ಉಪಚುನಾವಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ: ಡಿಕೆ ಶಿವಕುಮಾರ್

ಮುಂಬರುವ ಸಿಂದಗಿ ಹಾಗೂ ಹಾನಗಲ್‌ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಮುಂಬರುವ ಸಿಂದಗಿ ಹಾಗೂ ಹಾನಗಲ್‌ ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. 

ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಂಬರುವ ಸಿಂದಗಿ ಹಾಗೂ ಹಾನಗಲ್‌ ಉಪ ಚುನಾವಣೆ ಸಂಬಂಧ ಎಐಸಿಸಿ ಈಗಾಗಲೇ ಒಂದು ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ. ಮತ್ತೊಂದು ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಚರ್ಚಿಸಿ ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಂಡು ಪ್ರಕಟಿಸಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪದಾಧಿಕಾರಿಗಳ ನೇಮಕ ವಿಚಾರ ಕುರಿತು ಮಾತನಾಡಿದ ಅವರು, ಈಗಾಗಲೇ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಪದಾಧಿಕಾರಿಗಳ ಆಯ್ಕೆಯನ್ನು ಅದರದೇ ಆದ ಪ್ರತಿಕ್ರಿಯೆ ಮೂಲಕ ಮಾಡಬೇಕು. ಯಾರ ಸಾಮರ್ಥ್ಯ ಏನು? ಯಾರು ಯಾವ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕು. ಇವೆಲ್ಲವನ್ನೂ ಗಮನಿಸಿ ಆಯುಧ ಪೂಜೆ ಒಳಗೆ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ತಳಮಟ್ಟದಲ್ಲಿ ಇಳಿದು ಕೆಲಸ ಮಾಡುವ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ನಿರ್ದೇಶನ ಇದೆ. ಯುವಕರು ಎಂದರೆ ತೀರಾ ಚಿಕ್ಕವಯಸ್ಸಿನವರಲ್ಲ, ಅವರಿಗೆ ತಕ್ಕಮಟ್ಟಿಗೆ ಅನುಭವವೂ ಇರಬೇಕು. ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ಸದ್ಯದಲ್ಲೇ ಪದಾಧಿಕಾರಿಗಳ ಪಟ್ಟಿಅಂತಿಮಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಆಯ್ಕೆ ಬಾಕಿ ಇರುವ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷ ಯಾರಿಗೆ ಟಿಕೇಟ್‌ ನೀಡಿತ್ತೋ ಅವರು ಚುನಾವಣೆ ನಂತರವೂ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಈ ಬಗ್ಗೆ ನಾನು ಬೆಂಗಳೂರಿಗೆ ಮರಳಿದ ಬಳಿಕ ನಾಯಕರೊಂದಿಗೆ ಚರ್ಚಿಸಿ, ಅಂತಿಮ ಹೆಸರುಗಳನ್ನು ಪರಿಶೀಲಿಸಲಾಗುವುದು. ಆದರೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಹೈಕಮಾಂಡ್‌ ಮಾಡುತ್ತದೆ ಎಂದರು.

ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ಸಿದ್ದರಾಮಯ್ಯ ಅವರ ಹೇಳಿಕೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್‌ ಪಕ್ಷವೇ ಒಂದು ಕುಟುಂಬ. ನಮ್ಮ ಕುಟುಂಬದಲ್ಲಿ ಯಾವುದೇ ಕಲಹ ಇಲ್ಲ. ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ… ಗಾಂಧಿ ಅವರು ಏನು ಹೇಳುತ್ತಾರೋ ಅದೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.

ನಾನು 224 ಶಾಸಕರ ಜತೆಗೂ ಮಾತನಾಡುತ್ತೇನೆ. ಯಾರ ಜತೆಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ಜೆಡಿಎಸ್​ನಿಂದ ಯಾರೆಲ್ಲ ಬರಲು ಸಿದ್ಧರಿದ್ದಾರೆ ಎಂಬ ಮಾಹಿತಿ ಬಹರಂಗಪಡಿಸಲು ಸಾಧ್ಯವಿಲ್ಲ. ರಾಜಕೀಯ ಸಂಪರ್ಕದ ವಿಚಾರ ಮಾಧ್ಯಮಗಳ ಮುಂದೆ ಮಾತನಾಡುವಂತದ್ದಲ್ಲ. ಜೆಡಿಎಸ್​ನದ್ದು ಮಿಷನ್ 123, ಬಿಜೆಪಿಯವರದ್ದು ಮಿಷನ್ 150. ಆದರೆ, ನಮ್ಮದು ಮಿಷನ್ 224 ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com