ಅರಸು ರಸ್ತೆಯ ದರ್ಗಾ ಮೊದಲು ಬಂತಾ? ರಸ್ತೆ ಮೊದಲು ಬಂತಾ? ನಿಮ್ಮ ಧಮ್ಕಿಗೆ ಹೆದರಲ್ಲ, ನಾವೇನು ಬಳೆ ತೊಟ್ಟಿಲ್ಲ!
ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆಯುತ್ತಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸುವ ನೆಪದಲ್ಲಿ ಸಂಸದ ಪ್ರತಾಪ ಸಿಂಹ ಕೋಮುದ್ವೇಷ ಬಿತ್ತುತ್ತಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಟೀಕಿಸಿದರು.
Published: 10th September 2021 08:32 AM | Last Updated: 11th September 2021 01:08 PM | A+A A-

ತನ್ವೀರ್ ಸೇಠ್
ಮೈಸೂರು: ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆಯುತ್ತಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸುವ ನೆಪದಲ್ಲಿ ಸಂಸದ ಪ್ರತಾಪ ಸಿಂಹ ಕೋಮುದ್ವೇಷ ಬಿತ್ತುತ್ತಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾವ ಸಂದರ್ಭದಲ್ಲಿ, ಏನು ಮಾತನಾಡಬೇಕೆಂದು ತಿಳಿದಿರಬೇಕು. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದರೆ, ನಾವು ಯಾರೂ ಬಳೆ ತೊಟ್ಟು ಕುಳಿತುಕೊಂಡಿಲ್ಲ’ ಎಂದು ತಿರುಗೇಟು ನೀಡಿದರು.
ಪ್ರಚೋದನೆ ಕೊಡುವುದು ಯಾರಿಗೂ ಒಳ್ಳೆಯದಲ್ಲ. ಮೈಸೂರಿನ ಅರಸು ರಸ್ತೆಯ ದರ್ಗಾ ಮೊದಲು ಬಂತಾ? ರಸ್ತೆ ಮೊದಲು ಬಂತಾ..? ಆ ದರ್ಗಾ ಇದ್ದದ್ದು ಮನೆಯಲ್ಲಿ- ಬಳಿಕ ಅಲ್ಲಿ ರಸ್ತೆ ಆಗಿದೆ. ಸದ್ಯ ಅದು ಈಗ ಕೋರ್ಟ್‌ನಲ್ಲಿ ಇದೆ. ಇದನ್ನ ಕೋರ್ಟ್ ಬಗೆಹರಿಸುತ್ತೆ, ಇದರಲ್ಲಿ ರಾಜಕೀಯ ಬೇಡ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಕೋಮುಗಲಭೆ ಸೃಷ್ಟಿಸಿ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ಜನ ಈ ಕುತಂತ್ರದ ಬಗ್ಗೆ ಎಚ್ಚರದಿಂದಿರಬೇಕು’ ಎಂದರು. ಬುಧವಾರ ನಡೆದ ಮೈಸೂರು ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಪ್ರತಾಪ ಸಿಂಹ ಅವರು, ‘ಮೊದಲು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ತೆರವುಗೊಳಿಸಿ, ನಂತರ ದೇವಾಲಯಗಳನ್ನು ಮುಟ್ಟಿ’ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡಿದ್ದರು.