ಉಪ ಚುನಾವಣೆ ಪ್ರಚಾರದಲ್ಲಿ ಮುಖ್ಯಮಂತ್ರಿ, ಸಚಿವರು ಬ್ಯುಸಿ: ವಿಧಾನಸೌಧ ಕಾರಿಡಾರ್ ಬಿಕೋ ಬಿಕೋ!

ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಗೆ ಇನ್ನೂ ಕೇವಲ ನಾಲ್ಕು ದಿನ ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸುಮಾರು 20 ಸಚಿವರು ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿರುವುದರಿಂದ ವಿಧಾನಸೌಧದ ಕಾರಿಡಾರ್ ಖಾಲಿ ಖಾಲಿಯಾಗಿ ಬಿಕೋ ಎನ್ನುವಂತಿದೆ. 
ಜನರಿಲ್ಲದೆ ಬಿಕೋ ಎನ್ನುತ್ತಿರುವ ವಿಧಾನಸೌಧ ಕಾರಿಡಾರ್
ಜನರಿಲ್ಲದೆ ಬಿಕೋ ಎನ್ನುತ್ತಿರುವ ವಿಧಾನಸೌಧ ಕಾರಿಡಾರ್

ಬೆಂಗಳೂರು: ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಗೆ ಇನ್ನೂ ಕೇವಲ ನಾಲ್ಕು ದಿನ ಬಾಕಿ ಉಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸುಮಾರು 20 ಸಚಿವರು ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿರುವುದರಿಂದ ವಿಧಾನಸೌಧದ ಕಾರಿಡಾರ್ ಖಾಲಿ ಖಾಲಿಯಾಗಿ ಬಿಕೋ ಎನ್ನುವಂತಿದೆ. 

ಅಕ್ಟೋಬರ್ 30 ರಂದು  ಉಪ ಚುನಾವಣೆ ನಡೆಯಲಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎದುರಾಗಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಇಡೀ ಬಿಜೆಪಿ ರಾಜ್ಯ ನಾಯಕರು ಹಾನಗಲ್, ಸಿಂಧಗಿಯಲ್ಲಿ ಬಿಡಾರ ಹೂಡಿದ್ದಾರೆ. ಅಕ್ಟೋಬರ್ 28ರವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ.

ಆರ್.ಅಶೋಕ್ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಅವರಂತಹ ಕೆಲ ಸಚಿವರನ್ನು ಹೊರತುಪಡಿಸಿದರೆ 18 ರಿಂದ 20 ಸಚಿವರು ಉಭಯ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಡೆಗ್ಲೂರ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ನೆರೆಯ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. 

ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳದ ಕೆಲ ಸಚಿವರು ಬೆಂಗಳೂರಿನಲ್ಲಿ ಇಲ್ಲ. ಸಚಿವರು ವಿಧಾನಸೌಧದಲ್ಲಿ ಇರದೇ, ಆಡಳಿತ ಬಹುತೇಕವಾಗಿ ಸ್ಥಗಿತಗೊಂಡಿದೆ. ಸಚಿವರನ್ನು ನೋಡಲು ಬರುವ ಅನೇಕ ಜನರು ಸಚಿವರನ್ನು ಭೇಟಿಯಾಗದೆ ಹಿಂತಿರುಗುತ್ತಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಲು ಉತ್ತರ ಕನ್ನಡ ಜಿಲ್ಲೆ ಗೋಕಾರ್ಣದಿಂದ 87 ವರ್ಷದ ಶಂಕರ್ ರಾಮ ವಾರ್ನೆಕರ್ ಕಳೆದ ನಾಲ್ಕು ದಿನಗಳಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಆದರೆ, ಸಚಿವರ ಭೇಟಿ ಸಾಧ್ಯವಾಗಿಲ್ಲ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಚಿವ ಆರ್ .ಅಶೋಕ್, ತಾವು ಕೂಡಾ ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವುದಾಗಿ ತಿಳಿಸಿದರು. 

ಸಿಂಧಗಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಸಿಸಿ ಪಾಟೀಲ್, ವಿ. ಸೋಮಣ್ಣ, ಬೈರತಿ ಬಸವರಾಜ್, ಶಶಿಕಲಾ ಜೊಲ್ಲೆ, ಗೋವಿಂದ್ ಕಾರಜೋಳ, ಕೆ.ಎಸ್. ಈಶ್ವರಪ್ಪ ಪ್ರಚಾರದಲ್ಲಿ ತೊಡಗಿದರೆ, ಹಾನಗಲ್ ನಲ್ಲಿ ಶಿವರಾಮ್ ಹೆಬ್ಬಾರ್, ಎಸ್. ಟಿ. ಸೋಮಶೇಖರ್, ಮುನಿರತ್ನ, ಬಿ. ಸಿ. ಪಾಟೀಲ್, ಬಿ. ಶ್ರೀರಾಮುಲು, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಡಾ. ಕೆ. ಸುಧಾಕರ್ , ಮುರುಗೇಶ್ ನಿರಾಣಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. 

ಸಿಎಂ ಸೇರಿದಂತೆ ಇಡೀ ಸಂಪುಟ ಹಾನಗಲ್ ಹಾಗೂ ಸಿಂಧಗಿಯಲ್ಲಿ ಪ್ರಚಾರದಲ್ಲಿ ತೊಡಗಿರುವುದರಿಂದ ವಿಧಾನಸೌಧ ಲಾಕ್ ಆಗಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಚಾರ ಮಾತ್ರವಲ್ಲದೇ, ಸಚಿವರು ಪ್ರತಿ ಮೂರು ದಿನಗಳಿಗೆ ಒಮ್ಮೆ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರದ ಕೆಲಸಗಳಿಗೆ ಯಾವುದೇ ತೊಂದರೆಯಾಗಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಪ ಚುನಾವಣೆ ಸಂದರ್ಭದಲ್ಲಿ ಯಾವ ರೀತಿಯಲ್ಲಿ  ಸರ್ಕಾರವನ್ನು ನಡೆಸಿತ್ತು ಎಂಬುದು ಗೊತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com