ವಿಧಾನಸಭೆಯಲ್ಲಿ ರಾಷ್ಟ್ರಪತಿ, ರಾಜ್ಯಪಾಲರ ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ: ಡಿಕೆ ಶಿವಕುಮಾರ್

ಬಿಜೆಪಿ ಸರ್ಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಸುತ್ತಿರುವುದನ್ನು ಬಹಿಷ್ಕರಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌

ಬೆಂಗಳೂರು: ಬಿಜೆಪಿ ಸರ್ಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಸುತ್ತಿರುವುದನ್ನು ಬಹಿಷ್ಕರಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;ಸಂಸದೀಯ ವ್ಯವಸ್ಥೆಯ ಪ್ರಕಾರ ವಿಧಾನಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ನಿಯಮದಲ್ಲಿ ಅವಕಾಶವಿಲ್ಲ.ಅನೇಕ ಇತಿಹಾಸದ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಕೆಟ್ಟ ಪದ್ಧತಿ ಸೃಷ್ಟಿಸಲು ಹೊರಟಿದೆ ಎಂದು ದೂರಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಸೇರಿಸಿ ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದರು.

ಸಂಸದೀಯ ವ್ಯವಸ್ಥೆಯಲ್ಲಿ ಉಭಯ ಸದನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಆದರೂ ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಿದೆ.ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಆದ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದರು.

ಕಾರ್ಯಕ್ರಮ ವಿಚಾರವಾಗಿ ಸರ್ಕಾರ ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಮಾಡಿಲ್ಲ. ಆದರೂ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಈ ಸಭೆ ಮೂಲಕ ನಿಮ್ಮ ಸರ್ಕಾರದ ಅವಧಿಯಲ್ಲಿ ಸಂಸದೀಯ ಮೌಲ್ಯ ಕುಸಿಯುತ್ತಿದೆ ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ. ಈ ಕಾರ್ಯಕ್ರಮ ನಡೆಸುವುದಾದರೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ, ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ನಾವು ಸಲಹೆ ನೀಡಿದ್ದೆವು. ಸರ್ಕಾರ ಇದನ್ನು ಒಪ್ಪದೇ, ವಿಧಾನಸಭೆಯಲ್ಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದೆ ಎಂದರು.

ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಪಕ್ಷ ಚರ್ಚೆ ಮಾಡಿದೆ. ಈ ರೀತಿಯ ಕೆಟ್ಟ ಪದ್ಧತಿ ಆರಂಭಿಸುತ್ತಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

ವಿಧಾನಸಭೆಯನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸ್ಪೀಕರ್ ಅವರಿಗೆ ಗೌರವಯುತವಾಗಿ ಮನವಿ ಮಾಡಿದರೂ ಸ್ಪಂದಿಸದೆ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com