'ಜೆಡಿಎಸ್ ಅನ್ಯಾಯ ಮಾಡಿದೆ ಎಂದು ಸಿ.ಎಂ ಮನಗೂಳಿ ಅವರ ಮಕ್ಕಳು ದೇವರ ಎದುರು ಪ್ರಮಾಣ ಮಾಡಲಿ'

ದಿವಂಗತ ಮನಗೂಳಿ ಅವರ ಪುತ್ರರು ಸುಳ್ಳು ಹೇಳುತ್ತಿದ್ದಾರೆ. ಅಕ್ಟೋಬರ್ 30ನೇ ತಾರೀಖಿನವರೆಗೆ ಯಾರು ಎಷ್ಟು ಸುಳ್ಳು ಹೇಳುತ್ತಾರೋ ಹೇಳಲಿ. ಆ ಬಳಿಕ ಅವರು ಮನೆಗೆ ಹೋಗುತ್ತಾರೆ ಎಂದು ಪ್ರಜ್ವಲ್ ಭವಿಷ್ಯ ನುಡಿದರು.
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ವಿಜಯಪುರ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ದಿವಂಗತ ಎಂ. ಸಿ. ಮನಗೂಳಿ ಅವರ ಪುತ್ರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಅಧಿಕಾರ ಎಂದರೆ ಬಟ್ಟೆ ಬದಲಿಸಿದಂತೆ ಎಂದು ದಿವಂಗತ ಎಂ. ಸಿ. ಮನಗೂಳಿ ಅವರ ಕುಟುಂಬದವರು ಅಂದುಕೊಂಡಿದ್ದಾರೆ ಎಂದು ಪ್ರಜ್ವಲ್ ಕಿಡಿಕಾರಿದರು.

ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಅವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದೇವೆ. ಶಾಂತವೀರ ಮನಗೂಳಿ ಅವರು ಬಹುಮತ ಸಾಧಿಸಿ ತೋರಿಸುತ್ತೇವೆ ಎಂದು ಸವಾಲೆಸೆದಿದ್ದಾರೆ. ಆದರೆ ಜೆಡಿಎಸ್‌ನ ಯಾರೊಬ್ಬ ಪುರಸಭೆ ಸದಸ್ಯರೂ ಅವರೊಂದಿಗೆ ಇಲ್ಲ. ಅವರು ಹೇಳಿರುವುದು‌ ಎಲ್ಲಾ ಸುಳ್ಳು. ಈಗಾಗಲೇ ಪುರಸಭೆ ಜೆಡಿಎಸ್ ಸದಸ್ಯರು ನಾವು ಶಾಂತವೀರ ಮನಗೂಳಿ ಅವರ ಜೊತೆ ಇಲ್ಲ. ನಾವು ಜೆಡಿಎಸ್ ಪಕ್ಷದೊಂದಿಗೆ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ದಿವಂಗತ ಮನಗೂಳಿ ಅವರ ಪುತ್ರರು ಸುಳ್ಳು ಹೇಳುತ್ತಿದ್ದಾರೆ. ಅಕ್ಟೋಬರ್ 30ನೇ ತಾರೀಖಿನವರೆಗೆ ಯಾರು ಎಷ್ಟು ಸುಳ್ಳು ಹೇಳುತ್ತಾರೋ ಹೇಳಲಿ. ಆ ಬಳಿಕ ಅವರು ಮನೆಗೆ ಹೋಗುತ್ತಾರೆ ಎಂದು ಪ್ರಜ್ವಲ್ ಭವಿಷ್ಯ ನುಡಿದರು.

ಜೆಡಿಎಸ್ ತಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ. ಜಗಳ ಮಾಡಿ ತಮ್ಮ ತಂದೆಯವರಿಗೆ ಸಚಿವ ಸ್ಥಾನ ಪಡೆದಿದ್ದೇವೆ ಎಂದು ಮನಗೂಳಿ ಕುಟುಂಬಸ್ಥರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಜ್ವಲ್, ಈ ಮಾತನ್ನು ಅವರು ಯಾವುದಾದರೂ ದೇವರ ಮುಂದೆ ಬಂದು ಪ್ರಮಾಣ ಮಾಡಿ ಹೇಳಲಿ. ಆಗ ಒಪ್ಪಿಕೊಳ್ಳೋಣ ಎಂದು ಸವಾಲೆಸೆದರು. ಈ ರೀತಿಯ ಮಾತನ್ನು ಅವರು ಆಡಬಾರದು ಎಂದ ಪ್ರಜ್ವಲ್, ಒಂದು ಕಾಲದಲ್ಲಿ ಜೆಡಿಎಸ್‌ನ ಎಲ್ಲರೂ ಸಿಂದಗಿಯಲ್ಲಿ ಮನಗೊಳಿ ಅವರಿಗೆ ಟಿಕೆಟ್ ಕೊಡಬೇಡಿ ಎಂದಿದ್ದರು. ಮನಗೂಳಿ ಸೋಲುತ್ತಾರೆ ಎಂದು ಹೇಳಿದ್ದರು.

ಆದರೆ ಯಾರ ಮಾತನ್ನೂ ಕೇಳದೆ ದೇವೇಗೌಡರು ಮನಗೂಳಿ ಅವರ ಮನೆಗೆ ಹೋಗಿ ಟಿಕೆಟ್ ಕೊಟ್ಟಿದ್ದರು. ಅದನ್ನು ಈಗ ಮನಗೊಳಿ ಕುಟುಂಬಸ್ಥರು ಮರೆತು ಬಿಟ್ಟರಾ ಎಂದು ಪ್ರಶ್ನಿಸಿದ ಪ್ರಜ್ವಲ್, ಇದನ್ನೆಲ್ಲಾ ಮಾತನಾಡುವುದನ್ನು ಬಿಟ್ಟು ಸರಿಯಾಗಿ ಚುನಾವಣೆ ಮಾಡಬೇಕು, ಇಲ್ಲದಿದ್ದರೆ ನಾನು ತಕ್ಕ ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮನಗೊಳಿ ಕುಟುಂಬಸ್ಥರು ಏನೇ ದೂರಬಹುದು. ಆದ್ರೆ, ಇಡೀ ರಾಜ್ಯದ ಜನ ಇವರನ್ನು ನೋಡಿದ್ದಾರೆ. ಸಿಂದಗಿ ಮತ ಕ್ಷೇತ್ರದಲ್ಲಿ 10 ಮನೆಗಳಲ್ಲಿ ಕೇಳಿದರೆ ಎಂಟು ಮನೆಗಳ ಜನ ಅವರ ಬಗ್ಗೆ ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಏಳು ಬಾರಿ ಟಿಕೆಟ್ ಕೊಟ್ಟು ಎರಡು ಬಾರಿ ಅವರು ಗೆದ್ದಾಗ ಎರಡೂ ಸಲ ಅವರನ್ನು ಮಂತ್ರಿಯನ್ನಾಗಿ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 920 ಕೋಟಿ ರೂ. ಅನುದಾನ ನೀಡಿದ್ದಾರೆ. ಆ ಅನುದಾನದಲ್ಲಿ ಅವರು ಯಾವ ರೀತಿಯ ಅಭಿವೃದ್ಧಿ ಮಾಡಿದ್ದಾರೆ ಅನ್ನೋದು ನಾವು ಪ್ರಚಾರಕ್ಕೆ ಬಂದಾಗ ತಿಳಿಯಿತು ಎಂದು ಪ್ರಜ್ವಲ್ ರೇವಣ್ಣ ಕಿಡಿ ಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com