ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ, ಆರ್ ಎಸ್ ಎಸ್, ವಿ ಎಚ್ ಪಿ ಬಜರಂಗದಳ ಅಲ್ಲ: ಹೇಳಿಕೆ ನೀಡಲು ಕಲ್ಲಡ್ಕ ಪ್ರಭಾಕರ್ ಯಾರು?
ರಾಜ್ಯದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ ಬಗ್ಗೆ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಬಿಜೆಪಿ ನಾಯಕರೇಯಾದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತರಾಟೆ ತೆಗೆದುಕೊಂಡಿದ್ದಾರೆ.
Published: 01st April 2022 08:48 AM | Last Updated: 01st April 2022 08:48 AM | A+A A-

ಎಚ್.ವಿಶ್ವನಾಥ್
ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ ಬಗ್ಗೆ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಬಿಜೆಪಿ ನಾಯಕರೇಯಾದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತರಾಟೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಅಥವಾ ಭಜರಂಗದಳದ ಸರ್ಕಾರ ಅಲ್ಲ. ಕೆಲವು ಸಂಘಟನೆಗಳು ಸಂವಿಧಾನವನ್ನು ಮೀರಿ ವರ್ತಿಸುತ್ತಿವೆ ಎಂದು ಕಿಡಿ ಕಾರಿದ್ದಾರೆ.
ಗುರುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೆಚ್. ವಿಶ್ವನಾಥ್ ಅವರು. ನಾನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸರವಾಗಿದೆ.
ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತೇನೆ ನಿಜ. ಹಾಗಂತ ಈಗ ನಡೆಯುತ್ತಿರುವ ಈ ಕೋಮು ಸೌಹಾರ್ದ ಕದಡುವ ಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದಲ್ಲೀಗ ದೊಡ್ಡ, ದೊಡ್ಡ ನಾಯಕರೇ ಧರ್ಮ ಜಾತಿ ಆಧರದ ಮೇಲೆ ಮಾತನಾಡುತ್ತಿದ್ದಾರೆ. ನಾವು ಹೀಗೆ ಮಾತನಾಡಿದರೆ ಯುವ ಪೀಳಿಗೆಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬರದಿದ್ದು, ತಾವು ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಸಹಕಾರದಿಂದ ಅಧಿಕಾರಕ್ಕೆ ಬಂದಿದೆ. “ಈ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ನಮಗೂ ಪಾಲು ಇದೆ. ನಮ್ಮಲ್ಲಿ 17 ಮಂದಿ ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ್ದೇವು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಟಿಪ್ಪು ಸುಲ್ತಾನ್ ಒಂದು ಇತಿಹಾಸ. ಈ ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರುತ್ತಾರೆ ಟಿಪ್ಪು ಸುಲ್ತಾನ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಆಡಳಿತದ ವಿರುದ್ಧ ದ್ವನಿ ಎತ್ತಿದ್ದವರು ಅವರ ತೇಜೋವಧೆ ಸಲ್ಲದು ಎಂದ ವಿಶ್ವನಾಥ್ ಅವರು ಸದ್ಯ ದೇವಸ್ಥಾನ ಬಳಿ ಮುಸ್ಲಿಮರು ವ್ಯಾಪಾರ ಮಾಡಬೇಡಿ, ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಇವೆಲ್ಲವೂ ಸಮಾಜವನ್ನು ಘಾಸಿಗೊಳಿಸುತ್ತವೆ. ಕೆಲವು ಸಂಘಟನೆಗಳು ಸಂವಿಧಾನಕ್ಕಿಂತ ಮೀರಿ ವರ್ತಿಸುತ್ತಿವೆ. ಹದ್ದು ಮೀರಿ ವರ್ತಿಸುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹಕ್ಕೆ ಮಾಡುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿಯನ್ನು ಕಾಪಡಬೇಕು ಎಂದು ಒತ್ತಾಯಿಸಿದರು.