ಆಸ್ಕರ್ ಫರ್ನಾಂಡಿಸ್: ಮುಖದಲ್ಲಿ ಎಂದಿಗೂ ಮಂದಹಾಸ ಮಾಸದ ಸಂಸದೀಯಪಟು ಇನ್ನು ನೆನಪು ಮಾತ್ರ 

ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕರೆಯುತ್ತಿದ್ದುದು ಆಸ್ಕರ್ ಅಣ್ಣ ಎಂದೇ. ಮುಖದಲ್ಲಿ ಸದಾ ಹಸನ್ಮುಖಿ, ಯಾರೇ ಸಹಾಯ ಬಯಸಿ ಹೋದರೂ ಸುಲಭವಾಗಿ ಕೈಗೆ ಸಿಗುವ ರಾಜಕೀಯ ವ್ಯಕ್ತಿ.
ತಮ್ಮ ಪತ್ನಿ ಬ್ಲಾಸಂ ಫರ್ನಾಂಡಿಸ್ ಜೊತೆ ಆಸ್ಕರ್ ಫರ್ನಾಂಡಿಸ್(ಸಂಗ್ರಹ ಚಿತ್ರ)
ತಮ್ಮ ಪತ್ನಿ ಬ್ಲಾಸಂ ಫರ್ನಾಂಡಿಸ್ ಜೊತೆ ಆಸ್ಕರ್ ಫರ್ನಾಂಡಿಸ್(ಸಂಗ್ರಹ ಚಿತ್ರ)

ಉಡುಪಿ: ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕರೆಯುತ್ತಿದ್ದುದು ಆಸ್ಕರ್ ಅಣ್ಣ ಎಂದೇ. ಮುಖದಲ್ಲಿ ಸದಾ ಹಸನ್ಮುಖಿ, ಯಾರೇ ಸಹಾಯ ಬಯಸಿ ಹೋದರೂ ಸುಲಭವಾಗಿ ಕೈಗೆ ಸಿಗುವ ರಾಜಕೀಯ ವ್ಯಕ್ತಿ. ತಮ್ಮ 5 ದಶಕಗಳ ಸುದೀರ್ಘ ರಾಜಕೀಯ ವೃತ್ತಿಯಲ್ಲಿ ಅದು ಉಡುಪಿ ಪುರಸಭೆಯ ಸದಸ್ಯನಾಗಿ 1972ರಲ್ಲಿ ಆಯ್ಕೆಯಾದಲ್ಲಿಂದ ಕೇಂದ್ರದ ಸಚಿವರಾಗುವವರೆಗೂ ಎಂದಿಗೂ ತಮ್ಮ ತಾಳ್ಮೆಯನ್ನು ಕಳೆದುಕೊಂಡವರಲ್ಲ ಈ ಆಸ್ಕರ್ ಫರ್ನಾಂಡಿಸ್.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆಸ್ಕರ್ ಅವರ ಪತ್ನಿ ಬ್ಲಾಸಮ್‌ಗೆ ತಮ್ಮ ಸಂತಾಪ ಸಂದೇಶದಲ್ಲಿ, ಆಸ್ಕರ್ ಅವರ ನಿಧನ ತುಂಬಾ ದುಃಖವಾಗಿದೆ ಎಂದು ಹೇಳಿದ್ದಾರೆ. ಆಸ್ಕರ್ ಅವರು ಕರ್ನಾಟಕದ ಒಬ್ಬ ಎತ್ತರದ ಕಾಂಗ್ರೆಸ್ ನಾಯಕರಾಗಿದ್ದು, ಅವರು ಐದು ಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾದ ಕಾರಣ ಅವರ ಜನಪ್ರಿಯತೆ ಸಾಕಷ್ಟಿದೆ. ಅವರು ಪ್ರತಿಭಾವಂತ ನಾಯಕ ಮತ್ತು ದಕ್ಷ ಆಡಳಿತಗಾರರಾಗಿದ್ದು, ಯುಪಿಎ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ದೇಶಕ್ಕಾಗಿ ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು ಎಂದು ಹೇಳಿದ್ದಾರೆ.

ಗಾಂಧಿ ಕುಟುಂಬಕ್ಕೆ ಹತ್ತಿರದವರು ಎಂದು ಪರಿಗಣಿಸಲ್ಪಟ್ಟ ಆಸ್ಕರ್ ಫರ್ನಾಂಡಿಸ್ ಅವರು ಕಾಂಗ್ರೆಸ್‌ನಲ್ಲಿ ಸ್ಥಾನಮಾನದಲ್ಲಿ ಉತ್ತುಂಗಕ್ಕೆ ಏರುತ್ತಾ ಹೋದರು. ಅವರು ತೆಗೆದುಕೊಳ್ಳುತ್ತಿದ್ದ ಪ್ರಮುಖ ರಾಜಕೀಯ ನಿರ್ಧಾರಗಳ ಬಗ್ಗೆ ಯಾವಾಗಲೂ ಸಮಾಲೋಚನೆ ನಡೆಸುತ್ತಿದ್ದರು. 1980ರಲ್ಲಿ, ಉಡುಪಿ ಲೋಕಸಭಾ ಸ್ಥಾನವನ್ನು ಗೆದ್ದ ಬಳಿಕ ಅವರ ಗೆಲುವಿನ ಅಭಿಯಾನ ಸಾಗುತ್ತಲೇ ಹೋಯಿತು. 1985, 1990, 1994 ಮತ್ತು 1998 ರಲ್ಲಿ ಕೂಡ ಲೋಕಸಭೆಗೆ ಆಯ್ಕೆಯಾದರು. ಅವರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರು. ಸಂಸತ್ತಿನಲ್ಲಿ ಚರ್ಚೆಗೆ ಹೆಚ್ಚು ಗಂಭೀರತೆಯನ್ನು ನೀಡುತ್ತಿದ್ದರು.

ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಯುಪಿಎ ಆಡಳಿತಾವಧಿಯಲ್ಲಿ ಎರಡು ಬಾರಿ ಸಚಿವರಾಗಿದ್ದರು. ವಿವಿಧ ಸಂಸದೀಯ ಸಮಿತಿಗಳ ನೇತೃತ್ವ ವಹಿಸಿದ್ದರು. ಕೇಂದ್ರ ಸರ್ಕಾರದ ವಿಮಾ ಯೋಜನೆ ಮತ್ತು ಜನಪ್ರಿಯ ನರೇಗಾ ಪರಿಕಲ್ಪನೆಗೆ ಅವರ ಕೊಡುಗೆಗಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. 1983ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಮತ್ತು 1987ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡರು. 1992ರಲ್ಲಿ ಕೆಪಿಸಿಸಿ ಮುಖ್ಯಸ್ಥರಾಗಿ ಮರು ಆಯ್ಕೆಯಾದರು.

ಆಸ್ಕರ್ ಅವರು ತಮ್ಮ ರಾಜಕೀಯ ಜೀವನದ ಮಧ್ಯೆ ಹತ್ತು ಹಲವು ದೇಶಗಳನ್ನು ಸುತ್ತುತ್ತಿದ್ದರು. ರಷ್ಯಾ, ಯುಗೊಸ್ಲಾವಿಯ, ಸ್ಪೇನ್, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದ್ದರು. 1990ರ ದಶಕದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ, ಆಸ್ಕರ್ ಅವರು ದಾಖಲೆಯ ಪ್ರಮಾಣದ 1.43 ಲಕ್ಷ ಟನ್ ಕಬ್ಬನ್ನು ಹೊಡೆಸಿದ್ದರು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮೊಳಹಳ್ಳಿ ಜಯಶೀಲ ಶೆಟ್ಟಿ ನೆನಪಿಸಿಕೊಳ್ಳುತ್ತಾರೆ.

ಆಸ್ಕರ್ ಮಾರ್ಚ್ 27, 1941 ರಂದು ಶಿಕ್ಷಕ ರೋಕ್ ಫೆರ್ನಾಂಡಿಸ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಮ್ಯಾಜಿಸ್ಟ್ರೇಟ್ ಲಿಯೊನಿಸ್ಸಾ ಫೆರ್ನಾಂಡಿಸ್ ದಂಪತಿಗೆ ಜನಿಸಿದರು. ಅವರು ಸೇಂಟ್ ಸಿಸಿಲಿ ಶಾಲೆ, ಬೋರ್ಡ್ ಹೈಸ್ಕೂಲ್ ಮತ್ತು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಎರಡನೇ ವರ್ಷದ ಬಿಎ ಓದುತ್ತಿದ್ದಾಗ, ಅವರಿಗೆ ಎಲ್‌ಐಸಿಯಲ್ಲಿ ಕೆಲಸ ಸಿಕ್ಕಿತು, ಹೀಗಾಗಿ ಬಿ ಎ ಓದು ಸಂಪೂರ್ಣ ಮಾಡಿರಲಿಲ್ಲ.

ಅವರು ನೆಲ್ಸನ್ ಮಂಡೇಲಾ ಪ್ರಶಸ್ತಿಗೆ ಭಾಜನರಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಯೋಗ ಮಾಡುವುದು ಅವರಿಗೆ ಅಚ್ಚುಮೆಚ್ಚು ಅದನ್ನೆಂದೂ ಬಿಡುತ್ತಿರಲಿಲ್ಲ. ಕೃಷಿ ಮತ್ತು ಪಶುಸಂಗೋಪನೆಯಲ್ಲಿಯೂ ಆಸಕ್ತಿ ಹೊಂದಿದ್ದರು. ಹಾರ್ಮೊನಿಕಾ ನುಡಿಸುವುದೆಂದರೆ ಅವರಿಗೆ ಬಹಳ ಅಚ್ಚುಮೆಚ್ಚು. ಒಮ್ಮೆ ಶ್ರೀ ಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ವಾದ್ಯ ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಆಸ್ಕರ್ ಉಡುಪಿಯ ಅಷ್ಟ ಮಠಗಳ ಜೊತೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com