ವಿರೋಧ ಪಕ್ಷವನ್ನು ಹಗುರವಾಗಿ ಪರಿಗಣಿಸದಿರಿ: ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಮುಂದೆ ನಿರಂತರ ಚುನಾವಣೆಗಳು ಬರುತ್ತಿವೆ. ಪ್ರತಿಪಕ್ಷಗಳನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬೇಡಿ. ವಿರೋಧ ಪಕ್ಷಗಳು ಅವರದೇ ತಂತ್ರಗಾರಿಕೆ ಮಾಡುತ್ತಿದ್ದಾರೆಂದು ಪಕ್ಷದ ತಮ್ಮ ಸಹೋದ್ಯೋಗಿಗಳು ಹಾಗೂ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ. 
ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ

ದಾವಣಗೆರೆ: ಮುಂದೆ ನಿರಂತರ ಚುನಾವಣೆಗಳು ಬರುತ್ತಿವೆ. ಪ್ರತಿಪಕ್ಷಗಳನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬೇಡಿ. ವಿರೋಧ ಪಕ್ಷಗಳು ಅವರದೇ ತಂತ್ರಗಾರಿಕೆ ಮಾಡುತ್ತಿದ್ದಾರೆಂದು ಪಕ್ಷದ ತಮ್ಮ ಸಹೋದ್ಯೋಗಿಗಳು ಹಾಗೂ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ. 

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಅವರು, ಅನೇಕ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡುತ್ತಿದ್ದಾರೆ. ಹೀಗಾಗಿ, 140 ಸ್ಥಾನಗಳನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಎದ್ದು ಕುಳಿತಿರುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಪಕ್ಷ ಸಂಘಟನೆಗೆ ಯಡಿಯೂರಪ್ಪ ಪ್ರವಾಸಕ್ಕೆ ಒಬ್ಬನೇ ಹೋಗುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಯಡಿಯೂರಪ್ಪ ಪ್ರವಾಸ ಹೊರಟರೇ ಒಬ್ಬನೇ ಹೋಗ್ತಾನೇನು? ನಾನು ಪ್ರವಾಸ ಹೊರಟರೆ ಶಾಸಕರು, ಸಂಸದರು, ಕಾರ್ಯಕರ್ತರು ಎಲ್ಲರೂ ಬರ್ತಾರೆ. ನಾನು ಒಬ್ಬನೇ ಪ್ರವಾಸ ಹೊರಡುವ ಸ್ಥಿತಿ ಬಂದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಎದ್ದು ಕುಳಿತಿದೆ. ಹೀಗಾಗಿ ನಮ್ಮ ಸಂಘಟನೆ, ಶ್ರಮ, ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ನಮಗೆ ಕೇಂದ್ರದ ಲೋಕಸಭಾ ಚುನಾವಣೆ ಕಷ್ಟವಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಎದ್ದು ಕುಳಿತಿರುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.

ದಾವಣಗೆರೆಯಲ್ಲಿ ಯಾವತ್ತೇ ಕಾರ್ಯಕ್ರಮ ಮಾಡಿದರೂ 40ರಿಂದ 50 ಸಾವಿರ ಜನರು ಸೇರುತ್ತಿದ್ದರು. ವಿಧಾನಸಭೆಯಲ್ಲಿ ಒಬ್ಬರೇ ಇದ್ದಾಗಲೂ ಹಿಂತಿರುಗಿ ನೋಡಲಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಿದ ಪರಿಣಾಮವಾಗಿ ಇಂದು ನಾವು ಅಧಿಕಾರದಲ್ಲಿ ಇದ್ದೇವೆ. ವಿಶ್ವವೇ ಅಚ್ಚರಿಯಿಂದ ನೋಡುವ ನರೇಂದ್ರ ಮೋದಿ ನಾಯಕತ್ವ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ. ನರೇಂದ್ರ ಮೋದಿ ಯುಗ ಉತ್ಸವ ಕಾರ್ಯಕ್ರಮವನ್ನು ರಾಮದಾಸ್ ಮೈಸೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿದ್ದರು. ಇದೇ ತರದ ಕಾರ್ಯಕ್ರಮಗಳನ್ನು ರಾಜ್ಯದ ಉದ್ದಗಲಕ್ಕೂ ನಡೆಸಬೇಕು. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಸಂಘಟನೆ ಬಲ ಪಡಿಸಬೇಕು.

ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗದ ಮುಖಂಡರನ್ನು ಬಲಪಡಿಸಬೇಕು. ಪ್ರತಿ ಬೂತ್​ಗಳಲ್ಲಿ 20ರಿಂದ 25 ಮಹಿಳೆಯರ ತಂಡ, ಯುವಮೋರ್ಚಾ ತಂಡ ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು. ಈಗಿನಿಂದಲೇ ಸಂಘಟನೆ ಮಾಡಲು ಕಾರ್ಯತತ್ಪರರಾಗಬೇಕು. ರಾಜ್ಯದ ಚುನಾವಣೆ ಸುಲಭವಿಲ್ಲ. ಹಾನಗಲ್, ಸಿಂಧಗಿ ಉಪ ಚುನಾವಣೆ ಸುಲಭವಿಲ್ಲ. ಮಂದಿರ ಕೆಡವಿದ ಬಗ್ಗೆ ಚರ್ಚೆ ಆಗ್ತಿದೆ. ಯಾವುದೇ ಕಾರಣಕ್ಕೆ ಮಂದಿರ ಒಡೆಯಲು ಅವಕಾಶ ಕೊಡುವುದಿಲ್ಲ. ಈಗ ಇರುವ ಆದೇಶ ಸರಿ ಇಲ್ಲ ಅಂತ ಸುಪ್ರಿಂ ಕೋರ್ಟ್ ಗೆ ಮೊರೆ ಹೋಗೋದಕ್ಕೂ ತೀರ್ಮಾನ ಮಾಡಿದ್ದೇವೆ. ಕಾರ್ಯಕರ್ತರು ಯಾರೂ ಮನಸ್ಸಿಗೆ ನೋವು ಮಾಡಿಕೊಳ್ಳುವುದು ಬೇಡ. 25 ಎಂಎಲ್​ಸಿ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲಬೇಕಿದೆ. ಮುಂದಿನ ವರ್ಷ ಚುನಾವಣೆ ವರ್ಷವಾಗಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ನಮ್ಮ‌ ಶಾಸಕರನ್ನು ಸಂಪರ್ಕಿಸಲು ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ಒಂದಿಬ್ಬರು ಶಾಸಕರನ್ನು ಅವರು ಸಂಪರ್ಕ ಮಾಡಿದ್ದಾರೆ. ಡಿಕೆಶಿ ಈ ರೀತಿಯ ಯಾವುದೇ ಪ್ರಯತ್ನ ಮಾಡಿದರೂ ಯಾರೂ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗುವುದಿಲ್ಲ. ಹಾನಗಲ್, ಸಿಂಧಗಿ ಚುನಾವಣೆ ಸುಲಭವಲ್ಲ. ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಹೇಳಿದ್ದೇನಷ್ಟೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com