ಸಿಎಂ ವೃತ್ತಿ ಜೀವನದ ಮೊದಲ ಚುನಾವಣೆ: ಕ್ಷೇತ್ರದಲ್ಲಿ ಬೀಡು ಬಿಟ್ಟ ಬೊಮ್ಮಾಯಿ, ಪ್ರತಿಷ್ಠೆಯಾಯಿತೇ ಉಪ ಚುನಾವಣೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಹೀಗಾಗಿ ಅವರಿಗೆ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಮಹತ್ವದ್ದಾಗಿದೆ.
ಸಿಎಂ ಬೊಮ್ಮಾಯಿ ಪ್ರಚಾರ
ಸಿಎಂ ಬೊಮ್ಮಾಯಿ ಪ್ರಚಾರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಹೀಗಾಗಿ ಅವರಿಗೆ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಮಹತ್ವದ್ದಾಗಿದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬೆಂಬಲಿತ ನಾಯಕರೊಂದಿಗೆ ಈ ಎರಡು ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದು, ಆ ಮೂಲಕ ಉಪಚುನಾವಣೆಯ ರಣಾಂಗಣದಲ್ಲಿ ಬೀಡು ಬಿಟ್ಟಿರುವ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಇವರಿಗಿದೆ. 1978ರಲ್ಲಿ ಚಿಕ್ಕಮಗಳೂರಿನಲ್ಲಿ ತಮ್ಮ ಸಚಿವ ಸಂಪುಟದ ಜತೆಗೂಡಿದ ದೇವರಾಜ್ ಅರಸ್ ಅವರು ಅಲ್ಲಿಯೇ ಬೀಡು ಬಿಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಅದೇ ಚುನಾವಣೆಯಲ್ಲಿ ಜನತಾ ಪಕ್ಷದ ನಾಯಕರು ಮತ್ತು ಜಾರ್ಜ್ ಫರ್ನಾಂಡಿಸ್ ಅವರಂತಹ ದಿಗ್ಗಜರು ತೀವ್ರ ಪ್ರಚಾರ ನಡೆಸಿದ್ದರಿಂದ ಅಂತಿಮವಾಗಿ, ಇಂದಿರಾ ಗಾಂಧಿ ಗೆದ್ದರು.

‘ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರು ತೀವ್ರ ಪ್ರಚಾರ ನಡೆಸಿದರೆ ಅಲೆ ಹೇಗೆ ತಿರುಗುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ’ ಎಂದು ಜನತಾ ಪರಿವಾರದ ಮಾಜಿ ಸಚಿವ ಎಂ.ರಘುಪತಿ ಹೇಳಿದ್ದಾರೆ. ದೇವರಾಜ್ ಅರಸು ಕೂಡ ನಾಲ್ಕು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಉಪಚುನಾವಣೆಗಾಗಿ ಬೀಡುಬಿಟ್ಟಿದ್ದರು, ಅದು ಮತ್ತೆ ಪ್ರಮುಖ ಕದನವಾಗಿತ್ತು. ಇದೀಗ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ, ಮುಖ್ಯಮಂತ್ರಿಗಳು ಸಂಕ್ಷಿಪ್ತ ಭೇಟಿಗಳನ್ನು ಮಾಡುತ್ತಾರೆ.  ರಾಮಕೃಷ್ಣ ಹೆಗಡೆ, ಜೆ ಎಚ್ ಪಟೇಲ್ ಮತ್ತು ಎಸ್‌ಎಂ ಕೃಷ್ಣ ಅವರು ಹೆಚ್ಚೆಂದರೆ ಒಂದು ಅಥವಾ ಎರಡು ದಿನ ಪ್ರಚಾರ ಮಾಡಿದ್ದರು. ಆದರೆ ಇತರೆ ಸಿಎಂಗಳು ಉಪ ಚುನಾವಣಾ ಕ್ಷೇತ್ರಗಳತ್ತ ಇಣುಕಿಯೂ ನೋಡಿರಲಿಲ್ಲ. ಈ ಹಿಂದೆ 'ಆಪರೇಷನ್ ಕಮಲ' ದಿಂದಾಗಿ ಅತ್ಯಧಿಕ ಉಪಚುನಾವಣೆ ಎದುರಿಸಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೂ ಕೂಡ ಬೊಮ್ಮಾಯಿ ಅವರಂತೆ ಯಾವ ಕ್ಷೇತ್ರದಲ್ಲಿಯೂ ಉಳಿದಿರಲಿಲ್ಲ ಎಂಬುದು ಗಮನಾರ್ಹ.

