ಟಿಕೆಟ್ ಪಡೆಯಲು ನಮಗೂ ಗಂಡಸುತನ ಇದೆ: ಮಾಜಿ ಸಚಿವ ಮನೋಹರ್ ತಹಶೀಲ್ದಾರ್

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೈ ಅಭ್ಯರ್ಥಿಗಳು ನಾಮುಂದು ತಾಮುಂದು ಎನ್ನುತ್ತಿದ್ದು, ಮಾಜಿ ಸಚಿವ ಟಿಕೆಟ್ ಆಕಾಂಕ್ಷಿ ಮನೋಹರ್ ತಹಶೀಲ್ದಾರ್ ಒಂದು ಹೆಜ್ಜೆ ಮುಂದು ಹೋಗಿ ಗಂಡಸುತನದ ಬಗ್ಗೆ ಮಾತನಾಡಿದ್ದಾರೆ.
ಮನೋಹರ್ ತಹಶೀಲ್ದಾರ್
ಮನೋಹರ್ ತಹಶೀಲ್ದಾರ್

ಬೆಂಗಳೂರು: ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೈ ಅಭ್ಯರ್ಥಿಗಳು ನಾಮುಂದು ತಾಮುಂದು ಎನ್ನುತ್ತಿದ್ದು,ಮಾಜಿ ಸಚಿವ ಟಿಕೆಟ್ ಆಕಾಂಕ್ಷಿ ಮನೋಹರ್ ತಹಶೀಲ್ದಾರ್ ಒಂದು ಹೆಜ್ಜೆಮುಂದು ಹೋಗಿ ಗಂಡಸುತನದ ಬಗ್ಗೆ ಮಾತನಾಡಿದ್ದಾರೆ.

2018ರಲ್ಲಿ ಸ್ಪರ್ಧಿಸಿ ಸೋತಿದ್ದ ಮೇಲ್ಮನೆ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ಮಾನೆ ಮತ್ತೆ ಉಪಚುನಾವಣೆಗೆ ಟಿಕೆಟ್ ಕೇಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಮಾನೆ ವಿರುದ್ಧ ಮನೋಹರ್ ತಹಶೀಲ್ದಾರ್ ಕಿಡಿಕಾರಿದ್ದಾರೆ.

ಟಿಕೆಟ್‌ಗಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಬಲವಾದ ಒತ್ತಡ ಹೇರುತ್ತಿರುವ ತಹಶೀಲ್ದಾರ್,ಕುಮಾರಕೃಪಾದಲ್ಲಿ ಸಿದ್ದರಾಮಯ್ಯರನ್ನು ಬುಧವಾರ ಬೆಳಿಗ್ಗೆ ಭೇಟಿಯಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮಗೇಕೆ ಟಿಕೆಟ್ ಕೊಡುವುದಿಲ್ಲ?ನಮಗೆ ಯೋಗ್ಯತೆ ಇಲ್ಲವೇ? ನಮಗೆ ಅರ್ಹತೆ ಇಲ್ಲವೇ? ಗಂಡಸುತನ ಇಲ್ಲವೇ?ಎಂದು ಪ್ರಶ್ನಿಸಿ ಕಿಡಿಕಾರಿದರು.

ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಡಬಾರದು.ಮಾನೆಗೆ ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಮನೋಹರ್ ತಹಶೀಲ್ದಾರ್ ಸ್ಪಷ್ಟಪಡಿಸಿದರು.

ಮಾನೆ ಹಾನಗಲ್ ನವರಲ್ಲ, ಹೊರಗಿನವರು, ಸ್ಥಳೀಯರಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ.ಆದರೆ ಮಾನೆಗೆ ಕೊಟ್ಟರೆ ಕೆಲಸ ಮಾಡುವುದಿಲ್ಲ.ಮಾನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ.ಆದರೆ ಅವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲವೆಂದು ಮಾರ್ಮಿಕವಾಗಿ ನುಡಿದರು.

ಗೆಲ್ಲುವ ಅಭ್ಯರ್ಥಿ ನಾನೇ ಎಂದು ಹೇಳಿದ ಮನೋಹರ್ ತಹಶೀಲ್ದಾರ್, ನನಗೆ ಟಿಕೆಟ್ ಕೊಡಬೇಕೆಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಒತ್ತಾಯಿಸುವುದಾಗಿ ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಹೇಳಿದರು.

ಇನ್ನು ಹಾನಗಲ್‌ನಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಟಿಕೆಟ್‍ಗಾಗಿ ತೆರೆಮರೆಯಲ್ಲೇ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ ಜೊತೆಗೆ ಪ್ರಕಾಶಗೌಡ ಪಾಟೀಲ್, ಸೋಮಶೇಖರ ಕೋತಂಬ್ರಿ, ಬಿ.ಕೆ.ಮೋಹನಕುಮಾರ್ ಸೇರಿದಂತೆ ಹಲವರು ಟಿಕೆಟ್‍ಗಾಗಿ ಕಸರತ್ತು ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com