ಕರ್ನಾಟಕ ವಿಧಾನಸಭೆ ಚುನಾವಣೆ: '123 ಮಿಷನ್' ಘೋಷವಾಕ್ಯದೊಂದಿಗೆ ಜೆಡಿಎಸ್ ಸ್ಪರ್ಧೆ, ಮೂರು ಕ್ಷೇತ್ರಗಳಿಗೆ ಬದಲಿ ಅಭ್ಯರ್ಥಿಗಳ ಹುಡುಕಾಟ 

2023ರ ವಿಧಾನಸಭೆ ಚುನಾವಣೆಯಲ್ಲಿ 123 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಜೆಡಿಎಸ್ ಪಣತೊಟ್ಟಿದೆ.  ಜೆಡಿಎಸ್ ಎಲ್ಲಾ 224 ಕ್ಷೇತ್ರಗಳ ಮೇಲೆ ಗಮನಹರಿಸುವುದಿಲ್ಲ. ಗೆಲುವಿಗೆ ಸಾಧ್ಯತೆಯಿರುವ ಕ್ಷೇತ್ರಗಳ ಮೇಲೆ ಗಮನಹರಿಸಲಿದೆ. 20-25 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುತ್ತಿದೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ 123 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಜೆಡಿಎಸ್ ಪಣತೊಟ್ಟಿದೆ. 

ಈ ವರ್ಷದ ಆರಂಭದಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆಯಲ್ಲಿ 294 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಎ(ಸುಲಭವಾಗಿ ಗೆಲುವು ಸಾಧಿಸಬಹುದಾದ ಕ್ಷೇತ್ರ), ಬಿ(ಸ್ಪರ್ಧಿಸುವ ಕ್ಷೇತ್ರ) ಮತ್ತು ಸಿ(ಕಠಿಣ ಸ್ಪರ್ಧೆಯ ಕ್ಷೇತ್ರ) ಎಂದು ವಿಂಗಡಿಸಿತ್ತು. ರಾಜ್ಯದಲ್ಲಿ ಜೆಡಿಎಸ್ ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ಎ+ ವಿಭಾಗವನ್ನು ಸೇರಿಸಿದೆ. ಅದು ಜೆಡಿಎಸ್ ಅತ್ಯಂತ ಪ್ರಾಬಲ್ಯ ಹೊಂದಿರುವ ಮತ್ತು ಅತ್ಯುತ್ತಮ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರಗಳಾಗಿವೆ.

ಜೆಡಿಎಸ್, ರಾಮನಗರದ ಮಾಜಿ ಸಿಎಂ ಕುಮಾರಸ್ವಾಮಿಯವರ ಫಾರ್ಮ್ ಹೌಸ್ ಕೇತಗಾನಹಳ್ಳಿಯಲ್ಲಿ ನಿನ್ನೆಯಿಂದ ಹಮ್ಮಿಕೊಂಡಿರುವ 4 ದಿನಗಳ ಜನತಾ ಪರ್ವ 1.0 ಕಾರ್ಯಾಗಾರದಲ್ಲಿ ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸಲಾಗಿದೆ. ಪಕ್ಷದ 'ಮಿಷನ್ 123' ಅಭಿಯಾನದ ಭಾಗವಾಗಿದೆ ಈ ಕಾರ್ಯಾಗಾರ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಕೆ ಶ್ರೀನಿವಾಸ್ ಗೌಡ ಅವರು ಪಕ್ಷದಲ್ಲಿ ಬಂಡಾಯವೆದ್ದು ಪಕ್ಷ ತೊರೆದು ಹೋಗುವ ಸಂದರ್ಭದಲ್ಲಿ ಜೆಡಿಎಸ್ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ. ನಿರೀಕ್ಷೆಯಂತೆ ಈ ಮೂವರು ನಿನ್ನೆಯ ಕಾರ್ಯಾಗಾರಕ್ಕೆ ಹಾಜರಾಗಿಲ್ಲ.

