ಹಾನಗಲ್ ಉಪ ಚುನಾವಣೆಗೆ ಇನ್ನು 6 ದಿನ ಬಾಕಿ: ಘಟನಾನುಘಟಿ ನಾಯಕರ ತೀವ್ರ ಪ್ರಚಾರ, ಪರಸ್ಪರ ಟೀಕೆ
ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿಯಷ್ಟೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರು ಕೊನೆಯ ಸುತ್ತುಗಳ ತೀವ್ರ ಪ್ರಚಾರ ನಡೆಸಲು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ.
Published: 24th October 2021 08:32 AM | Last Updated: 25th October 2021 01:25 PM | A+A A-

ನಿನ್ನೆ ಹಾನಗಲ್ ಕ್ಷೇತ್ರದಲ್ಲಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತೀವ್ರ ಪ್ರಚಾರ
ಹಾನಗಲ್: ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿಯಷ್ಟೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರು ಕೊನೆಯ ಸುತ್ತುಗಳ ತೀವ್ರ ಪ್ರಚಾರ ನಡೆಸಲು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾನಗಲ್ ಕೇಂದ್ರಿತವಾದ ಪ್ರಣಾಳಿಕೆಯನ್ನೇ ತಮ್ಮ ಪ್ರಚಾರದಲ್ಲಿ ಘೋಷಿಸಿದ್ದಾರೆ.
ಉದ್ಯೋಗ ಸೃಷ್ಟಿಗೆ ಹಾನಗಲ್ ಕ್ಷೇತ್ರದಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿರುವ ಬಿಜೆಪಿ ಇಲ್ಲಿ ಟ್ರಕ್ ಟರ್ಮಿನಲ್, ಬಸ್ ಟರ್ಮಿನಲ್, ಉತ್ತಮ ರಸ್ತೆಗಳು, ಪಾದಚಾರಿ ಮಾರ್ಗಗಳನ್ನು, ಜನರಿಗೆ ಜನೌಷಧಿ ಕೇಂದ್ರಗಳ ಸ್ಥಾಪನೆ, ಅಪರಾಧ ತಡೆಗೆ ಸಿಸಿಟಿವಿ ಕ್ಯಾಮರಾಗಳ ನಿಯೋಜನೆ, ಬಡ ನಿರ್ಗತಿಕರಿಗೆ ಜಮೀನು ಮತ್ತು ಇನ್ನೂ ಹಲವು ಘೋಷಣೆಗಳನ್ನು ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕ ಸೇರಿದಂತೆ ಹಾನಗಲ್ ಕ್ಷೇತ್ರವನ್ನು ನಿರ್ಲಕ್ಷಿಸಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ನಾಯಕರಿಗೆ ಅಲ್ಪಸಂಖ್ಯಾತರ ನೆನಪು ಆಗುತ್ತದೆ. ಅಲ್ಪಸಂಖ್ಯಾತರನ್ನು ಅವರು ರಕ್ಷಿಸುವುದಿಲ್ಲ. ಅಲ್ಪಸಂಖ್ಯಾತರ ರಕ್ಷಣೆಯಡಿಯಲ್ಲಿ ಕಾಂಗ್ರೆಸ್ ಇದೆ ಎಂದು ನಿನ್ನೆ ಪ್ರಚಾರ ವೇಳೆ ಸಿಎಂ ಬೊಮ್ಮಾಯಿ ಟೀಕಿಸಿದರು.
ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿ ಶ್ರೀನಿವಾಸ್ ವಿ ಮನೆ ತಾಲ್ಲೂಕಿನ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡು ಬರುತ್ತಿದೆ. ಅವರ ಸಹಾಯವನ್ನು ರಾಜಕೀಯಗೊಳಿಸಿದರೆ ಹಾಗಾದರೆ ಬಡವರಿಗೆ ಸಹಾಯ ಮಾಡುವುದು ಎಂದರೆ ಏನರ್ಥ ಎಂದು ಸಿಎಂ ಕಾಂಗ್ರೆಸ್ ನ್ನು ಪ್ರಶ್ನಿಸಿದರು.
ಈ ಮಧ್ಯೆ, ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು. ಐಟಿ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ದಾಳಿ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಬೆದರಿಕೆ ಹಾಕುತ್ತಿದೆ. ಹೀಗಾಗಿ ಯಡಿಯೂರಪ್ಪನವರು ಈಗ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರಷ್ಟೆ. ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಭವಿಷ್ಯವೂ ಇಲ್ಲ, ಬೆಲೆಯೂ ಇಲ್ಲ ಎಂದರು.
ಇನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಹಾನಗಲ್ ಗೆ ತಮ್ಮ ಅಭ್ಯರ್ಥಿ ನಿಯಾಜ್ ಶೇಖ್ ಪರ ಪ್ರಚಾರ ಮಾಡಲು ನಿನ್ನೆ ಬಂದಿದ್ದರು. 2015ರಲ್ಲಿ ರಾಜ್ಯದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ಮಾಡಿರಲಿಲ್ಲ. 2018ರಲ್ಲಿ ಮೈತ್ರಿ ಸರ್ಕಾರ ರಚಿಸಿದಾಗ ಕಾಂಗ್ರೆಸ್ ನನ್ನನ್ನು ಬಲವಂತವಾಗಿ ಸಿಎಂ ಮಾಡಿತು. ಆದರೆ ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ನನಗೆ ಬೆಂಬಲ ನೀಡಲಿಲ್ಲ. 2009ರ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಿದ್ದರಾಮಯ್ಯನವರು ಬಿಜೆಪಿಯಿಂದ ಹಣ ಪಡೆದಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದರು.