ಏ.5ಕ್ಕೆ ದೆಹಲಿಗೆ ಸಿಎಂ: ರಾಜ್ಯ ಬಜೆಟ್ ಕುರಿತು ವರಿಷ್ಠರಿಗೆ ವಿವರಿಸಲಿರುವ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 5 ರಂದು ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಬಿಜೆಪಿ ವರಿಷ್ಠರಿಗೆ ರಾಜ್ಯ ಬಜೆಟ್ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಿದ್ದಾರೆಂದು ತಿಳಿದುಬಂದಿದೆ.
Published: 04th April 2022 08:42 AM | Last Updated: 04th April 2022 01:17 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 5 ರಂದು ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಬಿಜೆಪಿ ವರಿಷ್ಠರಿಗೆ ರಾಜ್ಯ ಬಜೆಟ್ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಿದ್ದಾರೆಂದು ತಿಳಿದುಬಂದಿದೆ.
ದೆಹಲಿ ಭೇಟಿ ವೇಳೆ ಬೊಮ್ಮಾಯಿಯವರು ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರಾಮಲಾ ಸೀತಾರಾಮನ್ ಮತ್ತು ಅವರ ಕೇಂದ್ರದ ಇತರೆ ಸಚಿವರನ್ನು ಭೇಟಿ ಮಾಡಲಿದ್ದು, ಈ ವೇಳೆ ಬಿಜೆಪಿ ಸರ್ಕಾರದ ತಮ್ಮ ಚೊಚ್ಚಲ ಮತ್ತು ಪೂರ್ಣ ಪ್ರಮಾಣದ ಬಜೆಟ್ ಕುರಿತು ವಿವರಿಸಲಿದ್ದಾರೆಂದು ವರದಿಗಳು ತಿಳಿಸಿವೆ.
ಗುರುವಾರವಷ್ಟೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು. ಜೂನ್ 2022ರ ಬಳಿಕ ರಾಜ್ಯಗಳಿಗೆ ಜಿಎಸ್'ಟಿ ಪರಿಹಾರವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸುವಂತೆ ಕೋರಿದ್ದರು.
ಈ ನಡುವೆ ರಾಜ್ಯ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬೊಮ್ಮಾಯಿಯವರಿಗೆ ನೀಡಲಾಗಿದ್ದು, ಬೊಮ್ಮಾಯಿಯವರೂ ದೆಹಲಿಗೆ ಬೇಟಿ ನೀಡಿ, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.
ಭೇಟಿ ವೇಳೆ ಬೊಮ್ಮಾಯಿ ಅವರು, ತಮ್ಮ ಬಜೆಟ್ನ ಸಾರವನ್ನು ಮತ್ತು ಸರ್ಕಾರ ಮತ್ತು ಪಕ್ಷದ ಮೇಲೆ ಅದರ ಪರಿಣಾಮಗಳನ್ನು ರಾಷ್ಟ್ರೀಯ ನಾಯಕತ್ವಕ್ಕೆ ವಿವರಿಸಲಿದ್ದಾರೆ. ಇದೇ ವೇಳೆ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ನಾಯಕತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಬೊಮ್ಮಾಯಿಯವರು ಭೇಟಿ ಮಾಡಲಿದ್ದು, ಅಂತರಾಜ್ಯ ಜಲ ವಿವಾದಗಳ ಕುರಿತು ಸಭೆ ನಡೆಸುವ ಸಾಧ್ಯತೆಗಳಿವೆ. ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯವನ್ನು ಖಂಡಿಸಿ ಸರ್ವಾನುಮತದ ನಿರ್ಣಯವನ್ನು ಕೈಗೊಂಡಿರುವ ಕುರಿತಂತೆಯೂ ಮುಖ್ಯಮಂತ್ರಿಗಳು ವಿವರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಜೆಟ್ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಶೀಘ್ರದಲ್ಲಿಯೇ ಸಮಿತಿ ರಚನೆ: ಸಿಎಂ ಬೊಮ್ಮಾಯಿ
ಇದರಂತೆ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಅರಿವಿರುವ ಹಾಗೂ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನೂ ಬೊಮ್ಮಾಯಿಯವರು ಭೇಟಿ ಮಾಡುತ್ತಾರೆಯೇ ಎಂಬುದು ಕುತೂಹಲ ಸೃಷ್ಟಿಸಿದೆ.
ಸಿಎಂ ದಿಲ್ಲಿ ಪ್ರವಾಸದಲ್ಲಿ ವರಿಷ್ಠರ ಭೇಟಿ ವೇಳೆ ಸಂಪುಟ ಸರ್ಜರಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತಂತೆ ಬಿಜೆಪಿಯಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಕೆಲ ಪ್ರಭಾವಿಗಳು ವಿಸ್ತರಣೆ ಮೂಲಕವಾದರೂ ಸಂಪುಟದಲ್ಲಿಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದರೆ, ಇನ್ನೂ ಕೆಲವರು ಸಂಪುಟ ಪುನಾರಚನೆ ನಡೆಸಿ ಹೊಸಬರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಂಪುಟ ಸರ್ಜರಿ ಖಚಿತ ಎಂಬ ಮಾತುಗಳಿದ್ದು, ವರಿಷ್ಠರು ಸಿಎಂಗೆ ಯಾವ ರೀತಿಯ ಸಂದೇಶ ರವಾನಿಸಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬೊಮ್ಮಾಯಿ ಶ್ಲಾಘನೆ ಸಾಧ್ಯತೆ
ಈ ನಡುವೆ ಏಪ್ರಿಲ್ 16 ಮತ್ತು 17 ರಂದು ವಿಜಯನಗರದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಈ ವೇಳೆ ಪಕ್ಷದ ನಾಯಕರು ಬಜೆಟ್ ಕುರಿತು ಬೊಮ್ಮಾಯಿಯವರನ್ನು ಶ್ಲಾಘಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ನಿವಾಸದಲ್ಲಿ ನಡೆಯಲಿರುವ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉದ್ಘಾಟಿಸಲಿದ್ದಾರೆ.
ಆನಂದ್ ಸಿಂಗ್ ಅವರು ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದರು. ಇದೀಗ ಆನಂದ್ ಸಿಂಗ್ ಅವರ ನಿವಾಸದಲ್ಲಿಯೇ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯುತ್ತಿದ್ದು, ಈ ನಿಟ್ಟಿನಲ್ಲಿ ಸಿಂಗ್ ಅವರು ಪಕ್ಷವನ್ನು ತೊರೆಯುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗುತ್ತಿದೆ ಎನ್ನಲಾಗುತ್ತಿದೆ.