ವಿಮರ್ಶಕರು ಅದನ್ನು ಆತ್ಮವಿಶ್ವಾಸದ ಕೊರತೆ ಎಂದು ವ್ಯಾಖ್ಯಾನಿಸಿದರೆ, ಅವರ ಬೆಂಬಲಿಗರು ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಬಗ್ಗೆ ಬಿಜೆಪಿ ವಿಚಾರವಾದಿ ಡಾ.ವಾಮನ್‌ ಆಚಾರ್ಯ ಮಾತನಾಡಿದ್ದು, ‘ಮುಖ್ಯಮಂತ್ರಿಗಳು ಪಕ್ಕದ ಕ್ಷೇತ್ರವಾದ ಶಿಗ್ಗಾಂವಿಯವರು. ಅಲ್ಲದೆ, ಇದು ಅವರ ಮೊದಲ ಚುನಾವಣೆ, ಮತ್ತು ಬಹುಶಃ ಈ ಸರ್ಕಾರಕ್ಕೆ ಕೊನೆಯ ಉಪಚುನಾವಣೆ. ಆದ್ದರಿಂದ ಅವರು ಮುಂಭಾಗದಿಂದ ಮುನ್ನಡೆಸುವುದು ಒಳ್ಳೆಯದು. ಈ ಉಪಚುನಾವಣೆಗಳು ಪಕ್ಷದ ವರ್ಚಸ್ಸನ್ನು ಬಲಪಡಿಸಲು ಪ್ರಮುಖವಾಗಿವೆ. ಸಂಖ್ಯೆಗಳ ಪ್ರಕಾರ, ಇದು ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಅದಕ್ಕೆ ಉತ್ತೇಜನವನ್ನು ನೀಡುತ್ತದೆ. ಉಪಚುನಾವಣೆಗಳತ್ತ ಆಡಳಿತ ಪಕ್ಷ ಒಲವು ತೋರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುಂದಿನ ಚುನಾವಣೆಯಲ್ಲೂ ಬೊಮ್ಮಾಯಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರ ಪ್ರಚಾರ ತಂತ್ರದಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮೇಲ್ಮನೆ ಮಾಜಿ ಸಭಾಪತಿ ಡಿ ಎಚ್ ಶಂಕರ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ತದ್ವಿರುದ್ಧ ವೆಂಬಂತೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಆತ್ಮವಿಶ್ವಾಸದ ಕೊರತೆ ಟೀಕಿಸಿದ್ದಾರೆ. 'ಬೊಮ್ಮಾಯಿ ಅವರಿಗೆ ಆತ್ಮವಿಶ್ವಾಸವಿಲ್ಲ ಎಂದು ಇದು ತೋರಿಸುತ್ತದೆ. ನಾನು ಸಿಎಂ ಆಗಿದ್ದ ಕಾಲದಲ್ಲಿ 1993ರಲ್ಲಿ ಯಲಹಂಕದಲ್ಲಿ ಉಪಚುನಾವಣೆ ನಡೆದಿತ್ತು, ಒಂದೆರಡು ದಿನ ಅಲ್ಲಿದ್ದೆ ಮತ್ತು ಆ ಉಪಚುನಾವಣೆಯಲ್ಲಿ ಗೆದ್ದೆವು ಎಂದು ಹೇಳಿದ್ದಾರೆ.

ಹಾನಗಲ್ ಪ್ರಚಾರ: ಏರಿದ ಪ್ರಚಾರದ ಕಾವು, ಪರಸ್ಪರ ವಾಗ್ದಾಳಿ
ಹಾವೇರಿ: ಇನ್ನು ಇತ್ತ ಹಾನಗಲ್ ನಲ್ಲೂ ಪ್ರಚಾರದ ಕಾವು ಏರಿದ್ದು, ನಾಯಕರ ಪರಸ್ಪರ ವಾಗ್ದಾಳಿ ಮುಂದುವರೆದಿದೆ. ಏತನ್ಮಧ್ಯೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಸಿಎಂ ಬೊಮ್ಮಾಯಿ, 'ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷರು ಸ್ಥಾಪಿಸಿದ್ದು, ಒಡೆದು ಆಳುವ ನೀತಿ ಸೇರಿದಂತೆ ಬ್ರಿಟಿಷರ ಸಂಸ್ಕೃತಿಯನ್ನು ಅನುಸರಿಸುತ್ತಿದೆ ಎಂದು  ಹೇಳಿದರು. ಹಾನಗಲ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಜಾತಿ, ಸಮುದಾಯ, ಧರ್ಮಗಳನ್ನು ಒಡೆಯುತ್ತಿದೆ. ಅವರು ದಶಕಗಳಿಂದ ಡಿವೈಡ್ ಅಂಡ್ ರೂಲ್ ನೀತಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com