ಮೂಲೆಗುಂಪಾಗುವ ಆತಂಕ, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಟ: ರಾಜ್ಯಾದ್ಯಂತ ಬಿಎಸ್ ವೈ ಪ್ರವಾಸ; ಬಿಸಿ ಮುಟ್ಟಿಸುವ ತಂತ್ರ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ ಬೆನ್ನೆಲ್ಲೇ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
Published: 03rd September 2021 08:39 AM | Last Updated: 03rd September 2021 12:48 PM | A+A A-

ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ ಬೆನ್ನೆಲ್ಲೇ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
78 ವರ್ಷದ ಪ್ರಬಲ ಲಿಂಗಾಯತ ನಾಯಕ ಯಡಿಯೂರಪ್ಪ ಅವರು ಗಣೇಶ ಚತುರ್ಥಿ ನಂತರ ರಾಜ್ಯದ ಎಲ್ಲಾ ನಾಯಕರುಗಳ ಜೊತೆ ಚರ್ಚಿಸುವ ಸಾಧ್ಯತೆಯಿದೆ, 2022ರಲ್ಲಿ ಅಥವಾ ಈ ವರ್ಷದ ಅಂತ್ಯದಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆಯಿದೆ, ಹೀಗಾಗಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಶಾಸಕರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.
2023 ರ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಪ್ರಮುಖ ಉದ್ದೇಶ, ಅಧಿಕಾರದಿಂದ ಪದಚ್ಯುತಗೊಂಡಿದ್ದರೂ ಮತ್ತೆ ಕೆಲಸ ಮಾಡುವ ಮೂಲಕ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಎಸ್ ವೈ ಮುಂದಾಗಿದ್ದಾರೆ. ಹೀಗಾಗಿ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಪ್ರವಾಸ ಕೈಗೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಅಧಿವೇಶನ ಮುಗಿದ ನಂತರ ಪ್ರವಾಸ ಕೈಗೊಳ್ಳಲಿರುವ ಬಿಎಸ್ ಯಡಿಯೂರಪ್ಪ ಅವರಿಗೆ, ತಾವು ಇತ್ತೀಚೆಗೆ ಖರೀದಿಸಿರುವ 1 ಕೋಟಿ ರು ಮೌಲ್ಯದ ಟೊಯೋಟಾ ವೆಲ್ ಫೈರ್ ಐಷಾರಾಮಿ ಕಾರು ಉಪಯುಕ್ತವಾಗಲಿದೆ. ಯಡಿಯೂರಪ್ಪ, ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಿರುವ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಕೈಗೊಳ್ಳಲು ಯೋಜಿಸಿದ್ದಾರೆ. ಈ ಪ್ರವಾಸವು ಬಿಜೆಪಿಗೆ ಆಡಳಿತತ ವಿರೋಧಿ ಅಲೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಹಳೇಯ ಮೈಸೂರು ಪ್ರದೇಶದಲ್ಲಿ ಕೇಸರಿ ಪಕ್ಷದ ಹೆಜ್ಜೆಗುರುತನ್ನು ಬಲಪಡಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ವಿಧಾನಸಭೆ ಕ್ಷೇತ್ರಗಳನ್ನು ಮೂರು ಗುಂಪುಗಳಾಗಿ ಎ,ಬಿ, ಮತ್ತು ಸಿ ಎಂದು ವಿಂಗಡಿಸಿದೆ. ಎ ಅಂದರೆ ಸುಲಭವಾಗಿ ಗೆಲ್ಲುವ ಕ್ಷೇತ್ರ, ಬಿ ಎಂದರೆ ಸ್ಪರ್ಧಿಸಬಹುದಾದ ಕ್ಷೇತ್ರ ಮತ್ತು ಸಿ ಕ್ಷೇತ್ರದಲ್ಲಿ ಗೆಲ್ಲಲು ಹೆಚ್ಚಿನ ಪ್ರಯತ್ನ ಪಡಬೇಕು. ಹಳೇಯ ಮೈಸೂರು ಭಾಗದ ಹೆಚ್ಚಿನ ಕ್ಷೇತ್ರಗಳು ಸಿ ಕೆಟಗರಿಯಲ್ಲಿ ಬರುತ್ತವೆ.
ಕೆಆರ್ ಪೇಟೆ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಗೆಲುವು ಬಿಜೆಪಿಗೆ ನೈತಿಕ ಸ್ಥೈರ್ಯ ಹೆಚ್ಚಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಹೊರತಾಗಿ, ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆ, ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಗಳಿಗೂ ಯಡಿಯೂರಪ್ಪ ಪ್ರವಾಸ ಬಲ ತುಂಬುವ ಸಾಧ್ಯತೆಯಿದೆ.