ಮೇಲ್ಮನೆಯಲ್ಲಿ ಮುಡಾ ವಿಚಾರವಾಗಿ ಪ್ರತಿಪಕ್ಷದಿಂದ ಗದ್ದಲ; ಕಲಾಪಕ್ಕೆ ಅಡ್ಡಿ

ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಡಾ ರೈತರು ಹಾಗೂ ಭೂ ಮಾಲೀಕರ ಜಮೀನು ಅಥವಾ ನಿವೇಶನಗಳನ್ನು ಬಳಸಿಕೊಂಡು ಪರಿಹಾರ ನೀಡದೆ ಅನ್ಯಾಯ ಮಾಡುತ್ತಿರುವ ವಿಚಾರವಾಗಿ ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಡಾ ರೈತರು ಹಾಗೂ ಭೂ ಮಾಲೀಕರ ಜಮೀನು ಅಥವಾ ನಿವೇಶನಗಳನ್ನು ಬಳಸಿಕೊಂಡು ಪರಿಹಾರ ನೀಡದೆ ಅನ್ಯಾಯ ಮಾಡುತ್ತಿರುವ ವಿಚಾರವಾಗಿ ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.

ಪ್ರಶ್ನಾ ಅವಧಿಯಲ್ಲಿ ಈ ಕುರಿತು ಶಾಸಕ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಈ ವೇಳೆ ಬಡಾವಣೆ ಅಭಿವೃದ್ಧಿಗಾಗಿ ಕೆಲವು ಪ್ರಕರಣಗಳಲ್ಲಿ ಪರಸ್ಪರ ಒಪ್ಪಂದದ ಅಡಿ ಭೂಮಿ ವಶಪಡಿಸಿಕೊಂಡು ಬಡಾವಣೆಗಳನ್ನು ನಿರ್ಮಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಉತ್ತರಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂ ಸ್ವಾಧೀನವಾಗದ ಪ್ರದೇಶಗಳನ್ನು ಬಳಸಿಕೊಂಡಿದ್ದಲ್ಲಿ, ಪರಿಹಾರ ನೀಡಲಾಗುತ್ತಿದೆ ಎಂದರು. ಆದರೆ ಸಚಿವರು ನೀಡಿರುವುದು ತಪ್ಪು ಉತ್ತರ. 10 ರಿಂದ 20 ವರ್ಷಗಳ ಹಿಂದೆ ರಸ್ತೆ ಮುಂತಾದ ಕಾರ್ಯಗಳಿಗೆ ಭೂ ಮಾಲೀಕರ ಅನುಮತಿಯಿಲ್ಲದೇ ಭೂಮಿ ಬಳಸಿಕೊಳ್ಳಲಾಗಿದೆ. ಸಾವಿರಾರು ರೈತರಿಗೆ ಅನ್ಯಾಯವಾಗಿದೆ ಎಂದು ಶಾಸಕ ಮರಿತಿಬ್ಬೇಗೌಡ ಹಾಗೂ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿರು.

ಒಂದು ಹಂತದಲ್ಲಿ ಮರಿತಿಬ್ಬೇಗೌಡ ಸಭಾಧ್ಯಕ್ಷರ ಪೀಠದ ಬಳಿ ಧಾವಿಸಿ ಮುಡಾದಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ಒದಗಿಸುವ ಕುರಿತು ಒತ್ತಾಯಿಸಿದರು. ಬಳಸಿಕೊಂಡಿರುವ ಭೂಮಿಯಷ್ಟು ಅಳತೆಯ ನಿವೇಶನಕ್ಕೆ ಮಾಲೀಕರು ಒತ್ತಾಯಿಸಿದರೂ ಸರ್ಕಾರ ನೀಡಿಲ್ಲ. ಪರಿಹಾರವಾಗಿ ಹಣವನ್ನೂ ನೀಡಿಲ್ಲ. ಪರಸ್ಪರ ಒಪ್ಪಂದ ಎಂದು ಹೇಳಾಗುತ್ತಿರುವುದಾಗಿ ಪ್ರತಿಪಕ್ಷ ಸದಸ್ಯರು ಆ‍ಕ್ಷೇಪಿಸಿದರು.

ಅನ್ಯಾಯವಾಗಿರುವ ರೈತರಿಗೆ ಖಂಡಿತ ಪರಿಹಾರ ಒದಗಿಸುವುದಾಗಿ ಸಚಿವರ ನೀಡಿದ ಉತ್ತರಕ್ಕೆ ಶಾಸಕರು ಕಿವಿಗೊಡದೆ ಕೆಲ ಕಾಲ ಗದ್ದಲ ಗಲಾಟೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಶ್ರೀಕಂಠೇಗೌಡ, ನಾರಾಯಣಸ್ವಾಮಿ, ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತಿತರರು ದನಿಗೂಡಿಸಿದರು. ಕಲಾಪ ಮುಗಿದ ಬಳಿಕ ಸಭೆ ನಡೆಸಿ, ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಸತ್ಯಾಂಶವಿದ್ದಲ್ಲಿ ಖಂಡಿತಾ ಪರಿಹಾರ ನೀಡಲಾಗುವುದು ಎಂದು ಸಚಿವರ ಆಶ್ವಾಸನೆ ನೀಡಿದರೂ ಸಾಕಷ್ಟು ಸಮಯ ಗದ್ದಲ ಮುಂದುವರಿಯಿತು.

ಸದನದಲ್ಲಿ ಕೂಗಾಟ ನಡೆಸದಂತೆ ಸಭಾಪತಿಯವರು ಹೇಳಿದರೂ ಕಿವಿಗೊಡದೆ ಮರಿತಿಬ್ಬೇಗೌಡರು ‘ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಹೇಳುವುದನ್ನು ಮುಂದುವರಿಸಿದರು. ಮುಡಾದಿಂದ ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ಖಂಡಿತ ಚರ್ಚಿಸಿ, ಮುಡಾ ಅಧಿಕಾರಿಗಳ ಸಭೆ ನಡೆಸಿ ನ್ಯಾಯ ಒದಗಿಸಲಾಗುವುದು ಎಂದು ಸಚಿವ ಬೈರತಿ ಬಸವರಾಜು ಅವರು ಮತ್ತೊಮ್ಮೆ ಆಶ್ವಾಸನೆ ನೀಡಿದ ನಂತರವೂ ಗದ್ದಲ ನಿಲ್ಲದಿದ್ದಾಗ ಸಭಾಪತಿಯವರು 10 ನಿಮಿಷ ಸದನವನ್ನು ಮುಂದೂಡಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com