ಮಿಷನ್ 272 ಘೋಷವಾಕ್ಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಅದೇ ಪರಿಕಲ್ಪನೆಯಲ್ಲಿ ನಾವು ಮಿಷನ್ 123 ಘೋಷವಾಕ್ಯದೊಂದಿಗೆ 2023ರ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಜೆಡಿಎಸ್ ಎಲ್ಲಾ 224 ಕ್ಷೇತ್ರಗಳ ಮೇಲೆ ಗಮನಹರಿಸುವುದಿಲ್ಲ. ಗೆಲುವಿಗೆ ಸಾಧ್ಯತೆಯಿರುವ ಕ್ಷೇತ್ರಗಳ ಮೇಲೆ ಗಮನಹರಿಸಲಿದೆ. 20-25 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುತ್ತಿದ್ದೇವೆ ಎಂದರು.

ಗುಬ್ಬಿ, ಕೋಲಾರ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಿಗೆ ಜೆಡಿಎಸ್ ಬದಲಿ ಅಭ್ಯರ್ಥಿಗಳ ಹುಡುಕಾಟವನ್ನು ಈಗಾಗಲೇ ನಡೆಸುತ್ತಿದೆ ಎಂದು ಜೆಡಿಎಸ್ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. ಹೆಚ್ ಡಿ ಕುಮಾರಸ್ವಾಮಿಯವರ ಮನಸ್ಸಿನಲ್ಲಿ ಈಗಾಗಲೇ ಕೆಲವು ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಮ್ಮ ಕೆಲವು ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. 2018ರಲ್ಲಿ ಎರಡನೇ ಸ್ಥಾನ ಗಳಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳ ಜೊತೆ ಕೂಡ ಸಂಪರ್ಕದಲ್ಲಿದೆ. ಆದರೆ ನನಗೆ ಏನೂ ಆತಂಕವಿಲ್ಲ, ಕಾಂಗ್ರೆಸ್ ಗೆ ಹೋಗಲು ಒಂದು ಕಾಲು ಆಚೆ ಇಟ್ಟಿರುವಂತಹ ನಾಯಕರನ್ನು ನಾನು ಕಾರ್ಯಾಗಾರಕ್ಕೆ ಕರೆದಿಲ್ಲ ಎಂದರು. 

ಜೆಡಿಎಸ್ ನ್ನು ಪದೇ ಪದೇ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾರಿಂದಲೂ ನಮ್ಮ ಪಕ್ಷವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ಬಗ್ಗೆ ನಾವು ಮೃದು ಧೋರಣೆ ಹೊಂದಿದ್ದೇವೆ, ಅವರ ಜೊತೆ ಕೈಜೋಡಿಸುತ್ತೇವೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಅಂತಹ ಟೀಕಾಕಾರರಿಗೆ ನಾವು 2023ರ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ನಿನ್ನೆ ಕಾರ್ಯಾಗಾರದ ನಂತರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

ಮಾಯಕೊಂಡದ 2018ರ ಸ್ವತಂತ್ರ ಪರಾಭವಿ ಅಭ್ಯರ್ಥಿ ಆನಂದಯ್ಯ ಸೇರಿದಂತೆ ಹಲವು ಅಭ್ಯರ್ಥಿಗಳನ್ನು ಜೆಡಿಎಸ್ ನತ್ತ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಜೆಡಿಎಸ್ ತೊರೆಯುವುದಿಲ್ಲ: ಇನ್ನು ನಿನ್ನೆ ಹಾಸನದಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಕೆ ಎಂ ಶಿವಲಿಂಗೇ ಗೌಡ, ಜೆಡಿಎಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ಹಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇರುವುದು ಹೌದು, ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಿಸಿಕೊಳ್ಳಲು ಅದನ್ನು ಬಳಸಿಕೊಳ್ಳುತ್ತೇನೆ ಎನ್ನುತ್ತಾರೆ.

ಆದರೆ ಸ್ಥಳೀಯ ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರು ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಶಿವಲಿಂಗೇಗೌಡ ಬಿಜೆಪಿ ಅಥವಾ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com