅದರರ್ಥ ಕೇವಲ ಶೇಕಡಾ 21ರಷ್ಟು ಮಂದಿ ಸಂಪೂರ್ಣ ಲಸಿಕೆ ಪಡೆದುಕೊಂಡವರಾಗಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುವುದರಲ್ಲಿ ಅರ್ಥವೇನಿದೆ ಎಂದು ಕೇಳಿದ್ದಾರೆ.
ದೇಶದ ಜನಸಂಖ್ಯೆಯ ಶೇಕಡಾ 21ರಷ್ಟು ಜನರಿಗೆ ಸಂಪೂರ್ಣ ಲಸಿಕೆಯಾಗಿದ್ದಕ್ಕೆ ಇಷ್ಟೊಂದು ಸಂಭ್ರಮಿಸುವುದೇ, ಅಮೆರಿಕದಲ್ಲಿ ಶೇಕಡಾ 56ರಷ್ಟು ಜನಸಂಖ್ಯೆಗೆ ಸಂಪೂರ್ಣ ಲಸಿಕೆಯಾಗಿದೆ. ಚೀನಾದಲ್ಲಿ ಶೇಕಡಾ 70ರಷ್ಟು ಮಂದಿ ಪೂರ್ಣ ಲಸಿಕೆ ಪಡೆದರೆ ಕೆನಡಾದಲ್ಲಿ ಶೇಕಡಾ 71ರಷ್ಟು ಮಂದಿಗೆ ಸಿಕ್ಕಿದೆ. ಆದರೆ ಇದುವರೆಗೆ ಭಾರತದಲ್ಲಿ ಸಂಪೂರ್ಣ ಲಸಿಕೆ ಸಿಕ್ಕಿದ್ದು ಕೇವಲ ಶೇಕಡಾ 21ರಷ್ಟು ಮಂದಿಗೆ, ಸಂಭ್ರಮಪಡುವ ಮೊದಲು ಲಸಿಕೆ ಪ್ರಮಾಣವನ್ನು ಹೆಚ್ಚಿಸುವತ್ತ ಗಮನ ನೀಡಿ ಪ್ರಧಾನಿಯವರೇ ಎಂದು ಸಿದ್ದರಾಮಯ್ಯ ಲೆಕ್ಕಾಚಾರ ನೀಡಿದ್ದಾರೆ.
ಕೋವಿಡ್ ಲಸಿಕೆಯ ನಂತರ ಸೋಂಕಿಗೆ ಬೂಸ್ಟರ್ ಡೋಸ್ ನ ಅಗತ್ಯ ಕೂಡ ಬರಬಹುದು, ಆದರೆ ಇನ್ನೂ ಬಹುತೇಕ ಮಂದಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯೇ ಬಾಕಿ ಇರುವಾಗ ಇನ್ನು ಬೂಸ್ಟರ್ ಡೋಸ್ ನ ಬಗ್ಗೆ ಯೋಚನೆ ಮಾಡಲು ಸಾಧ್ಯವೇ, ಸಂಭ್ರಮಾಚರಿಸುವ ಮೊದಲು ಎಲ್ಲರಿಗೂ ಲಸಿಕೆ ನೀಡುವುದರತ್ತ ಗಮನ ನೀಡಿ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
There may be a need for booster dose too & with even 1st doses & 2nd doses pending for large population, can we even think of booster dose?
— Siddaramaiah (@siddaramaiah) October 22, 2021
Mr PM @narendramodi,
Let us put an hold to the celebrations & concentrate on vaccinating everyone.#CoronaVirus