ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ: ಸಿಎಂ ಬೊಮ್ಮಾಯಿ

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಗೂ ಸಾಕಷ್ಟು ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿರುವ ಸಿಂಗದಿ ಮತ್ತು ಹಾನಗಲ್ ಉಪಚುನಾವಣೆಯ ಅಬ್ಬರದ ಪ್ರಚಾರಕ್ಕೆ ಬುಧವಾರ ಸಂಜೆ ತೆರೆಬಿದ್ದಿದ್ದು, ಕೊನೆಯ ದಿನವಾದ ಬುಧವಾರ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದರು.
ಹಾನಗಲ್ ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು
ಹಾನಗಲ್ ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು

ಹಾವೇರಿ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಗೂ ಸಾಕಷ್ಟು ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿರುವ ಸಿಂಗದಿ ಮತ್ತು ಹಾನಗಲ್ ಉಪಚುನಾವಣೆಯ ಅಬ್ಬರದ ಪ್ರಚಾರಕ್ಕೆ ಬುಧವಾರ ಸಂಜೆ ತೆರೆಬಿದ್ದಿದ್ದು, ಕೊನೆಯ ದಿನವಾದ ಬುಧವಾರ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದರು.

ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಅಲ್ಪಸಂಖ್ಯಾತರಿಗೂ ಕೂಡ ಕಾಂಗ್ರೆಸ್ ಅನ್ಯಾಯ ಮಾಡಿದೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಅಧಿಕಾರದ ಐದು ವರ್ಷ ಅವರನ್ನು ಕತ್ತಲ ಬಾವಿಯಲ್ಲಿಡುತ್ತಾರೆ. ನಂತರ ಮತ ಕೇಳುವ ಸಮಯಕ್ಕೆ ಹಗ್ಗ ಕೊಟ್ಟು ಅವರನ್ನು ಸೆಳೆದು ಓಟು ಪಡೆದು ಪುನಃ ಬಾವಿಗೆ ನೂಕುತ್ತಾರೆ. ಸಾರ್ವಜನಿಕರು ಜಾಗೃತರಾಗಿ ಕಾಂಗ್ರೆಸ್ ಸುಳ್ಳು ಕಂತೆಗೆ, ನೋಟಿನ ಚೀಲಕ್ಕೆ ತಿರಸ್ಕಾರ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ಬಂಧುಗಳು ಟೇಕನ್ ಫಾರ್ ಗ್ರಾಂಟೆಡ್ ಆಗದೇ ಜಾಗೃತರಾಗಬೇಕು. ಜಮೀರ್ ಅಹ್ಮದ್ ಗ್ರಾಮಕ್ಕೆ ಬಂದು ಸಾರ್ವಜನಿಕವಾಗಿ ಮತ ಕೇಳದೆ ಕೆಲವೇ ಕೆಲವರಿಗೆ ಮತ ಕೇಳಿದರು. ಅಲ್ಪಸಂಖ್ಯಾತರ ಮತಗಳು ಅವರ ಗುತ್ತಿಗೆ ಎಂದು ಕಾಂಗ್ರೆಸ್​​ನವರು ತಿಳಿದಿದ್ದಾರೆ. ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿರುವ ಅಲ್ಪಸಂಖ್ಯಾತ ಬಂಧುಗಳು ಜಾಗೃತರಾಗಬೇಕು. ಟೇಕನ್ ಫಾರ್ ಗ್ರಾಂಟೆಡ್ ಆಗದೇ, ನಿಮ್ಮ ಓಟಿನ ಮಹತ್ವ ತಿಳಿಸಿ, ಕಾಂಗ್ರೆಸ್ ನವರಿಗೆ ಒಮ್ಮೆ ಸರಿಯಾದ ಪಾಠ ಕಲಿಸಿ, ನಂತರವೇ ಅವರು ನಿಮ್ಮ ಬಗ್ಗೆ ಚಿಂತನೆ ಮಾಡುತ್ತಾರೆ. ನಿಮ್ಮ ಮತಗಳು ಕಾಂಗ್ರೆಸ್‌ನದ್ದೇ ಎಂಬ ಹುಂಬತನದಿಂದ ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ್ಯವಾಗಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮನ್ನು ಬಹಿರಂಗ ಚರ್ಚೆಗೆ ಕರೆಯುತ್ತಾರೆ. ನಮ್ಮ ಕೆಲಸ ಮಾತನಾಡುತ್ತದೆ. ಬಹಿರಂಗ ಚರ್ಚೆಗೆ ಕರೆಯುವ ಅವರು ಮೊದಲು ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಖುದ್ದಾಗಿ ಬಂದು ನೋಡಬೇಕು. ನಂತರ ನಾನು ಚರ್ಚೆಗೆ ಸಿದ್ಧ. ವಿಧಾನಸಭೆಯಲ್ಲಿನ ಅಖಾಡದಲ್ಲಿ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ.

ಹಾನಗಲ್ ತಾಲೂಕಿನ ಎಲ್ಲ ಸಮುದಾಯಗಳು ಇಂದು ಜಾಗೃತವಾಗಿದೆ. ತಮ್ಮ ಹಕ್ಕನ್ನು ಪಡೆಯುವ ಬಗೆಗೆ ಮುಖ್ಯವಾಹಿನಿಗೆ ಬರುವ ಜಾಗೃತಿ, ಸಾಮಾಜಿಕವಾಗಿ ಸಮೀಕರಣ ಆಗಿ ಭಾಜಪಗೆ ಒಲವನ್ನು ತೋರಿಸಿದ್ದಾರೆ. ಬಿಜೆಪಿಯ ಸುನಾಮಿ ಹಾನಗಲ್ ತಾಲೂಕಿನಲ್ಲಿ ಇದೆ. ಈ ಸುನಾಮಿಯಲ್ಲಿ ಕಾಂಗೆಸ್ ನೆಲಕಚ್ಚುತ್ತದೆ ಎನ್ನುವುದು ಸ್ಪಷ್ಟ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೂಡಲ ಗ್ರಾಮಕ್ಕೆ ಪ್ರವಾಹದಿಂದ ಶಾಶ್ವತ ಪರಿಹಾರ ಕೊಟ್ಟು ಒಂದು ನವ ಗ್ರಾಮವನ್ನು ಒದಗಿಸಲು ನಾವು ಬದ್ಧವಾಗಿದ್ದೇವೆ. ಹಾನಗಲ್ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ದವಾಗಿದ್ದೇವೆ. ಉದಾಸಿಯವರು ಹಾಕಿರುವ ಅಭಿವೃದ್ಧಿಯ ಭದ್ರ ಬುನಾದಿ ಹಾಕಿದ್ದು, ಹಾನಗಲ್‌ನ್ನು ಆದರ್ಶ ತಾಲ್ಲೂಕು ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.

ಈ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಇಲ್ಲಿನ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ನೀಡುವ ಮುಖಾಂತರ ಅಭಿವೃದ್ಧಿಯಲ್ಲಿ ಎಲ್ಲರಿಗೂ ಸಮಪಾಲು ನೀಡಲಾಗುವುದು. ಶಿವರಾಜ ಸಜ್ಜನರ ಅವರು ಉದಾಸಿಯವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ. ಅವರ ಅನುಭವದಿಂದ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕೆಂದು ಕೋರಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com